ಹೈದರಾಬಾದ್(ತೆಲಂಗಾಣ): ಸೌದಿ ಅರೇಬಿಯಾದಲ್ಲಿ ಪಾಕಿಸ್ತಾನಿ ಗಂಡನಿಂದ ಹೈದರಾಬಾದ್ ಮೂಲದ ಮಹಿಳೆಯೊಬ್ಬರು ಚಿತ್ರಹಿಂಸೆಗೆ ಒಳಗಾದ ಘಟನೆ ಬೆಳಕಿಗೆ ಬಂದಿದೆ. ಆರೋಪಿ ತನ್ನನ್ನು ಬಾಂಗ್ಲಾದೇಶದ ಪ್ರಜೆ ಎಂದು ಮಹಿಳೆಯನ್ನು ನಂಬಿಸಿ ಮದುವೆಯಾಗಿದ್ದ. ಇದೀಗ ಆತನ ದುಷ್ಕೃತ್ಯವನ್ನು ಸಹಿಸಲಾಗದೇ ಸಂತ್ರಸ್ತೆ ಮೆಕ್ಕಾದಿಂದ ತಪ್ಪಿಸಿಕೊಂಡು ಜೆಡ್ಡಾಯಲ್ಲಿ ಆಶ್ರಯ ಪಡೆದಿದ್ದಾಳೆ. ಈ ವಿಷಯವನ್ನು ವಿದೇಶಾಂಗ ಸಚಿವಾಲಯದ ಗಮನಕ್ಕೆ ನೊಂದ ಮಹಿಳೆಯ ತಾಯಿ ತಂದಿದ್ದಾರೆ.
ಸಬಾ ಬೇಗಂ ಚಿತ್ರಹಿಂಸೆಗೆ ಗುರಿಯಾದವರು. ಈಕೆ ರಾಜೇಂದ್ರ ನಗರದ ನಿವಾಸಿ ಸಬೇರಾ ಬೇಗಂ ಎಂಬವರ ಮಗಳು. ಕೆಲ ವರ್ಷಗಳ ಹಿಂದೆ ಈಕೆಯನ್ನು ವ್ಯಕ್ತಿಯೊಬ್ಬರಿಗೆ ಮದುವೆ ಮಾಡಿಕೊಡಲಾಗಿತ್ತು. ವರದಕ್ಷಿಣೆ ಸಂಬಂಧ ಗಂಡನನ್ನು ಬಿಟ್ಟಿದ್ದಳು. ನಂತರ ಬೇರೊಂದು ಮದುವೆ ಮಾಡಲು ಕುಟುಂಬಸ್ಥರು ತೀರ್ಮಾನಿಸಿದ್ದರು. ಅಂತೆಯೇ, ಮೆಕ್ಕಾದಲ್ಲಿ ಚಾಲಕನಾಗಿ ಕೆಲಸ ಮಾಡುತ್ತಿದ್ದ ಮುಖ್ತದೀರ್ ಎಂಬಾತ ತನ್ನ ಪರಿಚಯಸ್ಥ ಅಲಿಹುಸೇನ್ ಅಜೀಜ್ ಉಲ್ ರೆಹಮಾನ್ ಎಂಬಾತನ ಬಗ್ಗೆ ಮಾಹಿತಿ ನೀಡಿದ್ದ.
ಅಲಿಹುಸೇನ್ ಸಹ ಮೆಕ್ಕಾದಲ್ಲಿ ಚಾಲಕನಾಗಿ ಕೆಲಸ ಮಾಡುತ್ತಿದ್ದು, ತಾನು ಬಾಂಗ್ಲಾದೇಶದ ಪ್ರಜೆ ಎಂದು ಹೇಳಿಕೊಂಡಿದ್ದ. ನಂತರ ಕುಟುಂಬಸ್ಥರೊಂದಿಗೆ ಮಾತುಕತೆಯಾಗಿ 2014ರಲ್ಲಿ ಸಬಾಳನ್ನು ಮದುವೆಯಾಗಿದ್ದ. ಇಬ್ಬರೂ ಮೆಕ್ಕಾದಲ್ಲಿ ನೆಲೆಸಿದ್ದು, ಇವರ ದಾಂಪತ್ಯಕ್ಕೆ ಇಬ್ಬರು ಹೆಣ್ಣು, ಒಂದು ಗಂಡು ಮಗುವಿದೆ. ಆದರೆ, ಕೆಲ ವರ್ಷಗಳಿಂದ ಅಲಿಹುಸೇನ್ ಕಿರುಕುಳ ನೀಡಲು ಶುರು ಮಾಡಿದ್ದಾನೆ. ಸಬಾಳನ್ನು ಮನೆಯಲ್ಲಿ ಕೂಡಿ ಹಾಕಿ, ತನ್ನ ತಾಯಿಯೊಂದಿಗೆ ಮಾತನಾಡಲು ಸಹ ಬಿಡುತ್ತಿರಲಿಲ್ಲ. ಇದರಿಂದ ಬೇಸತ್ತ ಸಬಾ ಕೆಲ ದಿನಗಳ ಹಿಂದೆ ತನ್ನ ಮೂವರು ಮಕ್ಕಳೊಂದಿಗೆ ಮನೆಯಿಂದ ಜೆಡ್ಡಾಗೆ ಬಂದು ಹೋಟೆಲ್ನಲ್ಲಿ ತಂಗಿದ್ದಾಳೆ. ಅಲ್ಲಿಂದ ತನ್ನ ತಾಯಿಗೆ ಫೋನ್ ಮಾಡಿದಾಗ ಈ ಸಂಪೂರ್ಣ ವಿಷಯ ಗೊತ್ತಾಗಿದೆ.
ಅಂತೆಯೇ, ಸಬೇರಾ ಬೇಗಂ ಈ ವಿಷಯವನ್ನು ವಿದೇಶಾಂಗ ಸಚಿವಾಲಯಕ್ಕೆ ಪತ್ರ ಬರೆದು ಗಮನಕ್ಕೆ ತಂದಿದ್ದಾರೆ. ವಿದೇಶಾಂಗ ಅಧಿಕಾರಿಗಳು ಸಂತ್ರಸ್ತೆಯನ್ನು ಸಂರ್ಪಕಿಸುವುದಾಗಿ ಭರವಸೆ ನೀಡಿದ್ದಾರೆ. ಈ ಕುರಿತು ಹೈದರಾಬಾದ್ನ ಎಂಬಿಟಿ ಪಕ್ಷದ ಮುಖಂಡ ಅಂಜುದುಲ್ಲಾ ಖಾನ್ ಸಾಮಾಜಿಕ ಜಾಲತಾಣ 'ಎಕ್ಸ್'ನಲ್ಲಿ ಪೋಸ್ಟ್ ಮಾಡಿದ್ದಾರೆ. ಇನ್ನು, ಅಲಿಹುಸೇನ್ ಪಾಸ್ಪೋರ್ಟ್ ಪ್ರಕಾರ, ಈತ ಪಾಕಿಸ್ತಾನದ ಪ್ರಜೆ ಎಂಬುದು ಬಯಲಾಗಿದೆ.
17ರ ಯುವತಿಯೊಂದಿಗೆ ಮತ್ತೊಂದು ಮದುವೆ: ಇದೇ ವೇಳೆ, ಆರೋಪಿ ಅಲಿಹುಸೇನ್ ಇತ್ತೀಚೆಗೆ ಬಾಂಗ್ಲಾದೇಶದ ಮೂಲದ 17 ವರ್ಷದ ಯುವತಿಯೊಂದಿಗೆ ಮತ್ತೊಂದು ಮದುವೆಯಾಗಿದ್ದಾನಂತೆ. 20 ಸಾವಿರ ರಿಯಲ್ (ಸೌದಿ ಹಣ) ಕೊಟ್ಟು ಈ ಯುವತಿಯನ್ನು ಮನೆಗೆ ಕರೆತಂದಿದ್ದ. ಸಬಾ, ಈಕೆಯ ಮೂವರು ಮಕ್ಕಳು ಹಾಗೂ ಈ ಯುವತಿಯನ್ನೂ ಕೊಠಡಿಯಲ್ಲಿ ದುಷ್ಟ ಕೂಡಿಹಾಕಿದ್ದ. ಇದೀಗ ಯುವತಿಯನ್ನೂ ಸಬಾ ತನ್ನೊಂದಿಗೆ ಕರೆದುಕೊಂಡು ಬಂದಿದ್ದಾಳೆ ಎಂದು ತಾಯಿ ಸಬೇರಾ ಬೇಗಂ ತನ್ನ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಗಂಡನಿಂದ ಚಿತ್ರಹಿಂಸೆಗೆ ಒಳಗಾದ ಸಬಾಳ ಪರಿಸ್ಥಿತಿಯ ಕುರಿತಾದ ವಿಡಿಯೋ ಸಾಕ್ಷ್ಯಗಳನ್ನು ಅಧಿಕಾರಿಗಳಿಗೆ ಸಲ್ಲಿಸಿ, ಮಗಳನ್ನು ರಕ್ಷಿಸುವಂತೆ ಮನವಿ ಮಾಡಿದ್ಧಾರೆ.
ಇದನ್ನೂ ಓದಿ: ಉದ್ಯೋಗದ ಹೆಸರಲ್ಲಿ ರಷ್ಯಾಗೆ ಕಳುಹಿಸಿ ಯುದ್ಧಕ್ಕೆ ತಳ್ಳಿದ್ರು: ಭಾರತೀಯ ಯುವಕ ಸಾವು