ನವದೆಹಲಿ: ಅರಬ್ ಸಂಯುಕ್ತ ರಾಷ್ಟ್ರ (ಯುಎಇ) ಮತ್ತು ಕತಾರ್ಗೆ ಎರಡು ದಿನಗಳ ಪ್ರವಾಸವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ಆರಂಭಿಸಿದರು. ಇದೇ ವೇಳೆ, ಪ್ರಧಾನಿ ಅಬುದಾಬಿಯಲ್ಲಿ ನಿರ್ಮಿಸಿರುವ ಮೊದಲ ಹಿಂದೂ ದೇವಾಲಯ ಸ್ವಾಮಿ ನಾರಾಯಣ ಮಂದಿರವನ್ನು ಉದ್ಘಾಟಿಸಲಿದ್ದಾರೆ.
ದೆಹಲಿಯ ವಿಮಾನ ನಿಲ್ದಾಣದಿಂದ ಅವರು ಇಂದು ಮಧ್ಯಾಹ್ನ 12.30 ರ ಸುಮಾರಿನಲ್ಲಿ ಪ್ರಯಾಣ ಆರಂಭಿಸಿದರು. 2015 ರಿಂದ ಯುಎಇಗೆ ಪ್ರಧಾನಿ ಮೋದಿ ಅವರ ಏಳನೇ ಮತ್ತು ಕಳೆದ 8 ತಿಂಗಳಲ್ಲಿ ಮೂರನೇ ಭೇಟಿಯಾಗಿದೆ. ಯುಎಇ ಭೇಟಿ ಬಳಿಕ ಕತಾರ್ಗೂ ಪ್ರವಾಸ ಕೈಗೊಳ್ಳಲಿದ್ದಾರೆ.
ಅಬುಧಾಬಿಯ ಝಾಯೆದ್ ಸ್ಪೋರ್ಟ್ಸ್ ಸಿಟಿ ಸ್ಟೇಡಿಯಂನಲ್ಲಿ ನಡೆಯಲಿರುವ 'ಅಹ್ಲಾನ್ ಮೋದಿ' ಕಾರ್ಯಕ್ರಮದಲ್ಲಿ ಅನಿವಾಸಿ ಭಾರತೀಯರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಇದಕ್ಕೂ ಮೊದಲು ಯುಎಇ ಅಧ್ಯಕ್ಷ ನಹ್ಯಾನ್ ಮತ್ತು ವಿದೇಶಾಂಗ ಇಲಾಖೆ ಸಚಿವರನ್ನು ಭೇಟಿ ಮಾಡಿ ಮಾತುಕತೆ ನಡೆಸಲಿದ್ದಾರೆ. ಕತಾರ್ನಲ್ಲಿ ಬೇಹುಗಾರಿಕೆ ನಡೆಸಿದ ಆರೋಪದ ಮೇಲೆ ಮರಣದಂಡನೆ ಶಿಕ್ಷೆಗೆ ಒಳಗಾಗಿ ಬಳಿಕ ಜೀವಾವಧಿಗೆ ಒಳಗಾಗಿದ್ದ ಭಾರತೀಯ ಮಾಜಿ ಸೇನಾ ಸಿಬ್ಬಂದಿ ಬಿಡುಗಡೆ ಮಾಡಲಾಗಿದೆ. ಇದಕ್ಕೆ ಕೃತಜ್ಞತೆ ಸಲ್ಲಿಸಲು ಮೋದಿ ಅವರು ಅಲ್ಲಿನ ರಾಜನನ್ನು ಭೇಟಿ ಮಾಡಲಿದ್ದಾರೆ ಎಂದು ಹೇಳಲಾಗಿದೆ.
ಭಾರತ - ಕತಾರ್ ಐತಿಹಾಸಿಕ ಸಂಬಂಧ: ದೋಹಾ ಪ್ರವಾಸಕ್ಕೂ ಮೊದಲು ಮಾತನಾಡಿರುವ ಪ್ರಧಾನಿ ಮೋದಿ, ಭಾರತ ಮತ್ತು ಕತಾರ್ ಐತಿಹಾಸಿಕವಾಗಿ ನಿಕಟ ಮತ್ತು ಸೌಹಾರ್ದ ಸಂಬಂಧ ಹೊಂದಿವೆ. ಇತ್ತೀಚಿನ ವರ್ಷಗಳಲ್ಲಿ ಉಭಯ ದೇಶಗಳ ನಡುವಿನ ದ್ವಿಪಕ್ಷೀಯ ಸಂಬಂಧಗಳು ಗಾಢವಾಗುತ್ತಲೇ ಇವೆ ಎಂದು ಹೇಳಿದ್ದಾರೆ.
ಅಮೀರ್ ಶೇಖ್ ತಮೀಮ್ ಬಿನ್ ಹಮದ್ ಅಲ್ ಥಾನಿ ಅವರನ್ನು ಭೇಟಿ ಮಾಡಲು ನಾನು ಎದುರು ನೋಡುತ್ತಿದ್ದೇನೆ. ಅವರ ನಾಯಕತ್ವದಲ್ಲಿ ಕತಾರ್ ಅದ್ಭುತ ಬೆಳವಣಿಗೆ ಮತ್ತು ಪರಿವರ್ತನೆಗೆ ಸಾಕ್ಷಿಯಾಗಿದೆ. ವ್ಯಾಪಾರ ಮತ್ತು ಹೂಡಿಕೆ, ಪಾಲುದಾರಿಕೆಯನ್ನು ಬಲಪಡಿಸುವುದು, ಸಂಸ್ಕೃತಿ ಮತ್ತು ಶಿಕ್ಷಣದಲ್ಲಿ ಸಹಕಾರ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿ ಉಭಯ ದೇಶಗಳ ಸಂಬಂಧಗಳು ವೃದ್ಧಿಯಾಗುತ್ತಿವೆ ಎಂದಿದ್ದಾರೆ.
ದೋಹಾದಲ್ಲಿ 8 ಲಕ್ಷಕ್ಕೂ ಹೆಚ್ಚು ಭಾರತೀಯ ಸಮುದಾಯ ಇರುವುದು ನಮ್ಮ ಬಲವಾದ ಸಂಬಂಧಕ್ಕೆ ಸಾಕ್ಷಿಯಾಗಿದೆ. ಯುಎಇ ಜೊತೆಗಿನ ಭಾರತದ ಸಮಗ್ರ ಕಾರ್ಯತಂತ್ರದ ಪಾಲುದಾರಿಕೆಯನ್ನು ಮತ್ತಷ್ಟು ಮುಂದುವರಿಸಲು ಎದುರು ನೋಡುತ್ತಿರುವುದಾಗಿ ಮೋದಿ ಹೇಳಿದ್ದಾರೆ. ಹಲವಾರು ಪ್ರಮುಖ ಕ್ಷೇತ್ರಗಳಲ್ಲಿ ಸಹಕಾರವನ್ನು ಹೆಚ್ಚಿಸಲು ಉಭಯ ಪಕ್ಷಗಳು ಹಲವಾರು ಒಪ್ಪಂದಗಳಿಗೆ ಸಹಿ ಹಾಕುವ ಸಾಧ್ಯತೆಯಿದೆ.
ಇದನ್ನೂ ಓದಿ: ಅಬುಧಾಬಿಯಲ್ಲಿ ಹಿಂದೂ ದೇಗುಲ ಉದ್ಘಾಟನೆಗೆ ಫೆ.13, 14ರಂದು ಪ್ರಧಾನಿ ಮೋದಿ ಯುಎಇ ಭೇಟಿ