ರಾಯ್‌ಬರೇಲಿ (ಉತ್ತರ ಪ್ರದೇಶ): ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಸಂಪೂರ್ಣ ಸಂಪತ್ತನ್ನು ನಾಲ್ಕೈದು ಶ್ರೀಮಂತರಿಗೆ ನೀಡಿದ್ದಾರೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ದೂರಿದ್ದಾರೆ. ತಮ್ಮ ಸಹೋದರ ಹಾಗೂ ರಾಯ್‌ಬರೇಲಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಾಹುಲ್ ಗಾಂಧಿ ಅವರ ಪರ ಭಾನುವಾರ ಚುನಾವಣಾ ರ್‍ಯಾಲಿ ಉದ್ದೇಶಿಸಿ ಅವರು ಮಾತನಾಡಿದರು.
ಕಳೆದ 10 ವರ್ಷಗಳಿಂದ ನರೇಂದ್ರ ಮೋದಿ ವಾರಣಾಸಿಯ ಸಂಸದರಾಗಿದ್ದಾರೆ. ಆದರೆ ಅವರು ಯಾವುದೇ ಗ್ರಾಮಕ್ಕೆ ಭೇಟಿ ನೀಡಿಲ್ಲ ಮತ್ತು ಹೇಗೆ ಬದುಕುತ್ತಿದ್ದಾರೆ ಎಂದು ರೈತರನ್ನು ವಿಚಾರಿಸಿಲ್ಲ. ಖಾಸಗೀಕರಣವು ಕೆಟ್ಟದ್ದಲ್ಲ, ಆದರೆ ಪ್ರಧಾನಿಯವರು ದೇಶದ ಸಂಪೂರ್ಣ ಸಂಪತ್ತನ್ನು ನಾಲ್ಕೈದು ಶ್ರೀಮಂತರಿಗೆ ನೀಡಿದರೆ ಅದು ಸರಿಯಲ್ಲ. ಇಂದು ದೇಶದ ಕಲ್ಲಿದ್ದಲು, ವಿದ್ಯುತ್, ಬಂದರು ಮತ್ತು ವಿಮಾನ ನಿಲ್ದಾಣಗಳೆಲ್ಲವೂ ಪ್ರಧಾನಿಯವರ ಸ್ನೇಹಿತರ ಬಳಿಯೇ ಇವೆ ಎಂದು ಟೀಕಿಸಿದರು.
ಮಾಜಿ ಪ್ರಧಾನಿಗಳಾದ ರಾಜೀವ್ ಗಾಂಧಿ ಮತ್ತು ಇಂದಿರಾ ಗಾಂಧಿ ಅವರು ಹಳ್ಳಿಗಳಿಗೆ ಭೇಟಿ ನೀಡಿ ಜನರ ಸಮಸ್ಯೆಗಳನ್ನು ಆಲಿಸುತ್ತಿದ್ದರು. ಆದರೆ ನಮ್ಮ ಪ್ರಧಾನ ಮಂತ್ರಿಗಳು ದೊಡ್ಡ ದೊಡ್ಡ ಕಾರ್ಯಕ್ರಮಗಳನ್ನು ಆಯೋಜಿಸುತ್ತಾರೆ, ಅಲ್ಲಿ ನೀವು ಅನೇಕ ದೊಡ್ಡ ಬಂಡವಾಳಶಾಹಿಗಳನ್ನು ನೋಡುತ್ತೀರಿ. ಆದರೆ ಒಬ್ಬ ಬಡವನನ್ನೂ ಕಾಣುವುದಿಲ್ಲ ಎಂದು ಪ್ರಿಯಾಂಕಾ ವಾಗ್ದಾಳಿ ನಡೆಸಿದರು.
ಇದನ್ನೂ ಓದಿ: ಮುಂದಿನ 5 ವರ್ಷ ಮೋದಿಯೇ ಪ್ರಧಾನಿ: ಕೇಜ್ರಿವಾಲ್ '75ರ' ಹೇಳಿಕೆಗೆ ಅಮಿತ್ ಶಾ ಸ್ಪಷ್ಟನೆ - Amit Shah