ಕನ್ಯಾಕುಮಾರಿ (ತಮಿಳುನಾಡು): ಚುನಾವಣಾ ಪ್ರಚಾರ ಮುಗಿಸಿ ಗುರುವಾರ ಸಂಜೆಯಿಂದ ಧ್ಯಾನಕ್ಕೆ ಕುಳಿತಿರುವ ಮೋದಿ ಅವರು ಇಂದು ಅಂತಿಮ ದಿನದ ಧ್ಯಾನದಲ್ಲಿ ಮಗ್ನರಾಗಿದ್ದಾರೆ. ಇಲ್ಲಿನ ವಿವೇಕಾನಂದ ರಾಕ್ ಮೆಮೋರಿಯಲ್ನಲ್ಲಿ ಧ್ಯಾನ ಮಗ್ನರಾಗಿರುವ ಅವರು ಇಂದು ಬೆಳಗ್ಗೆ ಸೂರ್ಯ ಅರ್ಘ್ಯವನ್ನು ಅರ್ಪಿಸಿ, ಮತ್ತೆ ಧ್ಯಾನದಲ್ಲಿ ತಲ್ಲೀನರಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಧಾನಿ ಮೋದಿ ಅವರು ಮುಂಜಾನೆ ಸೂರ್ಯನಿಗೆ ಅರ್ಘವನ್ನು ಅರ್ಪಿಸಿದ್ದಾರೆ. ಸೂರ್ಯೋದಯ ಸಂದರ್ಭದಲ್ಲಿ ಸಣ್ಣ ಚೊಂಬಿನಲ್ಲಿ ಸಮುದ್ರದ ನೀರನ್ನು ಹಿಡಿದು ಸೂರ್ಯನಿಗೆ ಅರ್ಘ್ಯವನ್ನು ಅರ್ಪಿಸಿದರು. ಈ ಮೂಲಕ ಸಾಂಪ್ರದಾಯಿಕವಾಗಿ ಸರ್ವಶಕ್ತನ ರೂಪಕವಾಗಿರುವ ಸೂರ್ಯನ ಆರಾಧನ ಅಭ್ಯಾಸ ನಡೆಸಿದರು. ಇದಾದ ಬಳಿಕ ಜಪ ಮಾಲೆ ಹಿಡಿದು ಮತ್ತೆ ಅವರು ಧ್ಯಾನದಲ್ಲಿ ಮುಳುಗಿದರು ಎಂದು ತಿಳಿಸಿದ್ದಾರೆ.
ಸೂರ್ಯಅರ್ಘ್ಯದ ಬಳಿ ಅವರು ಕೇಸರಿ ಬಣ್ಣದ ಉಡುಪು ಧರಿಸಿ, ಸ್ವಾಮಿ ವಿವೇಕನಾಂದ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು. ಈ ವೇಳೆ ಕೈಯಲ್ಲಿ ಜಪ ಮಾಲೆ ಹಿಡಿದು, ಮಂಟಪವನ್ನು ಸುತ್ತು ಹಾಕಿದರು.
ಮೇ 30ರಂದು ಸಂಜೆ ಆರಂಭವಾದ 45 ಗಂಟೆಗಳ ಪ್ರಧಾನಿ ನರೇಂದ್ರ ಮೋದಿ ಅವರ ಧ್ಯಾನ ಇಂದು ಸಂಜೆ ಸೂರ್ಯಾಸ್ತದೊಂದಿಗೆ ಮುಕ್ತಾಯವಾಗಲಿದೆ. ಸ್ವಾಮಿ ವಿವೇಕಾನಂದರು ಭಾರತ ಮಾತೆಯ ದರ್ಶನ ಪಡೆದ ಸ್ಥಳ ಕನ್ಯಾಕುಮಾರಿ ಆಗಿದೆ. ಈ ಸ್ಥಳವೂ ಸೂರ್ಯೋದಯ ಮತ್ತು ಸೂರ್ಯಾಸ್ತಕ್ಕೆ ಹೆಸರಾಗಿದೆ. ಮೆಮೋರಿಯಲ್ ಇಲ್ಲಿನ ಸಮುದ್ರದ ಸಣ್ಣ ದ್ವೀಪದಲ್ಲಿ ನೆಲೆಗೊಂಡಿದೆ.
ಇದನ್ನೂ ಓದಿ: ಚುನಾವಣೆ ಪ್ರಚಾರ ಮುಗಿತು, ಧ್ಯಾನಾಸಕ್ತರಾದರು ಮೋದಿ: ಕನ್ಯಾಕುಮಾರಿಗೆ ಬಂದ ಪ್ರಧಾನಿಗೆ 'ಗೋ ಬ್ಯಾಕ್ ಮೋದಿ' ಪೋಸ್ಟರ್ ಸ್ವಾಗತ