ಪಶ್ಚಿಮ ಚಂಪಾರಣ್, ಬಿಹಾರ: ಜಿಲ್ಲೆಯ ವಾಲ್ಮೀಕಿ ಹುಲಿ ಸಂರಕ್ಷಿತ ಪ್ರದೇಶದಲ್ಲಿ (ವಿಟಿಆರ್) ಹುಲಿಯೊಂದು ಮೃತಪಟ್ಟಿರುವುದು ಪತ್ತೆಯಾಗಿದೆ. ಮಾಹಿತಿ ನೀಡಿದ ನಂತರ ಅರಣ್ಯ ಇಲಾಖೆ ಹುಲಿಯ ಶವವನ್ನು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆ ನಡೆಸಿದೆ. ಸೋಮವಾರ ಅಧಿಕಾರಿಗಳು ಈ ಮಾಹಿತಿ ನೀಡಿದ್ದಾರೆ.
ವಿಟಿಆರ್‌ನ ಅರಣ್ಯ ವಿಭಾಗ-1 ರ ಮಂಗುರಾಹೊನ್ ಅರಣ್ಯ ವ್ಯಾಪ್ತಿಯಲ್ಲಿ ಅರಣ್ಯ ಸಿಬ್ಬಂದಿ ಪ್ರತಿದಿನ ಗಸ್ತು ತಿರುಗುತ್ತಿದ್ದರು. ಈ ವೇಳೆ, ಥೋರಿ ಸಂಕೀರ್ಣದ ಬಲ್ಬಲ್-1 ಉಪ ಸಂಕೀರ್ಣದಲ್ಲಿ ಗಂಡು ಹುಲಿ ಸತ್ತಿರುವುದು ಕಂಡು ಬಂದಿದೆ. ಕೂಡಲೇ ಅರಣ್ಯ ಸಿಬ್ಬಂದಿ ಹುಲಿ ಸಾವನ್ನಪ್ಪಿರುವುದರ ಬಗ್ಗೆ ದೂರವಾಣಿ ಮೂಲಕ ಹಿರಿಯ ಅಧಿಕಾರಿಗಳಿಗೆ ಮಾಹಿತಿ ರವಾನಿಸಿದ್ದರು ಎಂದು ಅರಣ್ಯ ಇಲಾಖೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮಾಹಿತಿ ಬಂದ ಕೂಡಲೇ ವಾಲ್ಮೀಕಿ ಹುಲಿ ಸಂರಕ್ಷಿತ ಪ್ರದೇಶದ ಸಂರಕ್ಷಣಾಧಿಕಾರಿ ಕಮ್ ಏರಿಯಾ ನಿರ್ದೇಶಕ ಡಾ.ನೇಶಮಣಿ ಕೆ. ಅರಣ್ಯ ವಿಭಾಗಾಧಿಕಾರಿ ಹಾಗೂ ಉಪನಿರ್ದೇಶಕರು, ವಿಭಾಗ-1 ಅವರು ಪ್ರದುಮ್ನ ಗೌರವ್ ಮತ್ತು ಪಶುವೈದ್ಯಾಧಿಕಾರಿಗಳೊಂದಿಗೆ ಘಟನಾ ಸ್ಥಳಕ್ಕೆ ಆಗಮಿಸಿದರು. ಸ್ಥಳದಲ್ಲಿ ಮೃತಪಟ್ಟಿರುವ ಹುಲಿ ಗಂಡು ಎಂದು ಗುರುತಿಸಲಾಯಿತು.
ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದ ಎಸ್‌ಒಪಿ ಅಡಿ ಹುಲಿ ಶವದ ಮರಣೋತ್ತರ ಪರೀಕ್ಷೆಯನ್ನು ಎಲ್ಲ ಅಧಿಕಾರಿಗಳು, ಸ್ಥಳೀಯ ಸಮಿತಿ ಮತ್ತು ಅರಣ್ಯ ಸಿಬ್ಬಂದಿಗಳ ಸಮ್ಮುಖದಲ್ಲಿ ನಡೆಸಲಾಗಿದೆ ಎಂದು ಡಾ.ನೇಶಮಣಿ ಸೋಮವಾರ ತಿಳಿಸಿದರು. ಘಟನಾ ಸ್ಥಳದ ಅವಲೋಕನ ಮತ್ತು ಪರಿಶೀಲನೆಯ ವೇಳೆ ಮೇಲ್ನೋಟಕ್ಕೆ ಇನ್ನೊಂದು ಗಂಡು ಹುಲಿಯೊಂದಿಗೆ ನಡೆದ ಕಾದಾಟದಲ್ಲಿ ಈ ಹುಲಿ ಸಾವನ್ನಪ್ಪಿರುವುದು ಬೆಳಕಿಗೆ ಬಂದಿದೆ ಎಂದು ಅವರು ಹೇಳಿದರು.
