ಮುಂಬೈ (ಮಹಾರಾಷ್ಟ್ರ): ಬದ್ಲಾಪುರ ಲೈಂಗಿಕ ದೌರ್ಜನ್ಯ ಆರೋಪಿ ಎನ್‌ಕೌಂಟರ್ ಪ್ರಕರಣದಲ್ಲಿ ಪೊಲೀಸರ ನಡೆಗೆ ಬಾಂಬೆ ಹೈಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ. ಆರೋಪಿ ತಪ್ಪಿಸಿಕೊಳ್ಳುವಾಗ ತಲೆಗೆ ಗುಂಡಿಟ್ಟಿದ್ದೇಕೆ? ಕಾಲಿಗೆ, ಕೈಗಳಿಗೆ ಏಕೆ ಹೊಡೆಯಲಿಲ್ಲ ಎಂದು ಪ್ರಶ್ನಿಸಿದೆ. ಜೊತೆಗೆ ಆರೋಪಿಯನ್ನು ಜೈಲಿನಿಂದ ಕರೆದೊಯ್ದು, ಸಾವಿನವರೆಗಿನ ಸಿಸಿಟಿವಿ ದೃಶ್ಯಾವಳಿಗಳನ್ನು ಸಂಗ್ರಹಿಸಿ ಸಲ್ಲಿಸುವಂತೆ ಸೂಚಿಸಿದೆ.
ಆರೋಪಿ ಅಕ್ಷಯ್ ಶಿಂಧೆ ಸಾವಿನ ತನಿಖೆಯನ್ನು ಎಸ್ಐಟಿಗೆ ವಹಿಸಬೇಕು ಎಂದು ಕೋರಿ ಆತನ ತಂದೆ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾ.ರೇವತಿ ಮೋಹಿತೆ ಡೇರೆ ಹಾಗೂ ನ್ಯಾ.ಪೃಥ್ವಿರಾಜ್ ಚವ್ಹಾಣ್ ಅವರಿದ್ದ ಪೀಠ, ಪೊಲೀಸರ ಕಾರ್ಯಚಟುವಟಿಕೆಗಳ ಬಗ್ಗೆ ಪೂರ್ಣ ಅನುಮಾನವಿಲ್ಲ. ಆದರೆ, ಪ್ರಕರಣವು ಎಲ್ಲ ಆಯಾಮಗಳಿಂದ ತನಿಖೆ ನಡೆಯಬೇಕಿದೆ. ಎನ್‌ಕೌಂಟರ್ ಪ್ರಕರಣದಲ್ಲಿ ಪೊಲೀಸರು ನ್ಯಾಯೋಚಿತ ಮತ್ತು ನಿಷ್ಪಕ್ಷಪಾತವಾಗಿ ನಡೆದುಕೊಳ್ಳಬೇಕು ಎಂದು ಹೇಳಿದೆ.
ಪ್ರಕರಣದಲ್ಲಿ ನಡೆದ ಎನ್‌ಕೌಂಟರ್ ವಿಭಿನ್ನವಾಗಿದೆ. ಇದನ್ನು ಬರಿಯ ಎನ್‌ಕೌಂಟರ್ ಎಂದು ಕರೆಯಲಾಗದು. ಶೂಟ್ಔಟ್ ರೀತಿಯಲ್ಲಿದೆ. ಸಂಬಂಧಿತ ಪೊಲೀಸ್ ಅಧಿಕಾರಿ ವಿರುದ್ಧವೂ ಪ್ರಕರಣ ದಾಖಲಿಸಬೇಕು. ವಿಧಿವಿಜ್ಞಾನ ಪ್ರಯೋಗಾಲಯದ ವರದಿಯನ್ನು ಸಲ್ಲಿಸಿ. ಪಾಯಿಂಟ್ ಬ್ಲಾಕ್ನಲ್ಲಿ ಶೂಟೌಟ್ ಮಾಡಲಾಗಿದೆಯೇ ಎಂದು ಪೀಠ ಪ್ರಶ್ನಿಸಿತು.
ಆರೋಪಿ ಶಿಂಧೆಯು ಪೊಲೀಸ್ ಅಧಿಕಾರಿಯಿಂದ ಪಿಸ್ತೂಲ್ ಕಸಿದುಕೊಂಡ ಎಂದು ನಂಬಲು ಕಷ್ಟ. ಕಾರಣ ಪೊಲೀಸರ ಪಿಸ್ತೂಲ್ ಅನ್ನು ಲಾಕ್ ಮಾಡಲಾಗಿರುತ್ತದೆ. ಅದನ್ನು ಅನ್ಲಾಕ್ ಮಾಡಿ ಗುಂಡು ಹಾರಿಸುವುದು ಆರೋಪಿಗಳಿಗೆ ಕಷ್ಟದ ಕೆಲಸ. ಹೀಗಾಗಿ ಪ್ರಕರಣದ ತನಿಖೆಯನ್ನು ನಿಷ್ಪಕ್ಷಪಾತವಾಗಿ ನಡೆಸಬೇಕು. ಇಲ್ಲವಾದಲ್ಲಿ ಸೂಕ್ತ ಆದೇಶ ಹೊರಡಿಸಲಾಗುವುದು ಎಂದು ಕೋರ್ಟ್ ಹೇಳಿ, ವಿಚಾರಣೆಯನ್ನು ಅಕ್ಟೋಬರ್ 3ಕ್ಕೆ ಮುಂದೂಡಿತು.
