ಲಖನೌ (ಉತ್ತರಪ್ರದೇಶ): ವಾಹನಗಳಿಗೆ ಪೆಟ್ರೋಲ್ ಅಥವಾ ಡೀಸೆಲ್ ತುಂಬಿಸುವಾಗ ಮೋಸ ಮಾಡುವ ಪ್ರಕರಣಗಳು ಹೆಚ್ಚಾಗುತ್ತಿದೆ. ಪೆಟ್ರೋಲ್ ಪಂಪ್‌ನ ಮೀಟರ್‌ನಲ್ಲಿ 00.00 ಎಂದು ಕಾಣುತ್ತಿದ್ದರೂ, ಗ್ರಾಹಕರಿಗೆ ವಿಶ್ವಾಸದ್ರೋಹ ಆಗುತ್ತಿರುವ ಪ್ರಕರಣಗಳು ದಾಖಲಾಗಿವೆ. ಕೆಲವೊಂದು ವಿಶೇಷ ಟ್ರಿಕ್ ಬಳಸಿ ನಿಮ್ಮನ್ನು ವಂಚಿಸಲೂಬಹುದು.
ಹೌದು, ಪೆಟ್ರೋಲ್ ಪಂಪ್‌ನಲ್ಲಿ 'ಜಂಪ್ ಟ್ರಿಕ್' ಬಳಸಿ ಪೆಟ್ರೋಲ್ ಅಥವಾ ಡೀಸೆಲ್ ಕಡಿಮೆ ಪ್ರಮಾಣದಲ್ಲಿ ತುಂಬಿಸಿ ಮೋಸ ಮಾಡುವ ಪ್ರಕರಣಗಳು ಹೆಚ್ಚಾಗಿ ಕಂಡುಬರುತ್ತಿವೆ. ನೀವು ಕೊಟ್ಟ ಹಣದಷ್ಟು ಇಂಧನ ನಿಮ್ಮ ವಾಹನದಲ್ಲಿ ತುಂಬಿಸದೆ ಕಳಿಸಬಹುದು. ಇದನ್ನು ಹೇಗೆ ಪತ್ತೆ ಮಾಡುವುದು ಹೇಗೆ ಎಂಬ ಬಗ್ಗೆ ಇಲ್ಲಿ ವಿವರಿಸಲಾಗಿದೆ.
ಏನಿದು ಜಂಪ್ ಟ್ರಿಕ್: ನಿಮಗೆ ಪೆಟ್ರೋಲ್ ಪಂಪ್‌ನ ಮೀಟರ್‌ನಲ್ಲಿ 00.00 ಎಂದು ತೋರಿಸುತ್ತಾರೆ. ನಂತರ, ವಾಹನಕ್ಕೆ ಪೆಟ್ರೋಲ್ ತುಂಬಿಸಲು ಪ್ರಾರಂಭಿಸಲಾಗುತ್ತದೆ. ಗ್ರಾಹಕರ ಕಣ್ಣು ತಪ್ಪಿಸಿ ಮೀಟರ್ ಅನ್ನು ವೇಗವಾಗಿ ಓಡಿಸಲಾಗುತ್ತದೆ. ಇದನ್ನೇ ಜಂಪ್ ಟ್ರಿಕ್ ಎನ್ನುತ್ತಾರೆ. ಪೆಟ್ರೋಲ್ ಮೀಟರ್ ಆರಂಭದಲ್ಲಿ 1,2,3 ಎಂದು ಆರಂಭಿಕ ಸಂಖ್ಯೆಯನ್ನು ತೋರಿಸದೇ, ಯಂತ್ರವು ನೇರವಾಗಿ 5,7,8,9 ಇತ್ಯಾದಿ ಸಂಖ್ಯೆಗಳನ್ನು ತಲುಪುತ್ತದೆ. ಆಗ ನೀವು ಜಂಪ್ ಟ್ರಿಕ್ ಮೋಸಕ್ಕೆ ಒಳಗಾಗಿದ್ದೀರಿ ಎಂದು ಭಾವಿಸಬೇಕು. ಈ ತಂತ್ರದಿಂದ ಕಡಿಮೆ ಪ್ರಮಾಣದಲ್ಲಿ ಪೆಟ್ರೋಲ್ ತುಂಬಲಾಗುತ್ತದೆ. ನೀವು ಈ ಜಾಲಕ್ಕೆ ಬೀಳಬಾರದು ಎಂದರೆ ಈ ನಿಯಮಗಳನ್ನು ಪಾಲಿಸಿ.
