ಆದಿಲಾಬಾದ್: ತೆಲಂಗಾಣದಲ್ಲಿ ವಿದ್ಯುತ್, ರೈಲು ಮತ್ತು ರಸ್ತೆ ವಲಯಗಳಿಗೆ ಸಂಬಂಧಿಸಿದ 56,000 ಕೋಟಿ ರೂ.ಗೂ ಅಧಿಕ ಮೌಲ್ಯದ ಹಲವು ಅಭಿವೃದ್ಧಿ ಯೋಜನೆಗಳಿಗೆ ಪ್ರಧಾನಿ ನರೇಂದ್ರ ಮೋದಿ ಸೋಮವಾರ ಶಂಕುಸ್ಥಾಪನೆ ನೆರವೇರಿಸಿದರು ಮತ್ತು ಪೂರ್ಣಗೊಂಡ ಹಲವಾರು ಯೋಜನೆಗಳನ್ನು ಕೂಡ ಉದ್ಘಾಟಿಸಿದರು.
ಪ್ರಧಾನಿಯವರ ಅಧಿಕೃತ ಸಮಾರಂಭದಲ್ಲಿ ರಾಜ್ಯಪಾಲೆ ತಮಿಳಿಸೈ ಸೌಂದರರಾಜನ್ ಮತ್ತು ಮುಖ್ಯಮಂತ್ರಿ ಎ ರೇವಂತ್ ರೆಡ್ಡಿ ಇತರರು ಭಾಗವಹಿಸಿದ್ದರು.
ಕಾರ್ಯಕ್ರಮದ ಅಂಗವಾಗಿ ತೆಲಂಗಾಣಕ್ಕೆ ಆಗಮಿಸಿದ ಪ್ರಧಾನಿ ಮೋದಿಯವರನ್ನು ಮುಖ್ಯಮಂತ್ರಿ ರೇವಂತ್ ರೆಡ್ಡಿ ಸ್ವಾಗತಿಸಿದರು. ತೆಲಂಗಾಣಕ್ಕೆ ಬಂದ ಪ್ರಧಾನಿಯನ್ನು ಬಹಳ ಸಮಯದ ನಂತರ ತೆಲಂಗಾಣದ ಮುಖ್ಯಮಂತ್ರಿಯೊಬ್ಬರು ಸ್ವಾಗತಿಸಿದ್ದಾರೆ. ಪ್ರಧಾನಿಯವರ ಅಧಿಕೃತ ಕಾರ್ಯಕ್ರಮದಲ್ಲಿ ರೇವಂತ್ ರೆಡ್ಡಿ ವೇದಿಕೆ ಮೇಲೆ ಉಪಸ್ಥಿತರಿದ್ದರು. ಈ ಹಿಂದೆ ಹಲವಾರು ಬಾರಿ ಪ್ರಧಾನಿ ಮೋದಿ ತೆಲಂಗಾಣಕ್ಕೆ ಬಂದಾಗಲೆಲ್ಲ ಆಗಿನ ಮುಖ್ಯಮಂತ್ರಿಯಾಗಿದ್ದ ಕೆ.ಚಂದ್ರಶೇಖರ್ ರಾವ್ ಅವರನ್ನು ಭೇಟಿಯಾಗದೆ ಅಂತರ ಕಾಯ್ದುಕೊಂಡಿದ್ದರು.
ಇಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿಯವರು, ಇತರ ಯೋಜನೆಗಳ ಜೊತೆಗೆ ಪೆದ್ದಪಲ್ಲಿಯಲ್ಲಿ ತೆಲಂಗಾಣ ಸೂಪರ್ ಥರ್ಮಲ್ ವಿದ್ಯುತ್ ಯೋಜನೆಯ ಎನ್ ಟಿಪಿಸಿಯ 800 ಮೆಗಾವ್ಯಾಟ್ (ಘಟಕ -2) ಅನ್ನು ರಾಷ್ಟ್ರಕ್ಕೆ ಸಮರ್ಪಿಸಿದರು. ಅಲ್ಟ್ರಾ-ಸೂಪರ್ ಕ್ರಿಟಿಕಲ್ ತಂತ್ರಜ್ಞಾನದ ಆಧಾರದ ಮೇಲೆ ಈ ಯೋಜನೆಯು ತೆಲಂಗಾಣಕ್ಕೆ ಶೇಕಡಾ 85 ರಷ್ಟು ವಿದ್ಯುತ್ ಪೂರೈಸುತ್ತದೆ ಮತ್ತು ದೇಶದ ಎನ್ಟಿಪಿಸಿಯ ಎಲ್ಲಾ ವಿದ್ಯುತ್ ಕೇಂದ್ರಗಳಿಗೆ ಹೋಲಿಸಿದರೆ ಸುಮಾರು 42 ಪ್ರತಿಶತದಷ್ಟು ಹೆಚ್ಚಿನ ವಿದ್ಯುತ್ ಉತ್ಪಾದನಾ ದಕ್ಷತೆಯನ್ನು ಹೊಂದಿದೆ. ಈ ಹಿಂದೆ ಪ್ರಧಾನಮಂತ್ರಿಯವರು ಈ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಿದ್ದರು.
ಜಾರ್ಖಂಡ್ ನ ಚತ್ರಾದಲ್ಲಿ ಉತ್ತರ ಕರಣ್ ಪುರ ಸೂಪರ್ ಥರ್ಮಲ್ ವಿದ್ಯುತ್ ಯೋಜನೆಯ 660 ಮೆಗಾವ್ಯಾಟ್ (ಘಟಕ -2) ಅನ್ನು ಕೂಡ ಪ್ರಧಾನಿ ಇದೇ ಸಂದರ್ಭದಲ್ಲಿ ರಾಷ್ಟ್ರಕ್ಕೆ ಸಮರ್ಪಿಸಿದರು. ಇದು ದೇಶದ ಮೊದಲ ಸೂಪರ್ ಕ್ರಿಟಿಕಲ್ ಥರ್ಮಲ್ ಪವರ್ ಯೋಜನೆಯಾಗಿದ್ದು, ಸಾಂಪ್ರದಾಯಿಕ ವಾಟರ್-ಕೂಲ್ಡ್ ಕಂಡೆನ್ಸರ್ ಗಳಿಗೆ ಹೋಲಿಸಿದರೆ ಮೂರನೇ ಒಂದು ಭಾಗದಷ್ಟು ಕಡಿಮೆ ನೀರನ್ನು ಬಳಕೆ ಮಾಡುತ್ತದೆ.
"ಪ್ರಧಾನಿ ಎಂದರೆ ದೊಡ್ಡಣ್ಣನಿದ್ದಂತೆ. ಮೋದಿಯವರ ತವರು ರಾಜ್ಯವಾದ ಗುಜರಾತ್ನಂತೆ ಪ್ರಗತಿ ಸಾಧಿಸಲು ತೆಲಂಗಾಣ ರಾಜ್ಯಕ್ಕೆ ಅವರ ಬೆಂಬಲ ಬೇಕು" ಎಂದು ರೇವಂತ್ ರೆಡ್ಡಿ ಹೇಳಿದರು. ಕಾಂಗ್ರೆಸ್ ಆಡಳಿತದ ರಾಜ್ಯವಾದ ತೆಲಂಗಾಣವು ಕೇಂದ್ರದೊಂದಿಗೆ ಸಂಘರ್ಷ ಬಯಸುವುದಿಲ್ಲ ಮತ್ತು ಸೌಹಾರ್ದಯುತ ಸಂಬಂಧವನ್ನು ಬಯಸುತ್ತದೆ ಎಂದು ಅವರು ಹೇಳಿದರು.
ಇದನ್ನೂ ಓದಿ: ಬಾಂಗ್ಲಾದೇಶ, ಯುಎಇಗೆ ಈರುಳ್ಳಿ ರಫ್ತಿಗೆ ಷರತ್ತುಬದ್ಧ ಅನುಮತಿ