ಜಲವಾರ್(ರಾಜಸ್ಥಾನ): ರಾಜ್ಯದ ಜಲವಾರ್ ಜಿಲ್ಲೆಯ ಪಗಾರಿಯಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಆರೋಪಿಗಳ ಗುಂಪೊಂದು ಡಂಪರ್ ಟ್ರಕ್ ಹರಿಸಿ ಐವರನ್ನು ನಿರ್ದಯವಾಗಿ ಕೊಲೆ ಮಾಡಿರುವ ಘಟನೆ ತಡರಾತ್ರಿ ನಡೆದಿದೆ. ಸಾವಿಗೀಡಾದವರ ಪೈಕಿ ಇಬ್ಬರು ಸಹೋದರರು ಸೇರಿದ್ದಾರೆ. ಘಟನೆಯ ಬಳಿಕ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾನೆ.
ಈ ಕುರಿತು ಮಾಹಿತಿ ನೀಡಿದ ಭವಾನಿಮಂಡಿ ಡಿಎಸ್ಪಿ ಪ್ರೇಮ್ ಚೌಧರಿ, ''ತಡರಾತ್ರಿ ಯಾವುದೋ ವಿಚಾರಕ್ಕೆ ಎರಡು ಗುಂಪಿಗಳ ನಡುವೆ ಜಗಳ ನಡೆದಿದೆ. ನಂತರ ಐವರು ಪಗರಿಯಾ ಪೊಲೀಸ್ ಠಾಣೆಗೆ ದೂರು ದಾಖಲಿಸುವುದಾಗಿ ಹೇಳಿ ಹೊರಟಿದ್ದರು. ಇದರಿಂದ ಕೋಪಗೊಂಡ ಗುಂಪೊಂದು ಡಂಪರ್ ಟ್ರಕ್ ಅನ್ನು ಮತ್ತೊಂದು ಗುಂಪಿನ ಇಬ್ಬರು ಸಹೋದರರು ಸೇರಿದಂತೆ ಐವರ ಮೇಲೆ ಹರಿಸಿ ಹತ್ಯೆ ಮಾಡಿದೆ. ಬಳಿಕ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ. ಗ್ರಾಮದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ'' ಎಂದರು.
"ಆರೋಪಿಗಳು ರಾಜ್ಯದ ಬೇರೆ ರಾಜ್ಯಕ್ಕೆ ಪರಾರಿಯಾಗಿರುವ ಬಗ್ಗೆ ಮಾಹಿತಿ ಲಭಿಸಿದೆ. ಹೀಗಾಗಿ ಪಕ್ಕದ ಮಧ್ಯಪ್ರದೇಶಕ್ಕೂ ಹಲವು ಪೊಲೀಸ್ ತಂಡಗಳನ್ನು ರವಾನಿಸಲಾಗಿದೆ. ಮೃತದೇಹಗಳನ್ನು ಸಮುದಾಯ ಆರೋಗ್ಯ ಕೇಂದ್ರದ ಶವಾಗಾರದಲ್ಲಿ ಇರಿಸಲಾಗಿದೆ. ಹೆಚ್ಚುವರಿ ಎಸ್ಪಿ ಚಿರಂಜಿ ಲಾಲ್ ಮೀನಾ ನೇತೃತ್ವದಲ್ಲಿ ಪೊಲೀಸ್ ತಂಡಗಳು ಪಗಾರಿಯಾ, ದಾಗ್, ಮಿಶ್ರೋಲಿ ಸೇರಿದಂತೆ ವಿವಿಧೆಡೆ ಆರೋಪಿಗಳಿಗಾಗಿ ತೀವ್ರ ಹುಡುಕಾಟ ನಡೆಸುತ್ತಿವೆ" ಎಂದು ಡಿಎಸ್ಪಿ ಹೇಳಿದರು.