ಪೆಟ್ರೋಲ್ ಮೋಸದಿಂದ ತಪ್ಪಿಸಿಕೊಳ್ಳಲು 8 ಟಿಪ್ಸ್
- ಮಾತಿನಲ್ಲಿ ಬೀಳಬೇಡಿ: ಪೆಟ್ರೋಲ್ ಬಂಕ್ಗೆ ಹೋದಾಗ ನೀವು ಯಾರೊಂದಿಗೂ ಹರಟೆಯಲ್ಲಿ ತೊಡಗಬೇಡಿ. ಕೆಲವೊಮ್ಮೆ ಬೇಕಂತಲೇ ನಿಮ್ಮೊಂದಿಗೆ ಮಾತನಾಡುತ್ತಾ ಮೋಸ ಮಾಡುವ ಸಾಧ್ಯತೆಗಳಿರುತ್ತದೆ. ಪೆಟ್ರೋಲ್ ಮೀಟರ್ ಮೇಲೆ ನಿಮ್ಮ ಕಣ್ಣುಗಳು ಇರಬೇಕು. ಮೀಟರ್ ಪರಿಶೀಲಿಸುತ್ತಿರಬೇಕು. ಇಲ್ಲವಾದಲ್ಲಿ ನೀವು 100 ರೂಪಾಯಿ ಮೌಲ್ಯದ ಪೆಟ್ರೋಲ್ ತುಂಬಿಸಲು ಹೇಳಿದ್ದಿರಿ ಎಂದಿಟ್ಟುಕೊಳ್ಳಿ. ಇದಕ್ಕೂ ಮೊದಲು 50 ರೂಪಾಯಿ ಪೆಟ್ರೋಲ್ ತುಂಬಿಸಿದ್ದರೆ, ಅದೇ ಮೀಟರ್ ಅನ್ನು ಓಡಿಸಿ ನಿಮಗೆ 50 ರೂಪಾಯಿ ಪೆಟ್ರೋಲ್ ಹಾಕುವ ಸಾಧ್ಯತೆಗಳಿವೆ.
- ಕಾರಿನಲ್ಲೇ ಕುಳಿತು ಪೆಟ್ರೋಲ್ ತುಂಬಬೇಡಿ: ಸಾಮಾನ್ಯವಾಗಿ ಜನರು ಕಾರಿನಲ್ಲಿ ಕುಳಿತು ಪೆಟ್ರೋಲ್ ತುಂಬಿಸುತ್ತಾರೆ. ಇಂತಹ ಗ್ರಾಹಕರೇ ಶಾರ್ಟ್ ಚೇಂಜರ್‌ಗಳ ಸಾಫ್ಟ್ ಟಾರ್ಗೆಟ್ ಆಗಬಹುದು. ಕಾರು ಸವಾರರು ಪೆಟ್ರೋಲ್ ಹಾಕಿಸುವಾಗ ಇಳಿದು ಬಂದು ಮೀಟರ್ ಮೇಲೆ ಕಣ್ಣಿಡಬೇಕು. ಅದು ಸರಿಯಾದ ಪ್ರಮಾಣದಲ್ಲಿ ಚಲಿಸುತ್ತಿದೆಯೇ ಪರಿಶೀಲಿಸಬೇಕು.
