ಕಾನ್ಪುರ (ಉತ್ತರಪ್ರದೇಶ): ಕಟ್ ಮಾಡುವಾಗ ಮಾತ್ರವಲ್ಲದೇ, ಖರೀದಿಸುವಾಗಲೂ ಕಣ್ಣೀರು ತರಿಸುತ್ತಿದ್ದ ಈರುಳ್ಳಿ ಸಮಸ್ಯೆಯನ್ನು ನೀಗಿಸಲು ಉತ್ತರಪ್ರದೇಶದ ಕಾನ್ಪುರ ವಿವಿಯ ವಿಜ್ಞಾನಿಗಳು ಹೊಸ ಉಪಾಯವನ್ನು ಕಂಡು ಹಿಡಿದಿದ್ದಾರೆ. ಇದರಿಂದ ಪ್ರತಿವರ್ಷ ತಲೆದೋರುವ ಈರುಳ್ಳಿ ಕೊರತೆಯನ್ನು ಇಲ್ಲವಾಗಿಸಲು ಮುಂದಾಗಿದ್ದಾರೆ.
ಕಾನ್ಪುರದ ಚಂದ್ರಶೇಖರ್ ಆಜಾದ್ ವಿಶ್ವವಿದ್ಯಾಲಯದ ವಿಜ್ಞಾನಿಗಳು 93 ಹೊಸ ತಳಿಯ ಈರುಳ್ಳಿ ಬೀಜಗಳನ್ನು ಅಭಿವೃದ್ಧಿಪಡಿಸಿದ್ದಾರೆ. ಇವುಗಳಲ್ಲಿ ವಿವಿಧ ಜಾತಿಯ ಕೆಂಪು ಮತ್ತು ಬಿಳಿ ಈರುಳ್ಳಿಯ ಬೀಜಗಳೂ ಇವೆ. ಇವುಗಳನ್ನು ಸರ್ವಕಾಲಕ್ಕೂ ಬೆಳೆಯಬಹುದಾಗಿದ್ದು, ದೇಶದಲ್ಲಿ ಪ್ರತಿ ವರ್ಷ ಎದುರಾಗುವ ಈರುಳ್ಳಿ ಕೊರತೆ ನೀಗಿಸಬಹುದು ಎಂದು ವಿಜ್ಞಾನಿಗಳು ತಿಳಿಸಿದ್ದಾರೆ. ಈ ಬೀಜಗಳನ್ನು ದೇಶಾದ್ಯಂತ ಎಲ್ಲ ರೈತರಿಗೆ ಒದಗಿಸಲಾಗುವುದು, ಎರಡೂ ಹಂಗಾಮಿನಲ್ಲಿ (ರಬಿ ಮತ್ತು ಖಾರಿಫ್) ಇವನ್ನು ಬೆಳೆಯಬಹುದು ಎಂದು ಹೇಳಿದ್ದಾರೆ.
ದೇಶದಲ್ಲಿ ದೊಡ್ಡ ರಾಜ್ಯಗಳಲ್ಲಿ ಒಂದಾದ ಉತ್ತರ ಪ್ರದೇಶದಲ್ಲಿ ಈರುಳ್ಳಿ ಬೆಳೆಯುವುದು ತೀರಾ ಕಡಿಮೆಯಾಗಿದೆ. ಇದನ್ನು ಗಮನದಲ್ಲಿಟ್ಟುಕೊಂಡು ಹೊಸ ಈರುಳ್ಳಿ ತಳಿಗಳನ್ನು ಶೋಧಿಸಲಾಗಿದೆ. ಮಹಾರಾಷ್ಟ್ರ, ಗುಜರಾತ್, ಛತ್ತೀಸ್‌ಗಢ ಮತ್ತು ಆಂಧ್ರಪ್ರದೇಶ ರಾಜ್ಯಗಳಲ್ಲಿ ಖಾರಿಫ್ ಋತುವಿನಲ್ಲಿ ಈರುಳ್ಳಿಯನ್ನು ಹೆಚ್ಚಿನ ಪ್ರಮಾಣದಲ್ಲಿ ಬೆಳೆಯಲಾಗುತ್ತದೆ. ಆದರೆ, ಯುಪಿಯಲ್ಲಿ ಅದು ನಿರೀಕ್ಷಿತ ಪ್ರಮಾಣದಲ್ಲಿ ಬೆಳೆಯುತ್ತಿಲ್ಲ. ಪ್ರತಿ ವರ್ಷ ಇದೇ ಕಾರಣಕ್ಕಾಗಿ ಅಕ್ಟೋಬರ್- ನವೆಂಬರ್ನಲ್ಲಿ ಈರುಳ್ಳಿ ಬೆಲೆ ಗಗನಕ್ಕೇರುತ್ತಿದೆ ಎಂದು ಹಿರಿಯ ವಿಜ್ಞಾನಿ ಡಾ.ರಾಮ್ ಬಟುಕ್ ಸಿಂಗ್ ಅಭಿಪ್ರಾಯಪಟ್ಟಿದ್ದಾರೆ.
