ನವದೆಹಲಿ : ಜುಲೈ 8ರಿಂದ 10ರವರೆಗೆ ಪ್ರಧಾನಿ ನರೇಂದ್ರ ಮೋದಿ ರಷ್ಯಾ ಮತ್ತು ಆಸ್ಟ್ರಿಯಾಕ್ಕೆ ಅಧಿಕೃತ ಭೇಟಿ ನೀಡಲಿದ್ದಾರೆ ಎಂದು ವಿದೇಶಾಂಗ ಸಚಿವಾಲಯ ಗುರುವಾರ ತಿಳಿಸಿದೆ.
22ನೇ ಭಾರತ-ರಷ್ಯಾ ವಾರ್ಷಿಕ ಶೃಂಗಸಭೆಯಲ್ಲಿ ಭಾಗವಹಿಸಲು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರ ಆಹ್ವಾನದ ಮೇರೆಗೆ ಪ್ರಧಾನಮಂತ್ರಿ ಜುಲೈ 8 ಮತ್ತು 9ರಂದು ಮಾಸ್ಕೋಗೆ ಭೇಟಿ ನೀಡಲಿದ್ದಾರೆ. ಉಭಯ ದೇಶಗಳ ನಡುವಿನ ಸಂಬಂಧಗಳ ಬಗ್ಗೆ ನಾಯಕರು ಚರ್ಚಿಸಲಿದ್ದು, ಪರಸ್ಪರ ಹಿತಾಸಕ್ತಿಯ ಸಮಕಾಲೀನ ಪ್ರಾದೇಶಿಕ ಮತ್ತು ಜಾಗತಿಕ ವಿಷಯಗಳ ಬಗ್ಗೆ ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಳ್ಳಲಿದ್ದಾರೆ ಎಂದು ಸಚಿವಾಲಯ ಮಾಹಿತಿ ನೀಡಿದೆ.
2023ರ ಫೆಬ್ರವರಿಯಲ್ಲಿ ರಷ್ಯಾ-ಉಕ್ರೇನ್ ಯುದ್ಧ ಪ್ರಾರಂಭವಾದ ನಂತರ ಪ್ರಧಾನಿ ಮೋದಿ ಅವರು ಪುಟಿನ್ ಅವರೊಂದಿಗೆ ನಡೆಸುತ್ತಿರುವ ಮೊದಲ ಸಭೆ ಇದಾಗಿದೆ.
ಪ್ರಧಾನಮಂತ್ರಿಯವರು ಜುಲೈ 9ರಿಂದ 10ರವರೆಗೆ ಆಸ್ಟ್ರಿಯಾಕ್ಕೆ ಪ್ರಯಾಣ ಬೆಳೆಸಲಿದ್ದಾರೆ. 41 ವರ್ಷಗಳಲ್ಲಿ ಭಾರತದ ಪ್ರಧಾನಿಯೊಬ್ಬರು ಆಸ್ಟ್ರಿಯಾಕ್ಕೆ ಭೇಟಿ ನೀಡುತ್ತಿರುವುದು ಇದೇ ಮೊದಲು. ಆಸ್ಟ್ರಿಯಾ ಅಧ್ಯಕ್ಷ ಅಲೆಕ್ಸಾಂಡರ್ ವಾನ್ ಡೆರ್ ಬೆಲೆನ್ ಅವರನ್ನು ಮೋದಿ ಭೇಟಿ ಮಾಡಲಿದ್ದಾರೆ ಮತ್ತು ಆಸ್ಟ್ರಿಯಾದ ಚಾನ್ಸಲರ್ ಕಾರ್ಲ್ ನೆಹಮ್ಮರ್ ಅವರೊಂದಿಗೆ ಮಾತುಕತೆ ನಡೆಸಲಿದ್ದಾರೆ. ಪ್ರಧಾನಮಂತ್ರಿ ಮತ್ತು ಚಾನ್ಸಲರ್ ಕಾರ್ಲ್ ನೆಹಮ್ಮರ್ ಅವರು ಭಾರತ ಮತ್ತು ಆಸ್ಟ್ರಿಯಾದ ವಾಣಿಜ್ಯ ಮುಖಂಡರನ್ನುದ್ದೇಶಿಸಿ ಈ ಸಂದರ್ಭದಲ್ಲಿ ಭಾಷಣ ಮಾಡಲಿದ್ದಾರೆ. ಪ್ರಧಾನಮಂತ್ರಿಯವರು ಮಾಸ್ಕೋ ಮತ್ತು ವಿಯೆನ್ನಾದಲ್ಲಿ ಭಾರತೀಯ ಸಮುದಾಯದ ಸದಸ್ಯರೊಂದಿಗೆ ಕೂಡ ಸಂವಾದ ನಡೆಸಲಿದ್ದಾರೆ.
