ನವದೆಹಲಿ: ರಷ್ಯಾದ ಮಾಸ್ಕೋದ ಕ್ರೋಕಸ್ ಸಿಟಿ ಹಾಲ್‌ನಲ್ಲಿ ಶುಕ್ರವಾರ (ಮಾರ್ಚ್ 22) ರಾತ್ರಿ ಉಗ್ರರು ಮನಬಂದಂತೆ ಗುಂಡಿನ ದಾಳಿ ನಡೆಸಿದ್ದಾರೆ. ಈ ದಾಳಿಯಲ್ಲಿ 60 ಜನರು ಸಾವನ್ನಪ್ಪಿದ್ದಾರೆ. 145ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಈ ಕೃತ್ಯದ ಹೊಣೆಯನ್ನು ಇಸ್ಲಾಮಿಕ್ ಸ್ಟೇಟ್ ಗುಂಪು (ISIS) ಹೊತ್ತುಕೊಂಡಿದೆ.
ಮಾಸ್ಕೋದ ಮ್ಯೂಸಿಕ್ ಕನ್ಸರ್ಟ್ ಹಾಲ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯನ್ನು ಭಾರತದ ಪ್ರಧಾನಿ ನರೇಂದ್ರ ಮೋದಿ ತೀವ್ರವಾಗಿ ಖಂಡಿಸಿದ್ದಾರೆ. ''ಮಾಸ್ಕೋದಲ್ಲಿ ನಡೆದ ಭೀಕರ ಭಯೋತ್ಪಾದಕ ದಾಳಿಯನ್ನು ನಾವು ಬಲವಾಗಿ ಖಂಡಿಸುತ್ತೇವೆ. ಸಂತ್ರಸ್ತರ ಕುಟುಂಬಗಳಿಗೆ ದುಃಖ ಭರಿಸುವ ಶಕ್ತಿ ಲಭಿಸಲಿ ಎಂದು ದೇವರಲ್ಲಿ ಪ್ರಾರ್ಥನೆ ಸಲ್ಲಿಸುತ್ತೇವೆ. ಈ ದುಃಖದ ಸಮಯದಲ್ಲಿ ಭಾರತವು ರಷ್ಯಾ ಸರ್ಕಾರ ಮತ್ತು ಜನರೊಂದಿಗೆ ಬೆಂಬಲವಾಗಿ ನಿಂತಿದೆ" ಎಂದು ಪ್ರಧಾನಿ ಮೋದಿ ಸಾಮಾಜಿಕ ಜಾಲತಾಣವಾದ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ಶಸ್ತ್ರಸಜ್ಜಿತ ಉ್ರಗರಿಂದ ಗುಂಡಿ ದಾಳಿ: ಅಪರಿಚಿತ ಬಂದೂಕುಧಾರಿಗಳು ದೇಹದ ರಕ್ಷಾಕವಚವನ್ನು ಧರಿಸಿ ಮತ್ತು ಆಕ್ರಮಣಕಾರಿ ರೈಫಲ್‌ಗಳೊಂದಿಗೆ ಶಸ್ತ್ರಸಜ್ಜಿತರಾಗಿ ಮಾಸ್ಕೋ ಕ್ರೋಕಸ್ ಸಿಟಿ ಹಾಲ್‌ನಲ್ಲಿ ಶುಕ್ರವಾರ ಮನಬಂದಂತೆ ಗುಂಡು ಹಾರಿಸಿದ್ದಾರೆ. ಜೊತೆಗೆ ಗ್ರೆನೇಡ್ ಎಸೆದಿದ್ದರಿಂದ ಮಾಸ್ಕೋ ಕ್ರೋಕಸ್ ಸಿಟಿ ಹಾಲ್‌ನಲ್ಲಿ ಬೆಂಕಿ ಹೊತ್ತಿಕೊಂಡಿದೆ. ಕ್ರೋಕಸ್ ಸಿಟಿ ಹಾಲ್ ಹತ್ಯಾಕಾಂಡದ ದಾಳಿಯನ್ನು ಭದ್ರತಾ ಸಂಸ್ಥೆ ಎಫ್‌ಎಸ್‌ಬಿ ತನಿಖೆ ನಡೆಸುತ್ತಿದೆ. ರಷ್ಯಾದ ಕಾಲಮಾನದ ಪ್ರಕಾರ ರಾತ್ರಿ 8 ಗಂಟೆ ಸುಮಾರಿಗೆ ಮಾಸ್ಕೋ ಕ್ರೋಕಸ್ ಸಿಟಿ ಹಾಲ್‌ನಲ್ಲಿ ದಾಳಿ ನಡೆದಿದೆ.
