ಭುವನೇಶ್ವರ್ (ಒಡಿಶಾ): ನಾನು ಮುಸ್ಲಿಮರ ವಿರುದ್ಧ ಒಂದೇ ಒಂದು ಮಾತನ್ನೂ ಆಡಿಲ್ಲ. ಆದರೆ, ಯಾರನ್ನೂ ದೇಶದ 'ವಿಶೇಷ ನಾಗರಿಕ' ಎಂದು ಪರಿಗಣಿಸಲು ಸಿದ್ಧವಿಲ್ಲ. ಬಿಜೆಪಿ ಎಂದಿಗೂ ಅಲ್ಪಸಂಖ್ಯಾತರ ವಿರುದ್ಧ ಇಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದರು.
ಪ್ರಧಾನಿ ಅಲ್ಪಸಂಖ್ಯಾತರ ವಿರುದ್ಧ ದ್ವೇಷಮಯ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂಬ ವಿಪಕ್ಷಗಳ ಆರೋಪಕ್ಕೆ ಸುದ್ದಿಸಂಸ್ಥೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ತಿರುಗೇಟು ನೀಡಿದ ಪ್ರಧಾನಿ, ಕಾಂಗ್ರೆಸ್ ನಿರಂತರವಾಗಿ ಸಂವಿಧಾನದ ಜಾತ್ಯತೀತ ತತ್ವವನ್ನು ಉಲ್ಲಂಘಿಸುತ್ತಾ ಬಂದಿದೆ. ಪ್ರತಿಪಕ್ಷಗಳು ವೋಟ್ ಬ್ಯಾಂಕ್ ರಾಜಕಾರಣದಿಂದ ಅಲ್ಪಸಂಖ್ಯಾತರನ್ನು ಓಲೈಸುತ್ತಾ ಬರುತ್ತಿವೆ. ಇದನ್ನು ಬಟಾಬಯಲು ಮಾಡುವುದು ನನ್ನ ಚುನಾವಣಾ ಭಾಷಣಗಳ ಉದ್ದೇಶ ಎಂದರು.
ಈವರೆಗೂ ನಾನು ಅಲ್ಪಸಂಖ್ಯಾತರ ವಿರುದ್ಧ ಒಂದೇ ಒಂದು ಮಾತನ್ನೂ ಆಡಿಲ್ಲ. ನಾನು ಕಾಂಗ್ರೆಸ್ನ ರಾಜಕೀಯ ನೀತಿಯ ವಿರುದ್ಧ ಮಾತನಾಡುತ್ತಿದ್ದೇನೆ. ಕಾಂಗ್ರೆಸ್ ಮತಬ್ಯಾಂಕ್ ರಾಜಕಾರಣಕ್ಕಾಗಿ ಸಂವಿಧಾನದ ವಿರುದ್ಧವಾಗಿದೆ. ಸಂವಿಧಾನಿ ನಿರ್ಮಾತೃವಾದ ಡಾ.ಬಿ.ಆರ್. ಅಂಬೇಡ್ಕರ್, ಮಾಜಿ ಪ್ರಧಾನಿ ಜವಾಹರ್ಲಾಲ್ ನೆಹರೂ ಅವರು ಧರ್ಮಾಧಾರಿತ ಮೀಸಲಾತಿ ವಿರುದ್ಧ ಇದ್ದರು. ಆದರೆ, ಈಗಿನ ಕಾಂಗ್ರೆಸ್ ನಾಯಕರು ಅವರ ಪರವಾಗಿದ್ದಾರೆ ಎಂದು ಆರೋಪಿಸಿದರು.
ಕಾಂಗ್ರೆಸ್ ಮಾಡುತ್ತಿರುವ ಓಲೈಕೆಯ ರಾಜಕಾರಣವನ್ನು ಜನರಿಗೆ ತಿಳಿಸುವುದು ನನ್ನ ಕರ್ತವ್ಯ. ಬಿಜೆಪಿ ಎಂದಿಗೂ ಅಲ್ಪಸಂಖ್ಯಾತರ ವಿರುದ್ಧವಿಲ್ಲ. ನಾನು ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ನೀತಿಯನ್ನು ನಂಬುತ್ತೇನೆ. ನಾವು ಯಾರನ್ನೂ ಪ್ರತ್ಯೇಕವಾಗಿ ಕಾಣುವುದಿಲ್ಲ. ಎಲ್ಲರನ್ನೂ ಸಮಾನವಾಗಿ ನೋಡುತ್ತೇವೆ ಎಂದು ಪ್ರಧಾನಿ ಹೇಳಿದರು.
ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಮುಸ್ಲಿಂ ಲೀಗ್ ಗುರುತು: ಕಾಂಗ್ರೆಸ್ ಹಿಂದೂಗಳ ಸಂಪತ್ತನ್ನು ಮುಸ್ಲಿಮರಿಗೆ ನೀಡುತ್ತದೆಯೇ? ಅಥವಾ ಇದು ಪ್ರಚಾರದ ಅಸ್ತ್ರವೇ? ಎಂಬ ಪ್ರಶ್ನೆಗೆ ಉತ್ತರಿಸಿದ ಮೋದಿ, ತಾವು ನೀಡದ ಹೇಳಿಕೆಗಳನ್ನು ವಿಪಕ್ಷಗಳು ಪ್ರಚಾರ ಮಾಡುತ್ತಿವೆ. ಕಾಂಗ್ರೆಸ್ ಪ್ರಣಾಳಿಕೆ ಪ್ರಕಟವಾದ ದಿನವೇ ಅದರಲ್ಲಿ ಮುಸ್ಲಿಂ ಲೀಗ್ನ ಹೆಜ್ಜೆಗಳಿವೆ ಎಂದು ಹೇಳಿದ್ದೆ. ನನ್ನ ಹೇಳಿಕೆಗೆ ಕಾಂಗ್ರೆಸ್ ಅಂದು ಪ್ರತಿಕ್ರಿಯೆ ನೀಡಬೇಕಿತ್ತು. ಆದರೆ, ಏನೂ ಮಾಡದೇ ಮೌನ ವಹಿಸಿತು. ಹೀಗಾಗಿಯೇ ಧರ್ಮಾಧಾರಿತ ಮೀಸಲಾತಿ ವಿರುದ್ಧ ಜನರಲ್ಲಿ ಅರಿವು ಮೂಡಿಸುತ್ತಿದ್ದೇನೆ ಎಂದರು.
ಸರ್ಕಾರ ಕರೆಯುವ ಟೆಂಡರ್‌ಗಳಲ್ಲಿ ಅಲ್ಪಸಂಖ್ಯಾತರಿಗೆ ಮೀಸಲಾತಿ ನೀಡುವುದಾಗಿ ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಘೋಷಿಸಿದೆ. ಸೇತುವೆ ನಿರ್ಮಾಣದಲ್ಲಿ ಮೀಸಲಾತಿ ಹೇಗೆ ನೀಡುತ್ತೀರಿ? ಇದರಿಂದ ದೇಶದ ಅಭಿವೃದ್ಧಿ ಏನಾಗಲಿದೆ. 2006ರಲ್ಲಿ ರಾಷ್ಟ್ರೀಯ ಅಭಿವೃದ್ಧಿ ಮಂಡಳಿ ಸಭೆಯಲ್ಲಿ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ದೇಶದ ಸಂಪತ್ತಿನ ಮೇಲೆ ಮೊದಲ ಹಕ್ಕು ಮುಸ್ಲಿಮರಿಗಿದೆ ಎಂದಿದ್ದರು. ಮುಸ್ಲಿಮರನ್ನು ಒಬಿಸಿ ಮೀಸಲಾತಿ ಒಳಗೆ ತರಲು ಕಾಂಗ್ರೆಸ್ ನಿರ್ಧರಿಸಿದೆ. ಚುನಾವಣೆಗಾಗಿ ಆ ಪಕ್ಷ ಮಾಡುತ್ತಿರುವ ಸಂವಿಧಾನ ವಿರೋಧ ಕೃತ್ಯಗಳನ್ನು ನಾನು ವಿರೋಧಿಸುತ್ತಿದ್ದೇನೆ. ನಾವು ಸಂವಿಧಾನದ ಯಥಾವತ್ ಜಾರಿಗೆ ಕೆಲಸ ಮಾಡುತ್ತಿದ್ದೇವೆ ಎಂದು ಪ್ರಧಾನಿ ಮೋದಿ ಹೇಳಿದರು.
400 ಸೀಟು ದಾಟುವುದು ಪಕ್ಕಾ: 2024ರ ಲೋಕಸಭೆ ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿಕೂಟ 400 ಸ್ಥಾನಗಳನ್ನು ದಾಟಲಿದೆ ಎಂದು ಪ್ರಧಾನಿ ಮೋದಿ ಮತ್ತೊಮ್ಮೆ ವಿಶ್ವಾಸ ವ್ಯಕ್ತಪಡಿಸಿದರು. ದಕ್ಷಿಣ ಭಾರತದಲ್ಲಿ ಬಿಜೆಪಿ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಲಿದೆ ಎಂದು ಭವಿಷ್ಯ ನುಡಿದರು. ದಕ್ಷಿಣ ರಾಜ್ಯಗಳಲ್ಲಿ ಬಿಜೆಪಿಗೆ ಬಲವಿಲ್ಲ ಎಂಬ ತಪ್ಪು ಕಲ್ಪನೆಯನ್ನು ಪ್ರತಿಪಕ್ಷಗಳು ಪ್ರಚುರ ಮಾಡುತ್ತಿವೆ. 2019ರ ಲೋಕಸಭೆ ಚುನಾವಣೆಯಲ್ಲೂ ಬಿಜೆಪಿ ದಕ್ಷಿಣದಲ್ಲಿ ಅತಿ ದೊಡ್ಡ ಪಕ್ಷವಾಗಿತ್ತು. 2024ರ ಲೋಕಸಭೆ ಚುನಾವಣೆಯಲ್ಲೂ ಇದು ಮುಂದುವರಿಯಲಿದೆ. ಬಿಜೆಪಿಯ ಮಿತ್ರಪಕ್ಷಗಳು ಈ ಬಾರಿ ದಕ್ಷಿಣದಲ್ಲಿ ಹಿಂದಿಗಿಂತ ಹೆಚ್ಚು ಸ್ಥಾನಗಳನ್ನು ಗೆಲ್ಲಲಿವೆ ಎಂದು ಪ್ರಧಾನಿ ಮೋದಿ ವಿಶ್ವಾಸ ವ್ಯಕ್ತಪಡಿಸಿದರು.
