ಭುವನೇಶ್ವರ್, ಒಡಿಶಾ: ಒಡಿಶಾದ ಕಂಧಮಾಲ್ ಜಿಲ್ಲೆಯಲ್ಲಿ ಮಹಿಳಾ ಸಬ್ ಇನ್ಸ್ಪೆಕ್ಟರ್ಗೆ (ಎಸ್‌ಐ) ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಪೊಲೀಸ್ ಇನ್ಸ್‌ಪೆಕ್ಟರ್ ವಿರುದ್ಧ ಪ್ರಕರಣ ದಾಖಲಾಗಿದೆ. ಆರೋಪಿ ಪೊಲೀಸ್ ಅಧಿಕಾರಿಯನ್ನು ಫಿರಿಂಗಿಯಾ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಎಂದು ಗುರುತಿಸಲಾಗಿದೆ. ಮಹಿಳಾ ಸಬ್ ಇನ್ಸ್‌ಪೆಕ್ಟರ್ ಅವರ ಆರೋಪದ ಪ್ರಕಾರ, ಇನ್ಸ್‌ಪೆಕ್ಟರ್ ತನಗೆ ಲೈಂಗಿಕ ಕಿರುಕುಳ ನೀಡಿದ್ದರು. ನಾನು ಅವರ ವಿರುದ್ಧ 2019 ರಲ್ಲಿ ದೂರು ದಾಖಲಿಸಿದ್ದೆ. ಆದರೆ, ಆರೋಪಿ ಅಧಿಕಾರಿ ವಿರುದ್ಧ ಪ್ರಕರಣ ದಾಖಲಾಗದ ಕಾರಣ ಸಂಬಂಧಪಟ್ಟ ಉನ್ನತಾಧಿಕಾರಿಗಳಿಗೆ ಪತ್ರ ಬರೆದಿದ್ದೆ ಎಂದು ಸಂತ್ರಸ್ತೆ ಈ ಹಿಂದೆ ತಿಳಿಸಿದ್ದರು.
ಉನ್ನತ ಅಧಿಕಾರಿಗಳಿಂದ ನ್ಯಾಯವನ್ನು ಪಡೆಯಲು ವಿಫಲವಾದ ಬಳಿಕ ನಾನು ಘಟನೆಯ ಕುರಿತು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗವನ್ನು (NHRC) ಸಂಪರ್ಕಿಸಿದ್ದರು. ಈ ಘಟನೆ ಕುರಿತು ತನಿಖೆಯನ್ನು ಪ್ರಾರಂಭಿಸಿದ ನಂತರ ಫಿರಿಂಗಿಯಾ ಪೊಲೀಸ್ ಠಾಣೆಯ ಐಐಸಿ ವಿರುದ್ಧ ಪ್ರಕರಣ ದಾಖಲಿಸುವಂತೆ ಆಯೋಗವು ಒಡಿಶಾದ ಡಿಜಿಪಿಗೆ ಸೂಚಿಸಿತು. ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ (ಎನ್‌ಎಚ್‌ಆರ್‌ಸಿ) ನಿರ್ದೇಶನದ ಮೇರೆಗೆ ಆರೋಪಿ ಇನ್ಸ್‌ಪೆಕ್ಟರ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಒಡಿಶಾ ಪೊಲೀಸ್ ಮಹಾನಿರ್ದೇಶಕ (ಪ್ರಭಾರ) ಅರುಣ್ ಸಾರಂಗಿ ತಿಳಿಸಿದ್ದಾರೆ.
ಈ ಬಗ್ಗೆ ಪೊಲೀಸ್ ಮಹಾನಿರ್ದೇಶಕ ಅರುಣ್ ಸಾರಂಗಿ ಮಾತನಾಡಿ, “ಈ ಘಟನೆ 2019 ರಲ್ಲಿ ನಡೆದಿದೆ. ದೂರಿನ ಪ್ರಕಾರ, ಪೊಲೀಸ್ ಇನ್ಸ್‌ಪೆಕ್ಟರ್ ಸಂತ್ರಸ್ತೆಗೆ ಕೆಲಸದ ಸ್ಥಳದಲ್ಲಿ ಲೈಂಗಿಕ ಕಿರುಕುಳ ನೀಡಿದ್ದಾರೆ. ಈ ಬಗ್ಗೆ ಮಹಿಳಾ ಸಬ್ ಇನ್ಸ್‌ಪೆಕ್ಟರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಆದರೆ, ಈ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಸಂತ್ರಸ್ತೆ ನಂತರ ಎನ್‌ಎಚ್‌ಆರ್‌ಸಿಗೆ ಅರ್ಜಿ ಸಲ್ಲಿಸಿದರು, ನಂತರ ಪೊಲೀಸ್ ಇಲಾಖೆಯ ಆಂತರಿಕ ದೂರುಗಳ ಸಮಿತಿ ಮತ್ತು ಎನ್‌ಎಚ್‌ಆರ್‌ಸಿ ಸಮಿತಿಯು ಪ್ರಕರಣದ ತನಿಖೆ ನಡೆಸಿತು. ಸಂತ್ರಸ್ತೆಯ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸುವಂತೆ ಆಯೋಗ ಪೊಲೀಸರಿಗೆ ಸೂಚಿಸಿದೆ’’ ಎಂದು ಹೇಳಿದರು.
ಸದ್ಯ ಮಹಿಳಾ ಸಬ್ ಇನ್ಸ್ಪೆಕ್ಟರ್ಗೆ ಲೈಂಗಿಕ ಕಿರುಕುಳ ಪ್ರಕರಣಕ್ಕೆ ಸಂಬಂಧಿಸಿದಂತೆ ಒಡಿಶಾ ಕ್ರೈಂ ಬ್ರಾಂಚ್ ಡಿಎಸ್ಪಿ ಕಲ್ಪನಾ ಸಾಹು ನೇತೃತ್ವದಲ್ಲಿ ವಿಶೇಷ ತಂಡವನ್ನು ರಚಿಸಲಾಗಿದೆ. ಈಗಾಗಲೇ ಈ ತಂಡ ಆರೋಪಿ ಪೊಲೀಸ್ ಅಧಿಕಾರಿ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದೆ.