ಅಮ್ರೇಲಿ, ಗುಜರಾತ್: ಅಮ್ರೇಲಿ ಜಿಲ್ಲೆಯಲ್ಲಿ ರೈತ ಕುಟುಂಬವೊಂದು ತಮ್ಮ ಅದೃಷ್ಟದ ಕಾರನ್ನು ಸಮಾಧಿ ಮಾಡುವ ಮೂಲಕ ವಿದಾಯ ಹೇಳಿದ ಅಪರೂಪದ ಘಟನೆ ನಡೆದಿದೆ.
ಲಾಠಿ ತಾಲೂಕಿನ ಪಾದರ್ಸಿಂಗ ಗ್ರಾಮದಲ್ಲಿ ಗುರುವಾರ ಸಂಜತ್ ಪೋಲಾರ ಮತ್ತು ಅವರ ಕುಟುಂಬ ನೆರವೇರಿಸಿದ ಕಾರಿನ ಅಂತ್ಯ ಸಂಸ್ಕಾರ ಕಾರ್ಯಕ್ರಮದಲ್ಲಿ ಅರ್ಚಕರು, ಗ್ರಾಮಸ್ಥರು ಸೇರಿದಂತೆ ಸುಮಾರು 1,500 ಜನರು ಭಾಗವಹಿಸಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ವ್ಯಾಗನ್ ಆರ್ ಕಾರನ್ನು ಹೂವುಗಳಿಂದ ಅಲಂಕರಿಸಿ ಸಂಜಯ್ ಅವರ ಮನೆಯಿಂದ ಜಮೀನಿನಲ್ಲಿರುವ ಸಮಾಧಿ ಸ್ಥಳದವರೆಗೆ ಮೆರವಣಿಗೆಯಲ್ಲಿ ಕೊಂಡೊಯ್ಯಲಾಗಿದೆ. ಬಳಿಕ ಜೆಸಿಬಿಯಿಂದ ಅಗೆದಿದ್ದ 15 ಅಡಿ ಆಳದ ದೊಡ್ಡದಾದ ಹೊಂಡಕ್ಕೆ 12 ವರ್ಷಗಳ ಹಿಂದೆ ಖರೀದಿಸಿದ್ದ ವ್ಯಾಗನ್ ಆರ್ ಕಾರನ್ನು ಇಳಿಸಿ ಅದಕ್ಕೆ ಹಸಿರು ಬಟ್ಟೆಯನ್ನು ಹೊದಿಸಿ ಪುರೋಹಿತರು ಮಂತ್ರಗಳನ್ನು ಪಠಿಸಿ ಶಾಸ್ತ್ರೋಕ್ತವಾಗಿ ಪೂಜೆ ನೆರವೇರಿಸಿದರು. ಈ ವೇಳೆ ಕುಟುಂಬಸ್ಥರು ಕಾರಿಗೆ ಪೂಜೆ ಸಲ್ಲಿಸಿ ಗುಲಾಬಿ ದಳಗಳನ್ನು ಸುರಿದು ನೆಚ್ಚಿನ ಕಾರಿಗೆ ಬೀಳ್ಕೊಟ್ಟರು. ಕೊನೆಗೆ ಜೆಸಿಬಿ ಮೂಲಕ ಮಣ್ಣು ಮುಂಚಿ ಕಾರನ್ನು ಸಮಾಧಿ ಮಾಡಲಾಯಿತು.
ಸೂರತ್‌ನಲ್ಲಿ ಕನ್‌ಸ್ಟ್ರಕ್ಷನ್ ಉದ್ಯಮ ನಡೆಸುತ್ತಿರುವ ಸಂಜಯ್ ಪೋಲಾರ ಅವರು, ತಮ್ಮ ಕುಟುಂಬಕ್ಕೆ ಅದೃಷ್ಟ ತಂದು ಕೊಟ್ಟ ಕಾರಿನ ನೆನಪು ಶಾಶ್ವತವಾಗಿ ಉಳಿಯಲು ಸಮಾಧಿ ಮಾಡಿರುವುದಾಗಿ ಹೇಳಿದ್ದಾರೆ.
ಇದನ್ನೂ ಓದಿ: ಯೂಟ್ಯೂಬ್ ನೋಡಿಕೊಂಡು ನಕಲಿ ನೋಟ್ ಪ್ರಿಂಟ್ ಮಾಡುತ್ತಿದ್ದ ಆರೋಪಿಗಳ ಬಂಧನ