ಮಕ್ಕಳ ಸುರಕ್ಷತಾ ಸಮಿತಿ ಏಕಿಲ್ಲ?: ಇದೇ ವೇಳೆ, ಮಕ್ಕಳ ಸುರಕ್ಷತಾ ಸಮಿತಿಯನ್ನು ರಚಿಸದ ಮಹಾರಾಷ್ಟ್ರ ಸರ್ಕಾರವನ್ನು ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿತು. ಶಾಲಾ ಮಕ್ಕಳ ಸುರಕ್ಷತೆ ವಿಚಾರದಲ್ಲಿ ಸರ್ಕಾರಗಳು ನೀಡುವ ಭರವಸೆಗಳು ಮತ್ತು ಕೈಗೊಂಡ ಕ್ರಮಗಳಿಗೆ ಸಂಬಂಧವಿಲ್ಲ. ಇದು ಸರ್ಕಾರದ ಪ್ರಾಮಾಣಿಕತೆಯನ್ನು ಬಿಂಬಿಸುತ್ತದೆ. ಶಾಲೆಗಳಿಗೆ ಭೇಟಿ ನೀಡಿ, ಮಕ್ಕಳ ಸುರಕ್ಷತೆಯ ಕುರಿತು 8 ವಾರಗಳಲ್ಲಿ ಶಿಫಾರಸುಗಳುಳ್ಳ ವರದಿಯನ್ನು ಸಲ್ಲಿಸಬೇಕು ಎಂದು ಪೀಠ ತಾಕೀತು ಮಾಡಿತು.
ಏನಿದು ಪ್ರಕರಣ?: ಮಹಾರಾಷ್ಟ್ರದ ಬದ್ಲಾಪುರ್ನಲ್ಲಿ ಶಾಲಾ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪಿ ಅಕ್ಷಯ್ ಶಿಂಧೆ ಎಂಬಾತನನ್ನು ತನಿಖೆಗಾಗಿ ಪೊಲೀಸರು ತಮ್ಮ ವಾಹನದಲ್ಲಿ ಕರೆದುಕೊಂಡು ಹೋಗುತ್ತಿದ್ದರು. ಥಾಣೆಯ ಮುಂಬೈ ಬೈಪಾಸ್ನಲ್ಲಿ ಆರೋಪಿ ಪೊಲೀಸರ ಬಳಿಯಿದ್ದ ಗನ್ ಕಿತ್ತುಕೊಂಡು ಹಲ್ಲೆಗೆ ಮುಂದಾಗಿದ್ದ. ಈ ವೇಳೆ, ಸ್ವಯಂ ರಕ್ಷಣೆಗೆ ಪೊಲೀಸರು ಗುಂಡು ಆತನ ತಲೆಗೆ ಹಾರಿಸಿದ್ದರು.
ಘಟನೆಯಲ್ಲಿ ಆರೋಪಿ ಸ್ಥಳದಲ್ಲೇ ಸಾವನ್ನಪ್ಪಿದ್ದ. ಜೊತೆಗೆ ಓರ್ವ ಅಧಿಕಾರಿ, ಇಬ್ಬರು ಸಿಬ್ಬಂದಿ ಮೂವರು ಪೊಲೀಸರು ಗಾಯಗೊಂಡಿದ್ದರು. ಗುಂಡು ತಗುಲಿದ ಕಾರಣ ಆರೋಪಿ ಸಾವನ್ನಪ್ಪಿದ್ದಾನೆ ಎಂದು ಪೊಲೀಸರು ಘೋಷಿಸಿದ್ದರು. ಗುತ್ತಿಗೆ ನೌಕರನಾಗಿ ಶಾಲೆಯೊಂದರಲ್ಲಿ ಕಸ ಗುಡಿಸುವ ಕೆಲಸ ಮಾಡುತ್ತಿದ್ದ ಆರೋಪಿ ಶಿಂಧೆ, ಶಾಲೆಯ ಶೌಚಾಲಯದಲ್ಲಿ ಮಕ್ಕಳಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಗಂಭೀರ ಆರೋಪ ಈತನ ಮೇಲಿದೆ.
ಇದನ್ನೂ ಓದಿ: ಬದ್ಲಾಪುರ್ ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿ ಪೊಲೀಸ್ ಗುಂಡಿಗೆ ಬಲಿ, ಸಿಐಡಿ ತನಿಖೆ - Badlapur Sexual Assault Case