ನವದೆಹಲಿ: ಮುಂಬೈ - ಅಹಮದಾಬಾದ್ 'ಬುಲೆಟ್ ರೈಲು' ಕಾರಿಡಾರ್ ಯೋಜನೆಗೆ ಇಪ್ಪತ್ತೆಂಟು ಸೀಸ್ಮೋಮೀಟರ್ ಅಳವಡಿಸಲಾಗುವುದು ಎಂದು ರಾಷ್ಟ್ರೀಯ ಹೈಸ್ಪೀಡ್ ರೈಲು ನಿಗಮ - ಎನ್‌ಎಚ್‌ಎಸ್‌ಆರ್‌ಸಿಎಲ್ ಸೋಮವಾರ ತಿಳಿಸಿದೆ.
NHSRCL ಈ ಸಂಬಂಧ ಪ್ರಕಟಣೆ ನೀಡಿದೆ. ಪ್ರಯಾಣಿಕರ ಸುರಕ್ಷತೆ ಮತ್ತು ನಿರ್ಣಾಯಕ ಮೂಲಸೌಕರ್ಯವನ್ನು ಖಚಿತಪಡಿಸಿಕೊಳ್ಳಲು ಜಪಾನಿನ ಶಿಂಕನ್‌ಸೆನ್ ತಂತ್ರಜ್ಞಾನವನ್ನು ಆಧರಿಸಿದ 'ಆರಂಭಿಕ ಭೂಕಂಪ ಪತ್ತೆ ವ್ಯವಸ್ಥೆ' ಉಪಕರಣವನ್ನು ಸ್ಥಾಪಿಸಲಾಗುವುದು ಎಂದು ಹೇಳಿದೆ. ಭೂಕಂಪನ ಮಾಪಕಗಳನ್ನು ಹೈ ಸ್ಪೀಡ್ ರೈಲಿನ ಟ್ರಾಕ್ನ ಆಯಕಟ್ಟಿನ ಸ್ಥಳಗಳಲ್ಲಿ ಇರಿಸಲಾಗುತ್ತದೆ.
ಪ್ರಾಥಮಿಕ ಅಲೆಗಳ ಮೂಲಕ ಭೂಕಂಪ - ಪ್ರೇರಿತ ನಡುಕಗಳನ್ನು ಈ ಸೀಸ್ಮಾಮೀಟರ್‌ಗಳು ಪತ್ತೆ ಮಾಡುತ್ತವೆ. ಪತ್ತೆಯಾದ ನಂತರ, ಸ್ವಯಂಚಾಲಿತ ವಿದ್ಯುತ್ ಸ್ಥಗಿತಗೊಳಿಸುವಿಕೆ ಕಾರ್ಯವರನ್ನು ಆರಂಭವಾಗುವಂತೆ ಮಾಡಲಾಗುತ್ತದೆ, ತ್ವರಿತ ಮತ್ತು ಸುರಕ್ಷಿತ ನಿಲುಗಡೆಯನ್ನು ಖಚಿತಪಡಿಸಿಕೊಳ್ಳಲು, ಭೂಕಂಪನ ಸಂಭವಿಸಿದ ಸ್ಥಳದಲ್ಲಿ ರೈಲು ಇದ್ದರೆ ಆ ವೇಳೆ ಸ್ವಯಂ ಚಾಲಿತ ಬ್ರೇಕ್ಗಳು ತಮ್ಮ ಕಾರ್ಯವನ್ನು ಪ್ರಾರಂಭಿಸಿ, ರೈಲಿನ ಓಟಕ್ಕೆ ಕಡಿವಾಣ ಹಾಕಲಿದೆ.
"28 ಭೂಕಂಪನ ಮಾಪಕಗಳಲ್ಲಿ 22 ಉಪಕರಣಗಳನ್ನು ಹಳಿಯ ಉದ್ದಕ್ಕೂ ಜೋಡಣೆ ಮಾಡಲಾಗುವುದು. ಮಹಾರಾಷ್ಟ್ರದ ಮುಂಬೈ, ಥಾಣೆ, ವಿರಾರ್ ಮತ್ತು ಬೋಯಿಸರ್‌ನಲ್ಲಿ ಎಂಟು ಭೂಕಂಪನ ಮಾನಿಟರಿಂಗ್ ಸಾಧನಗಳನ್ನು ಅಳವಡಿಸಲಾಗುವುದು. ಇನ್ನುಳಿದ 14 ಮಾಪಕಗಳನ್ನು ಗುಜರಾತ್‌ನ ವಾಪಿ, ಬಿಲಿಮೋರಾ, ಸೂರತ್, ಭರೂಚ್‌ನಲ್ಲಿ ಅಳವಡಿಸಲಾಗುತ್ತದೆ. ವಡೋದರಾ, ಆನಂದ್, ಮಹೆಂಬದಾದ್, ಮತ್ತು ಅಹಮದಾಬಾದ್ಗಳಲ್ಲಿ ಈ ಮಾಪಕಗಳನ್ನು ಇರಿಸಲು ಎನ್ಹೆಚ್ಎಸ್ಆರ್ಸಿಎಲ್ ನಿರ್ಧರಿಸಿದೆ. ಭೂಕಂಪ ಮಾಪಕಗಳನ್ನು ಕಾರಿಡಾರ್‌ನ ಉದ್ದಕ್ಕೂ ಟ್ರಾಕ್ಷನ್ ಉಪ - ಕೇಂದ್ರಗಳು ಮತ್ತು ಸ್ವಿಚಿಂಗ್ ಪೋಸ್ಟ್‌ಗಳಲ್ಲಿ ಸಂಯೋಜಿಸಲಾಗುವುದು ಎಂದು ನಿಗಮ ಮಾಹಿತಿ ನೀಡಿದೆ.