ಕಟ್ಟಡದ ಮೇಲೆ ಗ್ರೆನೇಡ್ ಎಸೆದಿರುವ ಶಂಕೆ: ಆರ್‌ಟಿ ವರದಿಯ ಪ್ರಕಾರ, ಕ್ರೋಕಸ್ ಸಿಟಿ ಹಾಲ್‌ನಲ್ಲಿ ದಾಳಿಯ ನಂತರ ಸ್ಥಳದಲ್ಲಿ ತೀವ್ರ ಆತಂಕ ಸೃಷ್ಟಿಯಾಗಿತ್ತು. ಕ್ರೋಕಸ್ ಸಿಟಿ ಹಾಲ್‌ನಲ್ಲಿ ನಡೆಯುತ್ತಿದ್ದ ಸಂಗೀತೋತ್ಸವಕ್ಕೆ ಬಂದಿದ್ದ ಜನರನ್ನು ಗುರಿಯಾಗಿಸಿಕೊಂಡು ದಾಳಿಕೋರರು ಈ ಕೃತ್ಯ ಎಸಗಿದ್ದಾರೆ. ಘಟನೆಯ ವಿಡಿಯೋದಲ್ಲಿ ಶವಗಳು ಅಲ್ಲಲ್ಲಿ ಬಿದ್ದಿರುವುದು ಕಂಡು ಬಂದಿದೆ. ಕಟ್ಟಡಕ್ಕೆ ಬೆಂಕಿ ಹಚ್ಚಲು ಹ್ಯಾಂಡ್ ಗ್ರೆನೇಡ್‌ಗಳನ್ನೂ ಎಸೆದಿದ್ದಾರೆ ಎನ್ನಲಾಗಿದೆ. ಈ ವೇಳೆ ಅಧಿಕಾರಿಗಳು ತುರ್ತು ರಕ್ಷಣಾ ಪ್ರತಿಕ್ರಿಯೆಯನ್ನು ಪ್ರಾರಂಭಿಸಿದರು. ಸ್ಥಳದಲ್ಲಿ ಹಲವಾರು ಆಂಬ್ಯುಲೆನ್ಸ್‌ಗಳು ಬೀಡುಬಿಟ್ಟಿವೆ ಮತ್ತು ಶಸ್ತ್ರಸಜ್ಜಿತ ಪೊಲೀಸ್ ಘಟಕಗಳನ್ನು ನಿಯೋಜಿಸಲಾಗಿದೆ. ಭಾರೀ ಬೆಂಕಿಯನ್ನು ನಂದಿಸುವ ಕಾರ್ಯಾಚರಣೆಗೆ ಹೆಲಿಕಾಪ್ಟರ್ ಅನ್ನು ಸಹ ನಿಯೋಜನೆ ಮಾಡಲಾಗಿದೆ.
ಮಾಸ್ಕೋದ ಕ್ರೋಕಸ್ ಸಿಟಿ ಹಾಲ್‌ನಲ್ಲಿ ಸಂಭವಿಸಿದ ಭೀಕರ ದುರಂತದ ನಂತರ ಸಂತಾಪ ವ್ಯಕ್ತಪಡಿಸುವ ವಿಶ್ವದಾದ್ಯಂತದ ಸಾಮಾನ್ಯ ನಾಗರಿಕರಿಂದ ರಷ್ಯಾದ ವಿದೇಶಾಂಗ ಸಚಿವಾಲಯವು ಕರೆಗಳನ್ನು ಸ್ವೀಕರಿಸುತ್ತಿದೆ ಎಂದು ರಷ್ಯಾದ ವಿದೇಶಾಂಗ ಸಚಿವಾಲಯದ ವಕ್ತಾರ ಮಾರಿಯಾ ಜಖರೋವಾ ಹೇಳಿದ್ದಾರೆ.
ಇದನ್ನೂ ಓದಿ: ರಷ್ಯಾದಲ್ಲಿ ಉಗ್ರರ ಅಟ್ಟಹಾಸಕ್ಕೆ 60 ಜನ ಬಲಿ, 145 ಮಂದಿಗೆ ಗಾಯ; ದಾಳಿ ಹೊಣೆ ಹೊತ್ತ ಐಸಿಸ್ - TERRORIST ATTACK IN RUSSIA