ಫಲೋಡಿ (ರಾಜಸ್ಥಾನ): ಇಂಟರ್ನೆಟ್ ಮತ್ತು ಸಾಮಾಜಿಕ ಮಾಧ್ಯಮದ ಈ ಯುಗದ ಅನುಕೂಲಗಳು ಹಲವು, ಆದರೆ ಅನಾನುಕೂಲಗಳು ಸಹ ಅಷ್ಟೇ ಹೆಚ್ಚು. ಒಂದೆಡೆ ಸಾಮಾಜಿಕ ಜಾಲತಾಣಗಳ ಮೂಲಕ ಅನಾಮಧೇಯ ವಿಷಯಗಳು ಮುನ್ನೆಲೆಗೆ ಬರುತ್ತಿದ್ದರೆ ಮತ್ತೊಂದೆಡೆ ಕೆಲವರು ಅಂತರ್ಜಾಲದಲ್ಲಿ ವೈರಲ್ ಆಗುವ ವೈಯಕ್ತಿಕ ವಿಷಯಗಳು ಮತ್ತು ಅವರ ಗೌರವಕ್ಕೆ ಧಕ್ಕೆಯುಂಟು ಮಾಡುತ್ತಿರುವುದು ಬೆಳಕಿಗೆ ಬರುತ್ತಿದೆ.
ಸೋಷಿಯಲ್ ಮೀಡಿಯಾದಲ್ಲಿ ಹಲವಾರು ರೀತಿಯ ಮೀಮ್‌ಗಳು ಜನರನ್ನು ತುಂಬಾ ನೋಯಿಸುತ್ತವೆ. ಹಾಗಾಗಿ ಕೆಲವರು ಮನನೊಂದು ಆತ್ಮಹತ್ಯೆ ಮಾಡಿಕೊಳ್ಳುವಂತ ನಿರ್ಧಾರಕ್ಕೆ ಬರುತ್ತಾರೆ. ಇತ್ತೀಚೆಗಷ್ಟೇ ಸಾಮಾಜಿಕ ಜಾಲತಾಣಗಳಲ್ಲಿ ವೃದ್ಧರೊಬ್ಬರ ಮೀಮ್‌ಗಳು ವೈರಲ್ ಆಗಿದ್ದವು. ಆ ಪ್ರದೇಶದ ನಿವಾಸಿಗಳು ತಮ್ಮ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ವೀಕ್ಷಣೆಗಳು ಮತ್ತು ಲೈಕ್ಗಳನ್ನು ಹೆಚ್ಚಿಸಲು ವೃದ್ಧನಿಗೆ ಕಿರುಕುಳ ನೀಡಲು ಪ್ರಾರಂಭಿಸಿದ್ದಾರೆ. ಇದರಿಂದ ಮನನೊಂದ ವೃದ್ಧ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಆರೋಪಗಳು ಕೇಳಿಬಂದಿದೆ.
‘ಭಂಗಾರ್ ಲೇವನೋ ಹೈ ಥಾರೆ’ ಮೂಲಕ ಪ್ರಸಿದ್ಧಿ ಪಡೆದಿದ್ದ ವೃದ್ಧ ಬಾಬಾ ಭಾನುವಾರ ಲೋಹಾವತ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಸುದ್ದಿ ತಿಳಿದ ನಂತರ ಲೋಹಾವತ್ ಪೊಲೀಸರು ಸ್ಥಳಕ್ಕೆ ದೌಡಾಯಿಸಿದರು. ಅಷ್ಟೊತ್ತಿಗಾಗಲೇ ವೃದ್ಧನ ಪ್ರಾಣ ಪಕ್ಷಿ ಹಾರಿಹೋಗಿತ್ತು. ಅವರ ಬಳಿ ದೊರೆತ ದಾಖಲೆಗಳ ಪ್ರಕಾರ, ಭಂಗಾರ್ವಾಲೆ ಬಾಬಾನ ನಿಜವಾದ ಹೆಸರು ಪ್ರತಾಪ್ ರಾಮ್ ಚೌಹ್ತಾನ್, ಅವರು ಬಾರ್ಮರ್ ನಿವಾಸಿ.
