ನವದೆಹಲಿ: ಜಗತ್ತಿನಾದ್ಯಂತ ಕೋಟ್ಯಂತರ ಜನರನ್ನು ಒಟ್ಟುಗೂಡಿಸುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ನೀಡಿರುವ ಹೇಳಿಕೆಗೆ ನಾರ್ವೆ ರಾಯಭಾರಿ ಮೇ ಎಲಿನ್ ಸ್ಟೆನರ್ ಸಮ್ಮತಿ ಸೂಚಿಸಿದ್ದಾರೆ. ಇದೇ ವೇಳೆ ಅವರು ಇದು ಭಾರತದಿಂದ ಜಗತ್ತಿಗೆ ಸಿಕ್ಕ ದೊಡ್ಡ ಉಡುಗೊರೆಯಾಗಿದೆ ಎಂದಿದ್ದಾರೆ.
ಜೂನ್ 21ರಂದು ಈ ಬಾರಿ 10ನೇ ಅಂತಾರಾಷ್ಟ್ರೀಯ ಯೋಗ ದಿನ ಆಚರಣೆ ಕುರಿತು ಪ್ರಧಾನಿ ನರೇಂದ್ರ ಮೋದಿ ಎಕ್ಸ್ ಜಾಲತಾಣದಲ್ಲಿ ಹಂಚಿಕೊಂಡ ಪೋಸ್ಟ್ ಜೊತೆ ನಾರ್ವೆ ರಾಯಭಾರಿ ಕೂಡ ಅವರು ಯೋಗ ಮಾಡುತ್ತಿರುವ ವಿಡಿಯೋವನ್ನು ಹಂಚಿಕೊಂಡಿದ್ದಾರೆ.
ಸಾಂಸ್ಕೃತಿ ಮತ್ತು ಭೌಗೋಳಿಕ ಮಿತಿ ದಾಟಿ, ಜಗತ್ತಿನ ಜನರನ್ನು ಒಟ್ಟುಗೂಡಿಸುವಲ್ಲಿ ಯೋಗ ಪ್ರಮುಖವಾಗಿದೆ. ಜಗತ್ತು 10ನೇ ಅಂತಾರಾಷ್ಟ್ರೀಯ ದಿನಾಚರಣೆ ಆಚರಿಸಲು ಇನ್ನು 10 ದಿನ ಉಳಿದಿದೆ. ಏಕತೆ ಮತ್ತು ಒಟ್ಟುಗೂಡಿಸುವ ಈ ಯೋಗ ಆಚರಣೆಗೆ ನೀವು ಮುಂದಾಗಿ, ನಿಮ್ಮ ಜೊತೆಯಲ್ಲಿರುವವರನ್ನು ಯೋಗ ಅಭ್ಯಾಸ ಮಾಡಲು ಪ್ರೇರೇಪಿಸಿ. ಈ ಯೋಗ ಮೂಲಕ ಜಗತ್ತಿನ ಕೋಟ್ಯಂತರ ಜನರು ಸಮಗ್ರ ಯೋಗಕ್ಷೇಮ ವೃದ್ಧಿಯನ್ನು ಕಾಣುತ್ತಿದ್ದಾರೆ ಎಂದು ಪ್ರಧಾನಿ ತಿಳಿಸಿದ್ದರು.
ಈ ಪೋಸ್ಟ್ಗೆ ಪ್ರತಿಕ್ರಿಯಿಸಿರುವ ಮೇ ಎಲಿನ್ ಸ್ಟೆನರ್, ಪ್ರಧಾನಿ ನರೇಂದ್ರ ಮೋದಿ ಅವರೇ ನಿಮ್ಮ ಮಾತನ್ನು ಒಪ್ಪುತ್ತೇನೆ. ಜಗತ್ತಿಗೆ ಭಾರತದಿಂದ ಸಿಕ್ಕ ಅದ್ಬುತ ಉಡುಗೊರೆ ಇದಾಗಿದೆ. ಇಲ್ಲಿ ನಾರ್ವೆ ರಾಯಭಾರಿ ಕಚೇರಿ ಆರಂಭ ಮಾಡಿದಾಗ ನಾನು ಯೋಗದಲ್ಲಿನ ಉನ್ನತ ಗುರಿ ಸಾಧಿಸುವ ನಿರ್ಧಾರ ಮಾಡಿದೆ. ಇದೀಗ ನೀವು ನನ್ನ ಜೊತೆಯಲ್ಲಿ ಅಂತಾರಾಷ್ಟ್ರೀಯ ಯೋಗ ದಿನಕ್ಕೆ ಜೊತೆಯಾಗಲಿದ್ದೀರಾ. ಬನ್ನಿ , ಯೋಗ ಸವಾಲನ್ನು ಪೂರೈಸೋಣ ಎಂದಿದ್ದಾರೆ.
ಯೋಗ ಕುರಿತು ಸರಣಿ ಪೋಸ್ಟ್ ಹಂಚಿಕೊಂಡಿದ್ದ ಪ್ರಧಾನಿ ಮೋದಿ, ಯೋಗವನ್ನು ತಮ್ಮ ಜೀವನದ ಅವಿಭಾಜ್ಯ ಅಂಗವನ್ನಾಗಿ ಮಾಡುವ ಬದ್ಧತೆಯನ್ನು ನಾವು ತೋರಿಸಬೇಕಿದೆ ಎಂದು ವಿವಿಧ ಆಸನ ಮತ್ತು ಅವುಗಳ ಪ್ರಯೋಜನದ ಪೋಸ್ಟ್ ಅನ್ನು ಹಂಚಿಕೊಂಡಿದ್ದರು.
ಭಾರತದ ಪ್ರಾಚೀನ ಯೋಗದ ಆರೋಗ್ಯಕರ ಪ್ರಯೋಜನ ಕುರಿತು ಸಾರುವ ಉದ್ದೇಶದಿಂದ ವಿಶ್ವಸಂಸ್ಥೆಯಲ್ಲಿ ಈ ಕುರಿತು ಪ್ರಸ್ತಾವನೆಯನ್ನು 2014ರಲ್ಲಿ ಭಾರತದ ಪ್ರತಿನಿಧಿ ಮಂಡಿಸಿದ್ದರು. ಇದಕ್ಕೆ ಇಡಿ ವಿಶ್ವ ಬೆಂಬಲ ಸೂಚಿಸಿದ ಫಲವಾಗಿ ಜೂನ್ 21ರಂದು ವಿಶ್ವ ಅಂತಾರಾಷ್ಟ್ರೀಯ ದಿನವಾಗಿ ಘೋಷಣೆ ಮಾಡಲಾಗಿತ್ತು.
ಕಳೆದ ವರ್ಷ ನ್ಯೂಯಾರ್ಕ್‌ನಲ್ಲಿರುವ ವಿಶ್ವಸಂಸ್ಥೆಯ ಪ್ರಧಾನ ಕಚೇರಿಯಲ್ಲಿ ನಡೆದ ಯೋಗ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಅವರು ಭಾಗಿಯಾಗಿದ್ದರು. ಈ ಕಾರ್ಯಕ್ರಮ ಗಿನ್ನೆಸ್ ದಾಖಲೆ ಪುಟ ಕೂಡ ಸೇರಿದೆ.
ಇದನ್ನೂ ಓದಿ: ಏಕತೆ, ಸಾಮರಸ್ಯದ ಪ್ರತೀಕವಾಗಿ ಯೋಗ ದಿನಾಚರಣೆ: ಪ್ರಧಾನಿ ನರೇಂದ್ರ ಮೋದಿ