- ಪೆಟ್ರೋಲ್ ತುಂಬಿಸುವ ಯಂತ್ರದ ಬಗ್ಗೆ ಎಚ್ಚರ: ಪೆಟ್ರೋಲ್ ಬಂಕ್ನ ಯಂತ್ರದ ಬಗ್ಗೆ ಎಚ್ಚರ ವಹಿಸಬೇಕು. ಅದು ಪದೇ ಪದೆ ನಿಂತು ಪೆಟ್ರೋಲ್ ಹಾಕುತ್ತಿದ್ದರೆ, ನೀವು ಮೋಸ ಹೋಗುತ್ತಿದ್ದೀರಿ ಎಂದು ಅರ್ಥ. ಯಂತ್ರವನ್ನು ಮಧ್ಯೆ ಮಧ್ಯೆ ನಿಲ್ಲಿಸುವ ಮೂಲಕ ಪೆಟ್ರೋಲ್ ಅನ್ನು ಕಡಿಮೆ ಮಾಡಬಹುದು. ಈ ಬಗ್ಗೆ ನೀವು ದೂರು ದಾಖಲಿಸಬಹುದು.
- ರೌಂಡ್ ಫಿಗರ್‌ಗಳಲ್ಲಿ ಪೆಟ್ರೋಲ್ ಹಾಕಿಸಬೇಡಿ: 50, 100, 200, 300, 400, 500 ಇತ್ಯಾದಿ ಸಮ ಸಂಖ್ಯೆಯಲ್ಲಿ ಪೆಟ್ರೋಲ್ ತುಂಬಿಸುತ್ತಿದ್ದರೆ ನೀವು ಮೋಸ ಹೋಗುವ ಸಾಧ್ಯತೆ ಹೆಚ್ಚಿರುತ್ತದೆ. ಸಾಮಾನ್ಯವಾಗಿ, ಪೆಟ್ರೋಲ್ ಮೌಲ್ಯವನ್ನು ಮೀಟರ್‌ನಲ್ಲಿ ಸೆಟ್ ಮಾಡಲಾಗಿರುತ್ತದೆ. ಇದರಿಂದಾಗಿ ಗ್ರಾಹಕರು ಸುಲಭವಾಗಿ ವಂಚನೆಗೊಳಗಾಗಬಹುದು. ಇದನ್ನು ತಡೆಗಟ್ಟಲು ಮಾರ್ಗವೆಂದರೆ ಸಮಸಂಖ್ಯೆಯ ಬದಲಿಗೆ ಬೆಸಸಂಖ್ಯೆಯಲ್ಲಿ ಪೆಟ್ರೋಲ್ ಹಾಕಿಸಬೇಕು. ಉದಾಹರಣೆಗೆ, ನೀವು 50 ರೂಪಾಯಿ ಪೆಟ್ರೋಲ್ ಅನ್ನು ತುಂಬುವ ಬದಲು 60, 65 ಅಥವಾ 70 ರೂಪಾಯಿ ದರದಲ್ಲಿ ತುಂಬಿಸಬೇಕು.
- ಹಳೆಯ ಯಂತ್ರದ ಬಗ್ಗೆ ಎಚ್ಚರ: ಪೆಟ್ರೋಲ್ ಯಂತ್ರಗಳು ಡಿಜಿಟಲ್ ಮೀಟರ್ ಹೊಂದಿಲ್ಲದಿದ್ದರೆ ಮತ್ತು ತುಂಬಾ ಹಳೆಯದಾಗಿದ್ದರೆ ಎಚ್ಚರದಿಂದಿರಿ. ಹಲವು ಬಾರಿ ಹಳೆಯ ಯಂತ್ರಗಳಿಂದಲೂ ಮೋಸದ ಪ್ರಕರಣಗಳು ಬೆಳಕಿಗೆ ಬಂದಿವೆ.
