ವಾರಣಾಸಿ (ಉತ್ತರ ಪ್ರದೇಶ): ನಮ್ಮ ದೇಶದಲ್ಲಿ ಜಾತಿಯ ಹೆಸರಿನಲ್ಲಿ ಪ್ರಚೋದನೆ ಮತ್ತು ಸಂಘರ್ಷದಲ್ಲಿ ಪ್ರತಿಪಕ್ಷಗಳ 'ಇಂಡಿಯಾ' ಮೈತ್ರಿಕೂಟದವರು ನಂಬಿಕೆ ಹೊಂದಿದ್ದಾರೆ. ದಲಿತರು ಮತ್ತು ವಂಚಿತರ ಅನುಕೂಲಕ್ಕಾಗಿ ರೂಪಿಸಿರುವ ಯೋಜನೆಗಳನ್ನು ಅವರು ವಿರೋಧಿಸುತ್ತಾರೆ. ಇದನ್ನು ಇಂದು ಪ್ರತಿಯೊಬ್ಬ ದಲಿತ ಮತ್ತು ಹಿಂದುಳಿದ ವ್ಯಕ್ತಿಯು ನೆನಪಿನಲ್ಲಿಟ್ಟುಕೊಳ್ಳಬೇಕು. ಬಡವರ ಕಲ್ಯಾಣದ ಹೆಸರಿನಲ್ಲಿ ಅವರು (ಪ್ರತಿಪಕ್ಷದವರು) ತಮ್ಮ ಪರಿವಾರಕ್ಕಾಗಿ ರಾಜಕೀಯ ಮಾಡುತ್ತಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ವಾಗ್ದಾಳಿ ನಡೆಸಿದ್ದಾರೆ.
ಉತ್ತರ ಪ್ರದೇಶದ ವಾರಣಾಸಿಯಲ್ಲಿ ಶುಕ್ರವಾರ ಸಂತ ರವಿದಾಸ್ ಅವರ 647ನೇ ಜಯಂತಿ ನಿಮಿತ್ತ ಅವರ ಪ್ರತಿಮೆ ಅನಾವರಣಗೊಳಿಸಿ, ಪುಷ್ಪ ನಮನ ಸಲ್ಲಿಸಿ ಮಾತನಾಡಿದ ಮೋದಿ, ಇಂದು ನಮ್ಮ ಸರ್ಕಾರ ಸಂತ ರವಿದಾಸ್ ಅವರ ಆಲೋಚನೆಗಳನ್ನು ಮುಂದಕ್ಕೆ ಕೊಂಡೊಯ್ಯುತ್ತಿದೆ. ಬಿಜೆಪಿ ಸರ್ಕಾರ ಎಲ್ಲರಿಗೂ ಸೇರಿದ್ದು, ಬಿಜೆಪಿ ಸರ್ಕಾರದ ಯೋಜನೆಗಳು ಕೂಡ ಎಲ್ಲರಿಗೂ ಸೇರಿವೆ. ಈ ಸಬ್ ಕಾ ಸಾಥ್, ಸಬ್ ಕಾ ವಿಕಾಸ್, ಸಬ್ ಕಾ ವಿಶ್ವಾಸ ಮತ್ತು ಸಬ್ ಕಾ ಪ್ರಯಾಸ ಮಂತ್ರವು 140 ಕೋಟಿ ದೇಶವಾಸಿಗಳೊಂದಿಗೆ ಸಂಪರ್ಕ ಸಾಧಿಸುವ ಮಂತ್ರವೂ ಆಗಿದೆ ಎಂದು ಹೇಳಿದರು.