2024ರ ಲೋಕಸಭೆ ಚುನಾವಣೆಯಲ್ಲಿ ಎನ್‌ಡಿಎ 400 ಸ್ಥಾನಗಳನ್ನು ದಾಟಲಿದೆ. ನಮ್ಮ ನಿರೀಕ್ಷೆಗಿಂತ ಜನರ ಇಚ್ಛಾಶಕ್ತಿ ಬಲವಾಗಿದೆ. ವಿರೋಧ ಪಕ್ಷಗಳು ಬಿಜೆಪಿಯನ್ನು ನಗರ, ಪುರುಷ ಪ್ರಧಾನ ಮತ್ತು ಉತ್ತರ ಭಾರತದ ಪಕ್ಷ ಎಂದು ಬಿಂಬಿಸುತ್ತಿದೆ. ಪ್ರತಿಪಕ್ಷಗಳು ಬಿಜೆಪಿಯನ್ನು ಬ್ರಾಹ್ಮಣ ಪಕ್ಷ ಎಂದು ಗುರುತಿಸುತ್ತಿವೆ. ಆದರೆ ನಮ್ಮ ಪಕ್ಷ ಅತಿ ಹೆಚ್ಚು ದಲಿತ, ಒಬಿಸಿ ಮತ್ತು ಎಸ್ಟಿ ಸಂಸದರು/ಶಾಸಕರನ್ನು ಹೊಂದಿರುವ ಪಕ್ಷವಾಗಿದೆ ಎಂದು ಮೋದಿ ಹೇಳಿದರು.
ಸಂವಿಧಾನ ಬದಲಾವಣೆ ಬರೀ ಆರೋಪ: ಸಂವಿಧಾನವು ತಮ್ಮ ಜೀವನದ ದಿಕ್ಸೂಚಿ ಎಂದು ಪ್ರಧಾನಿ ಮೋದಿ ಬಣ್ಣಿಸಿದರು. ಲೋಕಸಭೆ ಚುನಾವಣೆಯಲ್ಲಿ ಎನ್‌ಡಿಎ ಸರ್ಕಾರ 400ಕ್ಕೂ ಹೆಚ್ಚು ಸ್ಥಾನಗಳನ್ನು ಗೆದ್ದರೆ ಸಂವಿಧಾನವನ್ನೇ ಬದಲಿಸಲಿದೆ ಎಂದು ಪ್ರತಿಪಕ್ಷಗಳು ಸುಳ್ಳು ಪ್ರಚಾರ ಮಾಡುತ್ತಿವೆ. ಭಾರತಕ್ಕೆ ದಲಿತ ಮತ್ತು ಬುಡಕಟ್ಟು ಜನಾಂಗದ ರಾಷ್ಟ್ರಪತಿಗಳನ್ನು ನೀಡಿದ್ದು ಬಿಜೆಪಿ. ಧರ್ಮದ ಆಧಾರದಲ್ಲಿ ಮೀಸಲಾತಿ ನೀಡುವುದು ಸರಿಯಲ್ಲ. ಸಂವಿಧಾನ ಮತ್ತು ಅದರ ನಿರ್ಮಾತೃಗಳು ಇದರ ವಿರುದ್ಧವಾಗಿದ್ದರು. ಕಾಂಗ್ರೆಸ್ ಇದನ್ನು ಜಾರಿ ಮಾಡಲು ಮುಂದಾಗಿ ಸಂವಿಧಾನಕ್ಕೆ ಅವಮಾನ ಮಾಡಿದೆ. ಸ್ವತಂತ್ರ ಭಾರತದ ಇತಿಹಾಸದಲ್ಲಿ ಸಂವಿಧಾನವನ್ನು ಉಲ್ಲಂಘಿಸಿ ಪ್ರಜಾಪ್ರಭುತ್ವವನ್ನು ಹತ್ತಿಕ್ಕಿದ್ದು ಕಾಂಗ್ರೆಸ್ ಎಂದು ಪ್ರಧಾನಿ ಮೋದಿ ಟೀಕಿಸಿದರು.