ಅಭಿವೃದ್ಧಿಪಡಿಸಿದ್ದು ಹೀಗೆ: ಅಭಿವೃದ್ಧಿಪಡಿಸಲಾದ 93 ಬಗೆಯ ಈರುಳ್ಳಿ ಬೀಜಗಳನ್ನು ವಿಜ್ಞಾನಿಗಳು ರಬಿ ಋತುವಿನ ಫೆಬ್ರವರಿ - ಮಾರ್ಚ್‌ನಲ್ಲಿ ಬಿತ್ತನೆ ಮಾಡಿದರು. ಬೆಳೆ ಕೇವಲ 25 ದಿನಗಳಲ್ಲಿ ಕಟಾವಿಗೆ ಬಂದವು. ಅದರಂತೆ ಅಕ್ಟೋಬರ್- ನವೆಂಬರ್ನಲ್ಲೂ ನೆಟ್ಟು ಪ್ರಯೋಗ ನಡೆಸಿದರು. ಉತ್ತಮ ಬೆಳೆ ಬಂದ ಹಿನ್ನೆಲೆಯಲ್ಲಿ ರೈತರು ಎರಡೂ ಹಂಗಾಮಿನಲ್ಲಿ ಬೆಳೆಯಬಹುದು ಎಂದು ವಿಜ್ಞಾನಿಗಳು ಕಂಡುಕೊಂಡರು. ಹೊಸದಾಗಿ ಅಭಿವೃದ್ಧಿಪಡಿಸಿದ ಪ್ರಭೇದಗಳ ಬೀಜಗಳು ಪ್ರತಿ ಋತುವಿಗೂ ಸೂಕ್ತವಾಗಿವೆ. ಕೀಟಗಳು ಮತ್ತು ರೋಗ ನಿರೋಧಕ ಶಕ್ತಿಯೂ ಹೆಚ್ಚಿದೆ ಎಂದು ತಿಳಿಸಿದ್ದಾರೆ.
ಹೊಸ ತಳಿಯ 1 ಕಿಲೋ ಬೀಜದ ಬೆಲೆ ಎಷ್ಟು?: ಈರುಳ್ಳಿ ಮತ್ತು ಬೆಳ್ಳುಳ್ಳಿ ಸಂಶೋಧನಾ ನಿರ್ದೇಶನಾಲಯದ ವೆಬ್‌ಸೈಟ್‌ನಲ್ಲಿ ರೈತರು ಈ ಹೊಸ ಈರುಳ್ಳಿ ತಳಿಗಳನ್ನು ಆನ್‌ಲೈನ್‌ನಲ್ಲಿ ಖರೀದಿಸಬಹುದು. ವೆಬ್‌ಸೈಟ್‌ನಲ್ಲಿ ಲಭ್ಯವಿರುವ ಫಾರ್ಮ್ ಅನ್ನು ಭರ್ತಿ ಮಾಡುವ ಮೂಲಕ ಇವುಗಳನ್ನು ಪಡೆಯಬಹುದು. ಆನ್‌ಲೈನ್‌ನಲ್ಲಿ ಪಾವತಿ ಮಾಡಿದ ನಂತರ, ಬೀಜಗಳನ್ನು ಸಂಬಂಧಪಟ್ಟ ರೈತರ ವಿಳಾಸಕ್ಕೆ ಕಳುಹಿಸಲಾಗುತ್ತದೆ. ಹೊಸ ಈರುಳ್ಳಿ ತಳಿಯ ಬೀಜದ ಬೆಲೆ ಪ್ರಸ್ತುತ ಕೆಜಿಗೆ 2,500 ರಿಂದ 3,500 ರೂಪಾಯಿ ಇದೆ. ಇದೇ ವೇಳೆ, ಭಾರತದಲ್ಲಿ ಪ್ರತಿ ವರ್ಷ 26,738 ಮೆಟ್ರಿಕ್ ಟನ್ ಈರುಳ್ಳಿ ಉತ್ಪಾದನೆಯಾಗುತ್ತದೆ.