ಪಾಲ್ಘರ್ (ಮಹಾರಾಷ್ಟ್ರ): ಪಾಕಿಸ್ತಾನದ ಜೈಲಿನಲ್ಲಿ ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯ ಮೂಲದ ನಾವಿಕರೊಬ್ಬರು ಸಾವನ್ನಪ್ಪಿದ್ದಾರೆ. ಮೃತರನ್ನು 55 ವರ್ಷದ ವಿನೋದ್ ಲಕ್ಷ್ಮಣ್ ಕೋಲ್ (55) ಎಂದು ಗುರುತಿಸಲಾಗಿದೆ. ಜೈಲಿನಲ್ಲೇ ವಿನೋದ್ ಮೃತಪಟ್ಟಿದ್ದು, ಒಂದೂವರೆ ತಿಂಗಳು ಕಳೆದರೂ ತವರಿಗೆ ಮೃತದೇಹ ತಲುಪಿಲ್ಲ.
ಮೀನುಗಾರಿಕೆ ಮಾಡುವಾಗ ಆಕಸ್ಮಿಕವಾಗಿ ಪಾಕಿಸ್ತಾನದ ಸಮುದ್ರ ಪ್ರದೇಶಕ್ಕೆ ಪ್ರವೇಶಿಸಿದ್ದ ವಿನೋದ್ ಅವರನ್ನು ಬಂಧಿಸಿ ಪಾಕಿಸ್ತಾನದ ಜೈಲಿನಲ್ಲಿ ಇರಿಸಲಾಗಿತ್ತು. ಈಗ ಜೈಲಿನಲ್ಲೇ ಸಾವನ್ನಪ್ಪಿ 90 ದಿನ ಕಳೆದರೂ ಕರಾಚಿಯಲ್ಲೇ ಮೃತದೇಹ ಇದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
ಭಾರತದ ಗಡಿ ದಾಟಿ ಪಾಕಿಸ್ತಾನ ಪ್ರವೇಶಿಸಿದ್ದ ದೋಣಿ: ಎರಡು ವರ್ಷಗಳ ಹಿಂದೆ ಎಂದರೆ, 2022ರ ಸೆಪ್ಟೆಂಬರ್ 25ರಂದು ವಿನೋದ್ ಸಹೋದ್ಯೋಗಿಗಳ ಜೊತೆಗೆ ಮೀನುಗಾರಿಕೆಗೆ ತೆರಳಿದ್ದರು. ಗುಜರಾತ್‌ನ ಓಖಾ ಬಂದರಿನಿಂದ ಮತ್ಸ್ಯಗಂಧ ಎಂಬ ಮೀನುಗಾರಿಕಾ ದೋಣಿಯೊಂದಿಗೆ ಅರಬ್ಬಿ ಸಮುದ್ರಕ್ಕೆ ಇಳಿದಿದ್ದರು. ಈ ವೇಳೆ ತಪ್ಪಾಗಿ ಭಾರತದ ಗಡಿಯನ್ನು ದಾಟಿ ಪಾಕಿಸ್ತಾನಕ್ಕೆ ಪ್ರವೇಶಿಸಿದ್ದರು. ಆಗ ಸೆಪ್ಟೆಂಬರ್ 27ರಂದು ಒಂಬತ್ತು ನಾವಿಕರನ್ನು ಪಾಕಿಸ್ತಾನ ಕೋಸ್ಟ್ ಗಾರ್ಡ್ ಬಂಧಿಸಿತ್ತು. ಇದರಲ್ಲಿ ಏಳು ಜನರು ಪಾಲ್ಘರ್ ಜಿಲ್ಲೆಯ ದಹಾನು ತಹಸಿಲ್‌ನ ಬುಡಕಟ್ಟು ಜನಾಂಗಕ್ಕೆ ಸೇರಿದವರು ಎಂದು ಕುಟುಂಬ ಸದಸ್ಯರು ಮಾಹಿತಿ ನೀಡಿದ್ದಾರೆ.
ವಿನೋದ್ ಜೊತೆಗೆ ನವಶ್ಯ ಮಹಾದ್ಯ ಭೀಮ್ರಾ, ಸರಿತಾ ಸೋನ್ಯಾ ಉಂಬರಸಾದ, ಕೃಷ್ಣ ರಾಮರಾಜ್ ಬುಜಾದ್, ವಿಜಯ್ ಮೋಹನ್ ನಾಗವಾಸಿ, ಜೈರಾಮ್ ಜನ್ಯ ಸಲ್ಕರ್, ಉಧ್ರಾ ರಾಮನ್ ಎಂಬುವರನ್ನು ಬಂಧಿಸಲಾಗಿತ್ತು. ಇದೀಗ ಮಾರ್ಚ್ 8ರಂದು ಕರಾಚಿ ಜೈಲಿನ ಬಾತ್ ರೂಂನಲ್ಲಿ ಪಾರ್ಶ್ವವಾಯುವಿಗೆ ಒಳಗಾಗಿ ವಿನೋದ್ ಬಿದ್ದಿದ್ದರು. ಈ ಘಟನೆ ಬಳಿಕ ಮಾರ್ಚ್ 18ರಂದು ಕರಾಚಿ ಜೈಲಿನಲ್ಲಿ ನಿಧನ ಹೊಂದಿದ್ದಾರೆ. ನಮಗೆ ಯಾವುದೇ ರೀತಿಯ ಸಹಾಯ ಬೇಡ. ಮೃತದೇಹವನ್ನು ಅಲ್ಲಿಂದ ತರಲು ಸಹಾಯ ಮಾಡಿದರೆ ಸಾಕು ಎಂದು ವಿನೋದ್ ಕುಟುಂಬ ಕೇಳಿಕೊಂಡಿದೆ.
ಶೀಘ್ರವೇ ಮೃತದೇಹ ತರುವ ಸಾಧ್ಯತೆ: ಭಾರತ-ಪಾಕಿಸ್ತಾನ ವಿಷಯಗಳ ಬಗ್ಗೆ ಪರಿಣಿತರಾದ ಹಿರಿಯ ಪತ್ರಕರ್ತ ಜತಿನ್ ದೇಸಾಯಿ, ವಿನೋದ್ ಮೃತದೇಹವು ಏಪ್ರಿಲ್ 30 ಅಥವಾ ಮೇ 1ರಂದು ಭಾರತಕ್ಕೆ ಬರಲಿದೆ ಎಂದು ಹೇಳಿದ್ದಾರೆ. ಮೃತ ವಿನೋದ್ಗೆ ಪತ್ನಿ ಸಖು, ಪುತ್ರಿಯರಾದ ಭಾರತಿ, ಮಾಲ್ತಿ, ವೃತಿಕಾ, ಕಲ್ಪಿತ್ ಮತ್ತು ಪುತ್ರರಾದ ಚಿರಾಗ್ ಪಿಂಟು ಇದ್ದಾರೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: ಗುಜರಾತ್ ಕರಾವಳಿಯಲ್ಲಿ ₹ 600 ಕೋಟಿ ಮೌಲ್ಯದ 86 ಕೆಜಿ ಡ್ರಗ್ಸ್ ಜಪ್ತಿ: ಪಾಕ್ ದೋಣಿ, 14 ಜನ ವಶಕ್ಕೆ