ನವದೆಹಲಿ: ಕಾರ್ಯನಿರ್ವಹಣೆ, ಸುಧಾರಣೆ, ಪರಿವರ್ತನೆ ಮತ್ತು ಮಾಹಿತಿ ಎಂಬ ನಾಲ್ಕು ಅಂಶಗಳ ಮಂತ್ರದೊಂದಿಗೆ ಅಧಿಕಾರಿಗಳು ಮತ್ತು ಸಚಿವರುಗಳು ಕಾರ್ಯ ನಿರ್ವಹಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ. ಬುಧವಾರ ಅಧಿಕಾರಿಗಳು ಮತ್ತು ಸಚಿವರೊಂದಿಗೆ ಸರ್ಕಾರದ ಕಾರ್ಯ ವೈಖರಿ ಕುರಿತು ಪ್ರಗತಿ ಪರಿಶೀಲನೆಯ ಸುದೀರ್ಘ ಸಭೆ ನಡೆಸಿದ ಅವರು, ಈ ವೇಳೆ ಶ್ರಮವಿಲ್ಲದೇ ಕಾರ್ಯ ನಿರ್ವಹಿಸುವಂತೆ ಸಹೋದ್ಯೋಗಿಗಳು ಹಾಗೂ ಅಧಿಕಾರಿಗಳಿಗೆ ಸಲಹೆ ನೀಡಿದರು.
ಸುಷ್ಮಾ ಸ್ವರಾಜ್ ಭವನ್ನಲ್ಲಿ ಸಚಿವರೊಂದಿಗೆ ಐದು ಗಂಟೆಗಳ ಕಾಲ ಸಭೆ ನಡೆಸಿದ ಅವರು, ಇದೇ ಮೊದಲ ಬಾರಿಗೆ ತಮ್ಮ ಕ್ಯಾಬಿನೆಟ್ ಸೇರಿದಂತೆ ಹೊಸ ಸಚಿವರು, ಅಧಿಕಾರಿಗಳೊಂದಿಗೆ ಸಭೆ ನಡೆಸಿ ಸೂಚನೆಗಳನ್ನು ನೀಡಿದರು. ಸರ್ಕಾರದ ಕಾರ್ಯವೈಖರಿ, ಸಾಧನೆ ಮತ್ತು ಪ್ರಚಾರ, ಉದ್ದೇಶ, ಕಲ್ಯಾಣದ ಕ್ರಮ ಸೇರಿದಂತೆ ಪ್ರಮುಖ ವಿಷಯಗಳ ಕುರಿತು ಅವರು ಸಹೊದ್ಯೋಗಿಗಳೊಂದಿಗೆ ಚರ್ಚಿಸಿದರು. ಇದೇ ವೇಳೆ, ಪ್ರಧಾನಿ ಮೋದಿ ಅವರು ಸಚಿವರುಗಳು ಜನರೊಂದಿಗೆ ಸಾಮಾಜಿಕ ಜಾಲತಾಣದ ಮೂಲಕ ಸಂಪರ್ಕ ಸಾಧಿಸಬೇಕು. ಈ ಮೂಲಕ ಸರ್ಕಾರವೂ ಜವಾಬ್ದಾರಿಯುತವಾಗಿ ಕಾರ್ಯ ನಿರ್ವಹಿಸುತ್ತಿದೆ ಎಂಬ ಸಂದೇಶವನ್ನು ಸಾರಬೇಕು ಎಂದು ಸೂಚನೆ ನೀಡಿದರು.
ಮೂಲಗಳ ಪ್ರಕಾರ ಮೋದಿ 3.0 ಸರ್ಕಾರ 100 ದಿನ ಪೂರೈಸಿದ್ದು, ಸಂಬಂಧಪಟ್ಟ ಸಚಿವಾಲಯಗಳಲ್ಲಿ 10 ಪ್ರಮುಖ ನಿರ್ಧಾರಗಳನ್ನು ಕೈಗೊಂಡು ಅವುಗಳ ಮಾಹಿತಿಗಳನ್ನು ನೀಡಿದರು. ಇವುಗಳ ಬಗ್ಗೆ ಪ್ರಚಾರವನ್ನು ನಡೆಸುವಂತೆ ಸೂಚಿಸಿದ ಅವರು, ಸರ್ಕಾರ ನಿರ್ಧಾರಗಳನ್ನು ವೇಗವಾಗಿ ಮತ್ತು ಉತ್ತಮ ಸಂವಹನ ನಡೆಸುವಂತೆ ನಿರ್ದೇಶನ ಕೊಟ್ಟರು.
ಸಭೆಯಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ನಲ್ಲಿ ಘೋಷಿಸಿದ ಯೋಜನೆಗಳ ಕುರಿತು ವಿವರಣೆ ನೀಡಿದರು. ಮೋದಿ ನೇತೃತ್ವದ ಕೇಂದ್ರ ಸರ್ಕಾರವು 10 ವರ್ಷಗಳನ್ನು ಪೂರೈಸುತ್ತಿದ್ದು, ಮುಂದಿನ ಐದು ವರ್ಷಗಳು ಕೂಡ ಇದೇ ರೀತಿ ಕೆಲಸಗಳನ್ನು ಮುಂದುವರೆಸುವಂತೆ ಮೋದಿ ಸೂಚಿಸಿದರು. ಜನರು ಕಳೆದೊಂದು ದಶಕದಿಂದ ನಮ್ಮ ಮೇಲೆ ಇಟ್ಟ ನಂಬಿಕೆಯಂತೆ ಈ ಅವಧಿಯಲ್ಲಿ ಅಭಿವೃದ್ಧಿ ವೇಗವಾಗಿ ಮುಂದುವರೆಯಲಿದೆ ಎಂಬ ಭರವಸೆಯನ್ನು ಜನರಿಗೆ ನೀಡಬೇಕು ಎಂದು ಮೋದಿ ಸಂಪುಟ ಸಹೋದ್ಯೋಗಿಗಳಿಗೆ ತಿಳಿಸಿದರು
ನಿರ್ಗಮಿತ ಕ್ಯಾಬಿನೆಟ್ ಕಾರ್ಯದರ್ಶಿ ರಾಜೀವ್ ಗೌಬಾ ಕೂಡ 73 ಮುಖ್ಯ ಮತ್ತು ಪ್ರಮುಖ ನಿರ್ಧಾರಗಳನ್ನು ಸಭೆಯಲ್ಲಿ ಮಂಡಿಸಿದರು. ಇದರ ಜೊತೆಗೆ ಸಭೆಯಲ್ಲಿ ಆರೋಗ್ಯ ಮತ್ತು ಶಿಕ್ಷಣ ವಲಯ ಹಾಗೂ ದೇಶದ ಮೂಲಸೌಕರ್ಯದ ಸುಧಾರಣೆ ಕುರಿತು ಎರಡು ಪ್ರದರ್ಶಿಕೆಗಳನ್ನು ಮಂಡಿಸಲಾಯಿತು.
ಸಭೆಯಲ್ಲಿ ಮಹಿಳೆಯರು, ಬಡವರು, ಯುವಜನತೆ ಮತ್ತು ರೈತರ ವಿಷಯಗಳಿಗೆ ಹೆಚ್ಚು ಒತ್ತು ನೀಡಲಾಗಿತ್ತು. ಹೊಸ ಮೂಲಸೌಕರ್ಯ ಯೋಜನೆ ಸೇರಿದಂತೆ ಹೊಸ ಯೋಜನೆಗಳು ಮತ್ತು ನೀತಿ ನಿರ್ಧಾರಗಳ ಬಗ್ಗೆ ಜಾಗೃತಿ ಮೂಡಿಸುವಂತೆ ಸೂಚಿಸಲಾಯಿತು. (ಐಎಎನ್ಎಸ್)
ಇದನ್ನೂ ಓದಿ: ಪೂಜಾ ಖೇಡ್ಕರ್ ಪ್ರಕರಣ: ಅಭ್ಯರ್ಥಿಗಳ ಗುರುತು ಪರಿಶೀಲನೆಗೆ ಆಧಾರ್ ಆಧಾರಿತ ದೃಢೀಕರಣಕ್ಕೆ UPSC ಗೆ ಕೇಂದ್ರದ ಅನುಮತಿ