ಹೈದರಾಬಾದ್ (ತೆಲಂಗಾಣ): ಪ್ರಧಾನಿ ನರೇಂದ್ರ ಮೋದಿ ಮೀಸಲಾತಿಗೆ ವಿರುದ್ಧವಾಗಿದ್ದು, ಜನರ ಮೀಸಲಾತಿ ಕೋಟಾವನ್ನು ಕಸಿದುಕೊಳ್ಳಲು ಬಯಸುತ್ತಿದ್ದಾರೆ. ಮೋದಿಯವರು ಸಾರ್ವಜನಿಕ ವಲಯವನ್ನು ಖಾಸಗೀಕರಣಗೊಳಿಸಿದ್ದಾರೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದಾರೆ.
ತೆಲಂಗಾಣದ ಆದಿಲಾಬಾದ್ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಭಾನುವಾರ ಚುನಾವಣಾ ಪ್ರಚಾರ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಪ್ರಸ್ತುತ ಸಾರ್ವತ್ರಿಕ ಚುನಾವಣೆ ಎರಡು ಸಿದ್ಧಾಂತಗಳ ನಡುವೆ ನಡೆಯುತ್ತಿದೆ. ಇದರಲ್ಲಿ ಕಾಂಗ್ರೆಸ್ ಸಂವಿಧಾನವನ್ನು ರಕ್ಷಿಸಲು ಪ್ರಯತ್ನಿಸುತ್ತಿದೆ. ಮತ್ತೊಂದೆಡೆ, ಬಿಜೆಪಿ-ಆರ್‌ಎಸ್‌ಎಸ್ ಸಂವಿಧಾನ ಮತ್ತು ಜನರ ಹಕ್ಕುಗಳನ್ನು ಕೊನೆಗೊಳಿಸಲು ಪ್ರಯತ್ನಿಸುತ್ತಿದೆ ಎಂದರು.
ನರೇಂದ್ರ ಮೋದಿ ಜಿ ಮೀಸಲಾತಿಗೆ ವಿರುದ್ಧವಾಗಿದ್ದಾರೆ. ಅವರು ನಿಮ್ಮಿಂದ (ಜನರಿಂದ) ಮೀಸಲಾತಿಯನ್ನು ಕಸಿದುಕೊಳ್ಳಲು ಬಯಸುತ್ತಾರೆ. ದೇಶದ ಮುಂದಿರುವ ದೊಡ್ಡ ವಿಷಯವೆಂದರೆ ಮೀಸಲಾತಿ ಮಿತಿಯನ್ನು ಶೇ.50ಕ್ಕಿಂತ ಹೆಚ್ಚಿಸುವುದು. ಕಾಂಗ್ರೆಸ್ ಕೇಂದ್ರ ಸರ್ಕಾರ ಮೀಸಲಾತಿಯನ್ನು ಹೆಚ್ಚಿಸುತ್ತದೆ ಎಂದು ತನ್ನ ಪ್ರಣಾಳಿಕೆಯಲ್ಲಿ ಭರವಸೆ ನೀಡಿದೆ ಎಂದು ರಾಹುಲ್ ಹೇಳಿದರು.
ಮೋದಿಯವರು ಸಾರ್ವಜನಿಕ ವಲಯವನ್ನು ಖಾಸಗೀಕರಣಗೊಳಿಸಿದ್ದಾರೆ ಎಂದು ಆರೋಪಿಸಿದ ರಾಹುಲ್ ಗಾಂಧಿ, ಬಿಜೆಪಿ ನೇತೃತ್ವದ ಸರ್ಕಾರ ಜಾರಿಗೆ ತಂದಿರುವ ಗುತ್ತಿಗೆ ವ್ಯವಸ್ಥೆಯು ಮೀಸಲಾತಿಯನ್ನೇ ತೆಗೆದುಹಾಕುವಂತಿದೆ. ಆದರೆ, ನಾವು ಸರ್ಕಾರಿ ಕಚೇರಿಗಳು ಮತ್ತು ಸಾರ್ವಜನಿಕ ವಲಯಗಳಲ್ಲಿನ ಗುತ್ತಿಗೆ ವ್ಯವಸ್ಥೆಯನ್ನು ತೆಗೆದುಹಾಕುತ್ತೇವೆ. ಶಾಶ್ವತ ಉದ್ಯೋಗಗಳನ್ನು ಒದಗಿಸುತ್ತೇವೆ ಎಂದು ತಿಳಿಸಿದ್ದಾರೆ.
