ತಿರುವರೂರು (ತಮಿಳುನಾಡು): ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಹಾಲಿ ಉಪಾಧ್ಯಕ್ಷೆ, ಡೆಮಾಕ್ರಟಿಕ್ ಪಕ್ಷದ ಕಮಲಾ ಹ್ಯಾರಿಸ್ ಜಯಭೇರಿ ಬಾರಿಸಲಿ ಎಂಬ ನಿರೀಕ್ಷೆಯಲ್ಲಿ ತಮಿಳುನಾಡು ಜನರ ಆಸೆಯಾಗಿದೆ. ಅದರಲ್ಲೂ ತಿರುವರೂರು ಜಿಲ್ಲೆಯ ತುಳಸೇಂದ್ರಪುರಂ ಗ್ರಾಮದಲ್ಲಿ ಉತ್ಸಾಹ ಹೆಚ್ಚಿದ್ದು, ತಮ್ಮೂರ ಮಗಳು ಅಮೆರಿಕ ಅಧ್ಯಕ್ಷರಾಗಲಿ ಎಂಬ ನಿರೀಕ್ಷೆಯನ್ನು ಇಟ್ಟುಕೊಂಡಿದ್ದಾರೆ.
ರಿಪಬ್ಲಿಕನ್ ಡೊನಾಲ್ಡ್ ಟ್ರಂಪ್ ಅವರನ್ನು ಸೋಲಿಸಿ ಅಮೆರಿಕದ ಮುಂದಿನ ಅಧ್ಯಕ್ಷರನ್ನಾಗಿ ಅಲ್ಲಿನ ಜನ ಆಯ್ಕೆ ಮಾಡಲಿದ್ದಾರೆ ಎಂಬ ನಿರೀಕ್ಷೆ ಗ್ರಾಮಸ್ಥರದ್ದಾಗಿದೆ. ಇನ್ನು ಗ್ರಾಮಸ್ಥರು ಕಮಲಾ ಹ್ಯಾರಿಸ್ ಪೂರ್ವಜರ ಗ್ರಾಮದಲ್ಲಿರುವ ಶ್ರೀ ಧರ್ಮ ಶಾಸ್ತಾ ದೇವಸ್ಥಾನದಲ್ಲಿ, ಅಮೆರಿಕದ ಮುಂದಿನ ಅಧ್ಯಕ್ಷರಾಗಲಿ ಎಂದು ಪ್ರಾರ್ಥನೆ ಸಲ್ಲಿಸಲಾಗುತ್ತಿದೆ.
ತುಳಸೇಂದ್ರಪುರಂ ಕಮಲಾ ಹ್ಯಾರಿಸ್ ಅವರ ಅಜ್ಜ ಮತ್ತು ಮಾಜಿ ಭಾರತೀಯ ರಾಜತಾಂತ್ರಿಕ ಪಿ ವಿ ಗೋಪಾಲನ್ ಅವರ ಪೂರ್ವಜರ ಗ್ರಾಮವಾಗಿದೆ. ತಾಯಿ ಶ್ಯಾಮಲಾ ಗೋಪಾಲನ್ ಅವರ ಪುತ್ರಿಯಾಗಿದ್ದಾರೆ. ಆಗಸ್ಟ್ 2020 ರಲ್ಲಿ ಕಮಲಾ ಅವರು ಡೆಮಾಕ್ರಟ್ ಉಪಾಧ್ಯಕ್ಷ ಅಭ್ಯರ್ಥಿಯಾಗಿ ನಾಮನಿರ್ದೇಶನಗೊಂಡಾಗ ಈ ಗ್ರಾಮವು ವಿಶ್ವದ ಗಮನ ಸೆಳೆದಿತ್ತು. ಕಮಲಾ ಹ್ಯಾರಿಸ್ ಉಪಾಧ್ಯಕ್ಷೆಯಾಗಿ ಆಯ್ಕೆ ಆದ ಬಳಿಕ ಗ್ರಾಮದಲ್ಲಿ ಭಾರಿ ಹರ್ಷಾಚರಣೆ ಮಾಡಲಾಗಿತ್ತು.
ತಮ್ಮೂರಿನ ಮಣ್ಣಿನ ಮಗಳು ಚುನಾವಣೆಯಲ್ಲಿ ಗೆಲುವು ಸಾಧಿಸಿ ವಿಶ್ವದ ಅತ್ಯಂತ ಪ್ರಭಾವಿ ರಾಷ್ಟ್ರದ ಅಧ್ಯಕ್ಷೆಯಾಗಲಿ ಎಂದು ನಮ್ಮೆಲ್ಲರ ಹೃತ್ಪೂರ್ವಕ ಪ್ರಾರ್ಥನೆಗಳು ಎಂದು ಅಲ್ಲಿನ ಪಾಲಿಕೆ ಸದಸ್ಯೆಯ ಆಶಯವಾಗಿದೆ. ಇದಕ್ಕಾಗಿಯೇ ಪಾಲಿಕೆ ಸದಸ್ಯೆ ಅರುಲ್ಮೋಳಿ ಮತ್ತು ಅವರ ಪತ್ನಿ ಟಿ ಸುಧಾಕರ್ ಶ್ರೀಗಂಧದ ವಿಶೇಷ ಅಭಿಷೇಕವನ್ನು ಮಾಡಿಸಿ ಅಧ್ಯಕ್ಷರಾಗಿ ಆಯ್ಕೆ ಆಗಿ ಬರಲಿ ಎಂದು ಆ ದೇವರಲ್ಲಿ ಬೇಡಿಕೊಂಡಿದ್ದಾರೆ. ಕಮಲಾ ಹ್ಯಾರಿಸ್ ಅವರ ಪೂರ್ವಜರ ಕುಲದೇವತೆಯಾದ ಶ್ರೀ ಧರ್ಮ ಶಾಸ್ತಾ ದೇವಸ್ಥಾನದಲ್ಲಿ ಪ್ರಧಾನ ದೇವರಿಗೆ ವಿಶೇಷ 'ಅರ್ಚನೆ' ಜೊತೆಗೆ ಅಭಿಷೇಕ ಮಾಡಿಸಲಾಗಿದೆ.