ಇದಕ್ಕೂ ಮುನ್ನ ಬುಧವಾರ ವಿದೇಶಾಂಗ ಸಚಿವ ಎಸ್.ಜೈಶಂಕರ್ ಅವರು ರಷ್ಯಾದ ವಿದೇಶಾಂಗ ಸಚಿವ ಸೆರ್ಗೆ ಲಾವ್ರೊವ್ ಅವರನ್ನು ಭೇಟಿಯಾಗಿದ್ದರು. ರಷ್ಯಾದ ಸೇನೆಗೆ ಸೇರಿ ಯುದ್ಧದಲ್ಲಿ ಹೋರಾಡುತ್ತಿರುವ ಭಾರತೀಯ ಪ್ರಜೆಗಳ ವಿಷಯವನ್ನು ಪ್ರಸ್ತಾಪಿಸಿದ ಜೈಶಂಕರ್, ಅವರನ್ನು ಸುರಕ್ಷಿತವಾಗಿ ಭಾರತಕ್ಕೆ ಮರಳಿಸುವಂತೆ ಒತ್ತಾಯಿಸಿದರು.
ರಷ್ಯಾ-ಉಕ್ರೇನ್ ಯುದ್ಧ ಪ್ರಾರಂಭವಾದಾಗಿನಿಂದ, ರಷ್ಯಾದ ಸೈನ್ಯದಲ್ಲಿ ಕೆಲಸ ಮಾಡುತ್ತಿರುವ ತನ್ನ ಪ್ರಜೆಗಳ ಸುರಕ್ಷತೆ ಮತ್ತು ವಾಪಸಾತಿಯನ್ನು ಖಚಿತಪಡಿಸಿಕೊಳ್ಳಲು ಭಾರತವು ರಷ್ಯಾದ ಮೇಲೆ ಒತ್ತಡ ಹೇರುತ್ತಿದೆ. ವರದಿಗಳ ಪ್ರಕಾರ, ಸುಮಾರು 200 ಭಾರತೀಯ ಪ್ರಜೆಗಳನ್ನು ರಷ್ಯಾದ ಮಿಲಿಟರಿಯಲ್ಲಿ ಭದ್ರತಾ ಸಹಾಯಕರಾಗಿ ನೇಮಕ ಮಾಡಿಕೊಳ್ಳಲಾಗಿದೆ. ಜೂನ್ ಮಧ್ಯದ ವೇಳೆಗೆ, ಯುದ್ಧದಲ್ಲಿ ನಾಲ್ಕು ಭಾರತೀಯ ಪ್ರಜೆಗಳು ಸಾವನ್ನಪ್ಪಿದ್ದಾರೆ ಎಂಬುದು ಸ್ಪಷ್ಟವಾಗಿದೆ ಎಂದು ವಿದೇಶಾಂಗ ಸಚಿವಾಲಯ (ಎಂಇಎ) ತಿಳಿಸಿದೆ.
ಇದನ್ನೂ ಓದಿ: 'ಪ್ರವಾಹ್' ನದಿ ಪ್ರಾಧಿಕಾರದಿಂದ 3 ದಿನ ಮಹಾದಾಯಿ ಜಲಾನಯನ ಪ್ರದೇಶಗಳ ಪರಿಶೀಲನೆ - Mahadayi Issue