ಭಂಗಾರ್ ಬಾಬಾ ವಿಡಿಯೋ ವೈರಲ್: ಮಾಹಿತಿ ಪ್ರಕಾರ, ಸುಮಾರು 2 ತಿಂಗಳ ಹಿಂದೆ ಜಪಾನ್ ಮಹಿಳಾ ಪ್ರವಾಸಿ ಮೆಗುನಿ ರಾಜಸ್ಥಾನಕ್ಕೆ ಭೇಟಿ ನೀಡಲು ಬಂದಿದ್ದರು. ಒಂದು ದಿನ ಅವರು ತನ್ನ ಸ್ನೇಹಿತರೊಂದಿಗೆ ಮಾರವಾರಕ್ಕೆ ಹೋಗುತ್ತಿದ್ದರು. ಅದೇ ಸಮಯಕ್ಕೆ ಗುಜರಿ ಕೆಲಸ ಮಾಡುತ್ತಿದ್ದ ಬಾಬಾ ತನ್ನ ಕೈಗಾಡಿಯೊಂದಿಗೆ ಬರುತ್ತಿರುವುದು ಕಾಣಿಸಿತು. ಅದೇ ಸಮಯಕ್ಕೆ ಜಪಾನಿ ಪ್ರವಾಸಿ ಮೆಗುನಿಯ ಸಹಚರರು ಈ ಬಾಬಾನ ವಿಡಿಯೋ ಮಾಡಿದರು. ವಿಡಿಯೋದಲ್ಲಿ ಅವರ ಸಂಭಾಷಣೆಯೂ ಸೆರೆಯಾಗಿತ್ತು.
ಅವರು ಈ ವಿಡಿಯೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಅಪ್ಲೋಡ್ ಮಾಡಿದರು. ಆಗಿನಿಂದ ವಿಡಿಯೋ ವೈರಲ್ ಆಗಿದೆ. ಲಕ್ಷಾಂತರ ಜನರು ಈ ವಿಡಿಯೋವನ್ನು ವೀಕ್ಷಿಸಿದರು. ನಂತರ ಅಲ್ಲಿನ ಜನರು ಬಾಬಾಗೆ ಕಿರುಕುಳ ನೀಡಲು ಪ್ರಾರಂಭಿಸಿದರು. ಈ ಮುದುಕ ಎಲ್ಲಿ ಕಂಡರೂ ಜನ ಬಾಬಾರನ್ನು ಗೇಲಿ ಮಾಡತೊಡಗಿದರು. ಇದರಿಂದ ಮನನೊಂದ ವೃದ್ಧ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಆರೋಪವಿದೆ.
ಘಟನಾ ಸ್ಥಳದಲ್ಲಿ ಕೈಗಾಡಿ ಪತ್ತೆ: ಲೊಹಾವತ್ ಠಾಣೆಯ ಸಹಾಯಕ ಸಬ್ ಇನ್ಸ್‌ಪೆಕ್ಟರ್ ಶೈತಾನಾರಾಮ್ ಪನ್ವಾರ್ ಮಾತನಾಡಿ, ಘಟನೆ ಕುರಿತು ಮಾಹಿತಿ ಪಡೆದ ಲೋಹಾವತ್ ಪೊಲೀಸರು ಕೂಡ ಸ್ಥಳಕ್ಕೆ ಧಾವಿಸಿ ಮೃತದೇಹವನ್ನು ವಶಕ್ಕೆ ತೆಗೆದುಕೊಂಡು ಶವಾಗಾರದಲ್ಲಿರಿಸಿದ್ದಾರೆ. ಘಟನಾ ಸ್ಥಳದಲ್ಲಿ ಬೀದಿಬದಿ ವ್ಯಾಪಾರಿಯ ಕೈಗಾಡಿ ಪತ್ತೆಯಾಗಿದ್ದು, ಅದರಲ್ಲಿ ಹಳೆ ವಸ್ತುಗಳಿದ್ದವು. ಘಟನೆ ಬಗ್ಗೆ ತನಿಖೆ ನಡೆಸಿ ಕ್ರಮ ಕೈಗೊಳ್ಳುವುದಾಗಿ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಓದಿ: ಹುಬ್ಬಳ್ಳಿಯ 'ಬಡವರ ಸಂಜೀವಿನಿ' ಕಿಮ್ಸ್ ಆಸ್ಪತ್ರೆಯ ಹೆಸರು ಬದಲು; ಇದು 3ನೇ ಬಾರಿ - KIMS Rename