ಪ್ರಧಾನಿ ಮೋದಿ ಸುಮಾರು 22-25 ಶ್ರೀಮಂತರ 16 ಲಕ್ಷ ಕೋಟಿ ರೂಪಾಯಿಗಳ ಸಾಲ ಮನ್ನಾ ಮಾಡಿದ್ದಾರೆ. 16 ಲಕ್ಷ ಕೋಟಿ ಎಂದರೆ 24 ವರ್ಷಗಳ ಕಾಲ ನರೇಗಾ ಯೋಜನೆಯಡಿ ಒದಗಿಸುವ ಅನುದಾನವಾಗಿದೆ. ಇಷ್ಟೊಂದು ಹಣವನ್ನು ಮೋದಿ ಕೇವಲ 22 ಜನರಿಗೆ ಲಾಭ ಮಾಡಿಕೊಟ್ಟಿದ್ದಾರೆ. ಅಲ್ಲದೇ, 70 ಕೋಟಿ ಭಾರತೀಯರ ಬಳಿ ಇರುವಷ್ಟು ಹಣವು ಕೇವಲ 22 ಶ್ರೀಮಂತರ ಬಳಿ ಇದೆ ಎಂದರು.
ತೆಲಂಗಾಣದಲ್ಲಿ ಕಾಂಗ್ರೆಸ್ ಸರ್ಕಾರವು ಸರ್ಕಾರಿ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣದಂತಹ ಚುನಾವಣಾ ಭರವಸೆಗಳನ್ನು ಜಾರಿಗೆ ತಂದಿದೆ. ನಮ್ಮ ಪಕ್ಷವು ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ, ದೇಶಾದ್ಯಂತ ಇದೇ ರೀತಿಯ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸುತ್ತದೆ. ದೇಶದಲ್ಲಿರುವ ಬಡ ಕುಟುಂಬಗಳ ಪಟ್ಟಿ ಮಾಡಿ ಪ್ರತಿ ಕುಟುಂಬದ ಮಹಿಳೆಯ ಬ್ಯಾಂಕ್ ಖಾತೆಗೆ ವಾರ್ಷಿಕ ಒಂದು ಲಕ್ಷ ರೂಪಾಯಿ ಜಮೆ ಮಾಡಲಾಗುತ್ತದೆ ಎಂದು ತಿಳಿಸಿದರು.
ದೇಶದಲ್ಲಿ ಜಾತಿ ಗಣತಿ ಸಮೀಕ್ಷೆ ಮಾಡುತ್ತೇವೆ. ಹಿಂದುಳಿದ ವರ್ಗಗಳು, ದಲಿತರು, ಆದಿವಾಸಿಗಳು ಮತ್ತು ಬಡವರ ಬಳಿ ಎಷ್ಟು ಹಣವಿದೆ ಎಂಬುದನ್ನು ತಿಳಿಯುತ್ತೇವೆ. ಜಾತಿ ಗಣತಿ ನಂತರ ತೆಲಂಗಾಣ ಮತ್ತು ದೇಶದಲ್ಲಿ ಹೊಸ ರಾಜಕೀಯ ನಡೆಯಲಿದೆ. ಅಧಿಕಾರದಲ್ಲಿರುವ ಶ್ರೀಮಂತರ ಸರ್ಕಾರವನ್ನು ಕಿತ್ತೊಗೆದು ಬಡವರು, ರೈತರು, ದಲಿತರ ಸರ್ಕಾರವನ್ನು ಸ್ಥಾಪಿಸುತ್ತೇವೆ ಎಂದು ಕಾಂಗ್ರೆಸ್ ನಾಯಕ ಹೇಳಿದರು.
ಇದನ್ನೂ ಓದಿ: ಪಿಓಕೆ ಜನತೆ ಮುಂದೊಂದು ದಿನ ತಾವಾಗಿಯೇ ಭಾರತಕ್ಕೆ ಸೇರಲಿದ್ದಾರೆ: ರಕ್ಷಣಾ ಸಚಿವ ರಾಜನಾಥ್ ಸಿಂಗ್