ಕೋಲ್ಕತ್ತಾ(ಪಶ್ಚಿಮ ಬಂಗಾಳ): ವಿವಿಧ ವಿಭಾಗಗಳಲ್ಲಿ ಸೇವೆಗೆ ನಿಯೋಜಿತರಾಗಿರುವ ಯೋಧರು ತಮ್ಮ ಸರ್ವೀಸ್ ರೈಫಲ್ನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆಗಳು ಈಚೆಗೆ ಹೆಚ್ಚಾಗಿ ಬೆಳಕಿಗೆ ಬರುತ್ತಿವೆ. ಕೌಟುಂಬಿಕ ಕಾರಣ, ಕೆಲಸದ ಒತ್ತಡ ಸೇರಿದಂತೆ ಹಲವು ಕಾರಣಕ್ಕಾಗಿ ಈ ರೀತಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ.
ಪಶ್ಚಿಮ ಬಂಗಾಳದ ಕೋಲ್ಕತ್ತಾ ವಿಮಾನ ನಿಲ್ದಾಣದಲ್ಲಿ ಭದ್ರತೆಗಿದ್ದ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆಯ (ಸಿಐಎಸ್‌ಎಫ್) ಯೋಧರೊಬ್ಬರು ಕರ್ತವ್ಯದ ವೇಳೆಯೇ ತಮ್ಮಲ್ಲಿದ್ದ ಸರ್ವೀಸ್ ರೈಫಲ್ನಿಂದ ಗುಂಡು ಹಾರಿಸಿಕೊಂಡು ಗುರುವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ತೆಲಂಗಾಣದ ಯುವ ಯೋಧ ಸಿ.ವಿಷ್ಣು (22) ಮೃತರು. ವಿಮಾನ ನಿಲ್ದಾಣದ ಗೇಟ್ 5ರಲ್ಲಿ ಭದ್ರತೆಗಿದ್ದ ವೇಳೆ ಬೆಳಗ್ಗೆ 5.30ರ ಸುಮಾರಿಗೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬುಲೆಟ್ ಸದ್ದು ಕೇಳಿ ಬಂದ ತಕ್ಷಣ ಸಿಬ್ಬಂದಿ ಸ್ಥಳಕ್ಕೆ ತೆರಳಿದಾಗ ಯೋಧ ವಿಷ್ಣು ನೆಲಕ್ಕುರುಳಿದ್ದರು. ತಕ್ಷಣವೇ ಅವರನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಆದರೆ, ತೀವ್ರ ರಕ್ತಸ್ರಾವದಿಂದಾಗಿ ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.
ಸಿಐಎಸ್‌ಎಫ್‌ನ ಹಿರಿಯ ಅಧಿಕಾರಿಗಳು ಹಾಗೂ ವಿಮಾನ ನಿಲ್ದಾಣದ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದಾರೆ. ಯೋಧನ ಆತ್ಮಹತ್ಯೆಗೆ ಕಾರಣವೇನು ಎಂಬುದನ್ನು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಯೋಧ ವಿಷ್ಣು ಅವರು 2022ರಿಂದ ಸಿಐಎಸ್‌ಎಫ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದರು.
ಹಿಂದಿನ ಘಟನೆಗಳು: ಇದಕ್ಕೂ ಮೊದಲು ಫೆಬ್ರವರಿಯಲ್ಲಿ ಅಲಿಪುರದ ಪೊಲೀಸ್ ತರಬೇತಿ ಶಾಲೆಯಲ್ಲಿ ಕಾನ್ಸ್ಟೇಬಲ್ವೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದರು. ಜಯಂತ್ ಸರ್ಕಾರ್ (28) ಎಂಬ ಸಿಬ್ಬಂದಿ ತಮ್ಮಲ್ಲಿದ್ದ ಸರ್ವೀಸ್ ರಿವಾಲ್ವರ್‌ನಿಂದ ಗುಂಡು ಹಾರಿಸಿಕೊಂಡಿದ್ದರು. ಅವರನ್ನು ಪಿಟಿಎಸ್‌ನ ಯುದ್ಧ ಬೆಟಾಲಿಯನ್‌ನಲ್ಲಿ ನಿಯೋಜಿಸಲಾಗಿತ್ತು.
ಫೆಬ್ರವರಿಯಲ್ಲಿ ನಡೆದ ಮತ್ತೊಂದು ಘಟನೆಯಲ್ಲಿ ಕಾನ್‌ಸ್ಟೇಬಲ್ ತಾವೇ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ತನಿಖೆ ನಡೆಸಿದ ನಂತರ ಮೃತಪಟ್ಟ ಪೊಲೀಸ್ ಸಿಬ್ಬಂದು ಪುಲಕ್ ಬಿಪಾರಿ ಅವರು ಕರ್ತವ್ಯದ ಮೇಲೆ ಇರಲಿಲ್ಲ ಎಂದು ತಿಳಿದು ಬಂದಿತ್ತು. ಆದರೆ, ಸಾವಿನ ಕಾರಣದ ಬಗ್ಗೆ ತಿಳಿದು ಬಂದಿರಲಿಲ್ಲ.
ಇದನ್ನೂ ಓದಿ: ಜಾರ್ಖಂಡ್: ಸರ್ವೀಸ್ ರೈಫಲ್ನಿಂದ ಗುಂಡು ಹಾರಿಸಿಕೊಂಡು ಸಿಆರ್‌ಪಿಎಫ್ ಯೋಧ ಆತ್ಮಹತ್ಯೆ