- ಮೀಟರ್‌ನಲ್ಲಿ ಬೆಲೆ ನಮೂದಿಸುವಾಗ ಪರಿಶೀಲಿಸಿ: ಪೆಟ್ರೋಲ್ ಸಿಬ್ಬಂದಿ ಮಾತಿನಲ್ಲಿ ಎಳೆದು ಮೋಸ ಮಾಡುವ ಸಾಧ್ಯತೆ ಇರುತ್ತದೆ. ಹೀಗಾಗಿ, ಮೀಟರ್‌ನಲ್ಲಿ 0 ಅಥವಾ ನೀವು ನಿಗದಿ ಮಾಡಿದ ಬೆಲೆಯನ್ನು ಪರಿಶೀಲಿಸಿಕೊಳ್ಳಿ. ಬಳಿಕ ಪೆಟ್ರೋಲ್ ತುಂಬುವಾಗ, ಮೀಟರ್ ಮೇಲೆ ಕಣ್ಣಿಡಿ. ಯಾರ ಜೊತೆಗೂ ಮಾತುಕತೆಯಲ್ಲಿ ಸಿಲುಕಿಕೊಳ್ಳಬೇಡಿ. ಸದಾ ಜಾಗೃತರಾಗಿರಿ.
- ಯಂತ್ರ ವೇಗವಾಗಿ ಓಡುತ್ತಿದ್ದರೆ ದೂರು ನೀಡಿ: ಪೆಟ್ರೋಲ್ ಮಷಿನ್ ತುಂಬಾ ವೇಗವಾಗಿ ಓಡುತ್ತಿದ್ದರೆ ಅದರ ಬಗ್ಗೆಯೂ ದೂರು ನೀಡಬಹುದು. ಯಂತ್ರವನ್ನು ವೇಗವಾಗಿ ಚಲಾಯಿಸುವ ಮೂಲಕವೂ ಪೆಟ್ರೋಲ್ ಅನ್ನು ಕಡಿಮೆ ಮಾಡಬಹುದು.
- ಪೈಪ್ನ ನಳಿಕೆಯ ಮೇಲೆ ನಿಗಾ ಇರಿಸಿ: ಪೆಟ್ರೋಲ್ ತುಂಬಿಸುವಾಗ ನಳಿಕೆಯನ್ನು ಸಿಬ್ಬಂದಿ ಬಹುಬೇಗನೇ ತೆಗೆಯಬಹುದು. ಇದರಿಂದಲೂ ಪೆಟ್ರೋಲ್ ಕಡಿಮೆ ಮಾಡಬಹುದು. ಮೀಟರ್ ನಿಂತ ನಂತರವೇ ನಳಿಕೆಯನ್ನು ತೆಗೆಯಲು ಹೇಳಬೇಕು.
ಕಾರಿನಲ್ಲಿ 5 ಲೀಟರ್ ಇಂಧನ ತುಂಬಿಸುತ್ತಿದ್ದರೆ, ಪಂಪ್‌ನಲ್ಲಿ ಈಗಾಗಲೇ ಇರುವ 5 ಲೀಟರ್ ಗೇಜ್ ಬಳಸಿ ಪೆಟ್ರೋಲ್ ತುಂಬಿಸಿ. ಇದರೊಂದಿಗೆ ನೀವು ಮೋಸಕ್ಕೆ ತುತ್ತಾಗುವುದಿಲ್ಲ. ಪೆಟ್ರೋಲ್ ಹಾಕುವ ಮೊದಲು, ಸೋರಿಕೆಯಾಗುತ್ತಿದೆಯೇ ಎಂದು ನೋಡಲು ಗೇಜ್ ಅನ್ನು ಎಚ್ಚರಿಕೆಯಿಂದ ಪರಿಶೀಲಿಸಿ.