ಪ್ರದೇಶದ ಮೇಲೆ ಪ್ರಾಬಲ್ಯ: ಅರಣ್ಯ ಇಲಾಖೆ ಅಧಿಕಾರಿಗಳ ಪ್ರಕಾರ, ಹುಲಿಗಳು ಪ್ರತಿ 25 ಕಿಲೋಮೀಟರ್ ವ್ಯಾಪ್ತಿಯಲ್ಲಿ ತಮ್ಮ ಪ್ರದೇಶ ರೂಪಿಸಿಕೊಳ್ಳುತ್ತವೆ. ಒಂದು ಹುಲಿ ಮತ್ತೊಂದು ಹುಲಿಯ ಪ್ರದೇಶಕ್ಕೆ ತಲುಪಿದಾಗ ಸಾಮಾನ್ಯವಾಗಿ ಅವುಗಳು ಮಧ್ಯೆ ಕಾದಾಟ ನಡೆಯುತ್ತದೆ. ಹೀಗಾಗಿ ಹುಲಿಗಳ ಜೀವವು ಸದಾ ಅಪಾಯದಲ್ಲಿರುತ್ತವೆ.
ಹುಲಿಗಳು ಪರಸ್ಪರ ದಾಳಿ ಏಕೆ?: ತಜ್ಞರ ಪ್ರಕಾರ, ಪರಸ್ಪರ ಕಾದಾಟದಲ್ಲಿ ಹುಲಿಗಳು ತುಂಬಾ ಕೋಪಗೊಂಡಾಗ, ಒಂದು ಹುಲಿ ಇನ್ನೊಂದನ್ನು ಕೊಲ್ಲುತ್ತದೆ. ಹುಲಿಗಳು ಹೆಚ್ಚಾಗಿ ತಮ್ಮ ನೆಲಕ್ಕಾಗಿ ಹೋರಾಡುತ್ತವೆ, ಹಸಿವಿಗಾಗಿ ಅಲ್ಲ. ತಜ್ಞರ ಪ್ರಕಾರ, ಕಾದಾಟದಲ್ಲಿ ಹುಲಿ ಮೃತಪಟ್ಟ ಬಳಿಕ ಸತ್ತ ಹುಲಿಯ ದೇಹವನ್ನು ಛಿದ್ರ ಮಾಡುತ್ತದೆಯೇ ಹೊರತು ಅದನ್ನು ತಿನ್ನುವುದಿಲ್ಲ.
ವಾಲ್ಮೀಕಿ ಹುಲಿ ಸಂರಕ್ಷಿತಾರಣ್ಯದಲ್ಲಿ ಈ ಹಿಂದೆಯೂ ಹುಲಿಗಳ ನಡುವೆ ಸಂಘರ್ಷ ನಡೆದಿದ್ದು, ಹುಲಿಗಳು ಪ್ರಾಣ ಕಳೆದುಕೊಂಡಿವೆ. ಪ್ರಸ್ತುತ, ವಿಟಿಆರ್‌ನಲ್ಲಿ ಹುಲಿಗಳ ಸಂಖ್ಯೆ ನಿರಂತರವಾಗಿ ಹೆಚ್ಚುತ್ತಿದೆ ಮತ್ತು ಸುಮಾರು 60 ಹುಲಿಗಳು ಕಾಡಿನಲ್ಲಿವೆ. ಆದರೆ ಹುಲಿಗಳ ನಡುವೆ ತಮ್ಮ ತಮ್ಮ ಪ್ರದೇಶದ ಬಗ್ಗೆ ಸಂಘರ್ಷವಿದೆ.
ಓದಿ: ಕಾಡು ಪ್ರಾಣಿಗಳ ದಾಹ ನೀಗಿಸಲು ನದಿಗೆ ಬೋರ್ವೆಲ್ ನೀರು ಹರಿಸುವ ರೈತ ಪಾಪಣ್ಣ ಭಟ್ಟರು - Borewell Water To River