ಇದನ್ನೂ ಓದಿ: ರಾತ್ರಿಯೇ ಶಿವಪುರ ಮಾರ್ಗ ಪರಿಶೀಲಿಸಿದ ಪ್ರಧಾನಿ ಮೋದಿ: ವಾರಾಣಸಿಯಲ್ಲಿ ಇಂದು ಹಲವು ಯೋಜನೆಗಳಿಗೆ ಚಾಲನೆ
ಕಳೆದ 10 ವರ್ಷಗಳಲ್ಲಿ ಅಭಿವೃದ್ಧಿಯಿಂದ ದೂರ ಉಳಿದಿದ್ದ ಜನರನ್ನು ಗಮನದಲ್ಲಿಟ್ಟುಕೊಂಡು ಕೆಲಸ ಮಾಡಲಾಗಿದೆ. ಈ ಮೊದಲು ಬಡವರನ್ನು ಕೊನೆಯವರು ಎಂದು ಪರಿಗಣಿಸಲಾಗುತ್ತಿತ್ತು. ಆದರೆ, ಇಂದು ಅವರಿಗಾಗಿಯೇ ದೊಡ್ಡ ಯೋಜನೆಗಳನ್ನು ರೂಪಿಸಲಾಗಿದೆ. ಇಲ್ಲಿ ಸಂಸದನಾಗಿ ಹಾಗೂ ಕಾಶಿಯ ಸಾರ್ವಜನಿಕ ಪ್ರತಿನಿಧಿಯಾಗಿ ನಿಮ್ಮ ಸೌಲಭ್ಯಗಳ ಬಗ್ಗೆ ವಿಶೇಷ ಕಾಳಜಿ ವಹಿಸುವುದು ನನ್ನ ವಿಶೇಷ ಜವಾಬ್ದಾರಿ ಎಂದು ತಿಳಿಸಿದರು.
ಇದೇ ವೇಳೆ, ಸಂತ ರವಿದಾಸ್ ಅವರ ಜನ್ಮದಿನದಂದು ಈ ಜವಾಬ್ದಾರಿಗಳನ್ನು ಪೂರೈಸಲು ನನಗೆ ಅವಕಾಶ ಸಿಕ್ಕಿರುವುದಕ್ಕೆ ನನಗೆ ಸಂತೋಷವಾಗಿದೆ. ಸಂತ ರವಿದಾಸ್ ಅವರು ಸ್ವಾತಂತ್ರ್ಯದ ಮಹತ್ವವನ್ನು ಸಮಾಜಕ್ಕೆ ಪ್ರಸ್ತುತಪಡಿಸಿದರು. ಜಾತಿ, ಅಸ್ಪೃಶ್ಯತೆ, ತಾರತಮ್ಯ ಇದೆಲ್ಲದರ ವಿರುದ್ಧ ಧ್ವನಿ ಎತ್ತಿದರು. ದೇಶಕ್ಕೆ ಅಗತ್ಯ ಬಿದ್ದಾಗಲೆಲ್ಲ ಯಾವುದೋ ಒಬ್ಬ ಸಂತರು, ಋಷಿಮುನಿಗಳು ಅಥವಾ ಮಹಾನ್ ವ್ಯಕ್ತಿಗಳು ಹುಟ್ಟಿ ಬಂದ ಇತಿಹಾಸ ಭಾರತಕ್ಕಿದೆ. ಸಂತ ರವಿದಾಸ್ ಅವರು ಭಕ್ತಿ ಚಳವಳಿಯ ಮಹಾನ್ ಸಂತರಾಗಿದ್ದರು. ಅವರು ದುರ್ಬಲ ವರ್ಗಕ್ಕೆ ಹೊಸ ಶಕ್ತಿಯನ್ನು ನೀಡಿದರು ಎಂದು ವಿವರಿಸಿದರು. ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಸೇರಿ ಹಲವರು ಉಪಸ್ಥಿತರಿದ್ದರು.
ಇದನ್ನೂ ಓದಿ: ರಾಮ ಮಂದಿರ ನಿರ್ಮಾಣದ ನಂತರವೂ ನಕಾರಾತ್ಮಕವಾಗಿ ಬದುಕುತ್ತಿದೆ: ಕಾಂಗ್ರೆಸ್ಗೆ ಪ್ರಧಾನಿ ಮೋದಿ ಕುಟುಕು