ಹಲವು ಬಾರಿ ನಕಲಿ ಪೆಟ್ರೋಲ್ ಪೂರೈಕೆ ಪ್ರಕರಣಗಳೂ ಬೆಳಕಿಗೆ ಬರುತ್ತವೆ. ಅಂತಹ ಪರಿಸ್ಥಿತಿಯಲ್ಲಿ, ಲಿಟ್ಮಸ್ ಪೇಪರ್ ಅನ್ನು ನಿಮ್ಮೊಂದಿಗೆ ಇರಿಸಿ. ಒಂದು ಹನಿ ಪೆಟ್ರೋಲ್ ಹಾಕಿದ ತಕ್ಷಣ, ಅದರ ಮೇಲೆ ಉಗಿ ರೂಪುಗೊಳ್ಳುತ್ತದೆ ಮತ್ತು ಯಾವುದೇ ಕುರುಹು ಉಳಿಯುವುದಿಲ್ಲ. ಕಾಗದದ ಮೇಲೆ ಗುರುತು ಇದ್ದರೆ ಪೆಟ್ರೋಲ್ ನಕಲಿ ಎಂದು ಅರ್ಥಮಾಡಿಕೊಳ್ಳಿ. ವಾಹನದ ಪೆಟ್ರೋಲ್ ಟ್ಯಾಂಕರ್ ಅನ್ನು ಪೂರ್ತಿಯಾಗಿ ಖಾಲಿಯಾಗಲು ಬಿಡಬೇಡಿ. ಇದರಿಂದಲೂ ಪೆಟ್ರೋಲ್ ನಷ್ಟವಾಗುತ್ತದೆ. ಟ್ಯಾಂಕ್ ಖಾಲಿಯಾದಲ್ಲಿ ಹೆಚ್ಚು ಗಾಳಿ ಇರುತ್ತದೆ.
ಕಾಲಕಾಲಕ್ಕೆ ನಿಮ್ಮ ವಾಹನದ ಮೈಲೇಜ್ ಅನ್ನು ಪರೀಕ್ಷಿಸುತ್ತಿರಿ. ಹಲವು ಬಾರಿ ವಾಹನದ ಕಡಿಮೆ ಮೈಲೇಜ್ನಿಂದಾಗಿ ನಿರೀಕ್ಷಿತ ದೂರವನ್ನು ಕ್ರಮಿಸದೇ ಇರಬಹುದು. ಮಳೆಯಲ್ಲಿ ವಾಹನ ತೋಯದಂತೆಯೂ ಎಚ್ಚರದಿಂದಿರಿ.
ಮೋಸದ ಬಗ್ಗೆ ಎಲ್ಲಿ ದೂರು ಸಲ್ಲಿಸಬೇಕು: ನೀವು ಇಂಧನ ತುಂಬಿಸುವಾಗ ಮೋಸ ಹೋದಲ್ಲಿ pgportal.gov.in ನಲ್ಲಿ ವಂಚನೆಯ ಬಗ್ಗೆ ದೂರು ಸಲ್ಲಿಸಬಹುದು. ಜೊತೆಗೆ, ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ಅಧಿಕೃತ ವೆಬ್‌ಸೈಟ್‌ನಲ್ಲಿಯೂ ದೂರು ನೀಡಬಹುದು. ಇದಲ್ಲದೆ, ಇಂಡಿಯನ್ ಆಯಿಲ್ ಪೆಟ್ರೋಲ್ ಪಂಪ್ ಮತ್ತು HP ಪೆಟ್ರೋಲ್ ಪಂಪ್‌ನ ಸಹಾಯವಾಣಿ ಸಂಖ್ಯೆ 1800-2333-555 ಗೆ ದೂರು ನೀಡಬಹುದು. ಕಂಪನಿಗಳ ಅಧಿಕೃತ ವೆಬ್‌ಸೈಟ್ ಮೂಲಕವೂ ನಿಮ್ಮ ದೂರನ್ನು ದಾಖಲಿಸಬಹುದು.
ಇದನ್ನೂ ಓದಿ: ಪೆಟ್ರೋಲ್, ಡೀಸೆಲ್ ಬೆಲೆ 2 ರಿಂದ 3 ರೂ. ಕಡಿತ ಸಾಧ್ಯತೆ: ಐಸಿಆರ್ಎ ಅಂದಾಜು - Petrol Diesel Price