ಚುನಾವಣೆಯಲ್ಲಿ ಜಯಗಳಿಸಲಿ ಎಂದು ಹಾರೈಸಿ ಹ್ಯಾರಿಸ್ ಅವರ ಭಾವಚಿತ್ರವಿರುವ ಬೃಹತ್ ಬ್ಯಾನರ್ ಕಟ್ಟಿ ಶುಭ ಕೋರುತ್ತಿದ್ದಾರೆ.
ಮಧುರೈನಲ್ಲೂ ವಿಶೇಷ ಪಾರ್ಥನೆ, ಅರ್ಚನೆ: ಇದೇ ರೀತಿಯ ಪ್ರಾರ್ಥನೆಗಳು ಮಧುರೈನಲ್ಲೂ ಮಾಡಿಸಲಾಗುತ್ತಿದೆ. ಮಧುರೈನ ಆಧ್ಯಾತ್ಮಿಕ ಸಂಸ್ಥೆಯಾದ ಅನುಷಾನಾಥಿನ್ ಅನುಗ್ರಹಂ ನವೆಂಬರ್ 4 ರಂದು ವಿಶೇಷ ಪ್ರಾರ್ಥನೆ ಸಲ್ಲಿಸಿತು. ಕಮಲಾ ಅವರು ಚುನಾವಣೆಯಲ್ಲಿ ಗೆದ್ದರೆ ಜಿಲ್ಲೆಯ ಪೈಂಗನಾಡು ಗ್ರಾಮದ ಮುಖಂಡರು ಬಡವರಿಗೆ ‘ಅನ್ನದಾನ’ ಮಾಡುವ ವಾಗ್ದಾನ ಮಾಡಿದ್ದಾರೆ .
"ಕಮಲಾ ಅವರ ಪೂರ್ವಜರು ನಮ್ಮ ಹಳ್ಳಿಯವರು .. ಅವಳು ದೊಡ್ಡ ಹುದ್ದೆಗಾಗಿ ಸ್ಪರ್ಧಿಸಿರುವ ಮಹಿಳೆಯಾಗಿದ್ದಾರೆ. ಅವಳು ಗೆಲ್ಲಬೇಕೆಂದು ನಾವು ಬಯಸುತ್ತೇವೆ" ಎಂದು ಪಾಲಿಕೆ ಸದಸ್ಯೆ ಅರುಲ್ಮೋಳಿ ಆಶಯ ವ್ಯಕ್ತಪಡಿಸಿದ್ದಾರೆ.
ಕಮಲಾ ಅವರ ಅಜ್ಜ ಗೋಪಾಲನ್ ಅವರು ಚೆನ್ನೈಗೆ ತೆರಳುವ ಮೊದಲು ಈ ಗ್ರಾಮವರಾಗಿದ್ದರು. ಈ ಊರಲ್ಲಿ ಜನಿಸಿ ಆಡಿ, ಬೆಳೆದವರು ಎಂದು ನೆನಪಿಸಿಕೊಂಡರು.
2014 ರಲ್ಲಿ ಕಮಲಾ ಹ್ಯಾರಿಸ್ ಅವರ ಹೆಸರಿನಲ್ಲಿ ದೇವಸ್ಥಾನಕ್ಕೆ ಅದರ ಕುಂಭಾಭಿಷೇಕಕ್ಕಾಗಿ 5,000 ರೂಪಾಯಿಗಳನ್ನು ದೇಣಿಗೆ ನೀಡಲಾಯಿತು, ಇದು ದೇವಸ್ಥಾನದೊಂದಿಗಿನ ಅವರ ಸಂಪರ್ಕವನ್ನು ಸೂಚಿಸುತ್ತದೆ, ಆದರೆ ಅವರ ಕುಟುಂಬದಿಂದ ಯಾರೂ ಗ್ರಾಮದಲ್ಲಿ ವಾಸಿಸುತ್ತಿಲ್ಲ.
ಇದನ್ನು ಓದಿ:ಅಮೆರಿಕ ಅಧ್ಯಕ್ಷೀಯ ಚುನಾವಣೆ ಫಲಿತಾಂಶ ಪ್ರಕಟ ಯಾವಾಗ? ಇಲ್ಲಿದೆ ಇಂಟರೆಸ್ಟಿಂಗ್ ಮಾಹಿತಿ
ಇಂದು ಅಮೆರಿಕ ಅಧ್ಯಕ್ಷೀಯ ಚುನಾವಣೆ: ಟ್ರಂಪ್, ಕಮಲಾರಿಂದ ಕೊನೆ ಹಂತದ ಕಸರತ್ತು