ಉಳಿದ ಆರು ಭೂಕಂಪ ಮಾಪಕಗಳನ್ನು ಖೇಡ್, ರತ್ನಗಿರಿ, ಲಾತೂರ್, ಅಡೆಸರ್, ಓಲ್ಡ್ ಭುಜ್ ಮತ್ತು ಪಾಂಗ್ರಿ ಸೇರಿದಂತೆ ಭೂಕಂಪ ಪೀಡಿತ ಪ್ರದೇಶಗಳಲ್ಲಿ ಅಳವಡಿಸಲಾಗುವುದು ಎಂದು ನಿಗಮ ಪ್ರಕಟಣೆಯಲ್ಲಿ ಹೇಳಿದೆ. ಜಪಾನಿನ ತಜ್ಞರು ಮುಂಬೈ - ಅಹಮದಾಬಾದ್ ಹೈಸ್ಪೀಡ್ ರೈಲು ಜೋಡಣೆಯ ಸಮೀಪವಿರುವ ಪ್ರದೇಶಗಳಲ್ಲಿ ಸಂಪೂರ್ಣ ಸಮೀಕ್ಷೆ ನಡೆಸಿದ್ದಾರೆ. ಈ ಪ್ರದೇಶ ಕಳೆದ ಶತಮಾನದಲ್ಲಿ 5.5 ತೀವ್ರತೆಯ ಭೂಕಂಪ ಪೀಡಿತ ಒಲಯವನ್ನಾಗಿ ಗುರುತಿಸಿರುವ ಹಿನ್ನೆಲೆಯಲ್ಲಿ ಈ ವ್ಯವಸ್ಥೆಯನ್ನ ಮಾಡಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಮೈಕ್ರೊಟ್ರೆಮರ್ ಪರೀಕ್ಷೆಗಳನ್ನು ಬಳಸಿಕೊಂಡು ಮಣ್ಣಿನ ಹೊಂದಾಣಿಕೆಯ ನಿಖರವಾದ ಅಧ್ಯಯನದ ನಂತರ, ಖೇಡ್, ರತ್ನಗಿರಿ, ಲಾತೂರ್, ಅಡೆಸರ್, ಓಲ್ಡ್ ಭುಜ್ ಮತ್ತು ಪಾಂಗ್ರಿ ಪ್ರದೇಶಗಳನ್ನು ಭೂಕಂಪನ ಮಾಪಕಗಳಿಗೆ ಸೂಕ್ತ ಸ್ಥಳಗಳಾಗಿ ಆಯ್ಕೆ ಮಾಡಲಾಗಿದೆ ಎಂದು ಸಂಸ್ಥೆ ಹೇಳಿದೆ. ಈ ಯೋಜನೆಯ ಬಗ್ಗೆ ಮಾಹಿತಿ ನೀಡಿದ ಎನ್‌ಎಚ್‌ಎಸ್‌ಆರ್‌ಸಿಎಲ್‌ನ ವ್ಯವಸ್ಥಾಪಕ ನಿರ್ದೇಶಕ ಅಂಜುಮ್ ಪರ್ವೇಜ್, ಮುಂಬೈ ಮತ್ತು ಅಹಮದಾಬಾದ್ ನಡುವಿನ ಬುಲೆಟ್ ರೈಲು ಕಾರಿಡಾರ್‌ನಲ್ಲಿ ಸುರಕ್ಷತೆಯನ್ನು ಹೆಚ್ಚಿಸಲು ಜಪಾನಿನ ಶಿಂಕನ್‌ಸೆನ್ ತಂತ್ರಜ್ಞಾನದಿಂದ ಪ್ರೇರಿತವಾದ 28 ಸೀಸ್ಮಾಮೀಟರ್‌ಗಳು ಭೂಕಂಪಗಳ ವಿರುದ್ಧ ಕಾವಲು ಕಾಯಲಿವೆ ಎಂದು ಹೇಳಿದ್ದಾರೆ.
" ಭೂಕಂಪ ಪೀಡಿತ ಪ್ರದೇಶಗಳಲ್ಲಿ ಈ ಸೀಸ್ಮಾಮೀಟರ್ಗಳನ್ನು ಇರಿಸಲಾಗಿದೆ, ಸ್ವಯಂಚಾಲಿತ ವಿದ್ಯುತ್ ಸ್ಥಗಿತವನ್ನು ಪ್ರಾರಂಭಿಸುವ ಮತ್ತು ತುರ್ತು ಬ್ರೇಕ್‌ಗಳನ್ನು ಸಕ್ರಿಯಗೊಳಿಸುವ ಮೂಲಕ ತ್ವರಿತ ಪ್ರತಿಕ್ರಿಯೆಯನ್ನು ಈ ವ್ಯವಸ್ಥೆಗಳು ಖಚಿತಪಡಿಸುತ್ತವೆ. ಈ ಮೂಲಕ ಭೂಕಂಪದಿಂದಾಗುವ ಅಪಾಯಗಳನ್ನು ತಡೆಯುತ್ತವೆ ಮತ್ತು ಸುರಕ್ಷಿತ ಪ್ರಯಾಣಕ್ಕೆ ಇವು ಸಹಕಾರಿ ಆಗಲಿವೆ‘‘ ಎಂದು ಅಂಜುಮ್ ಪರ್ವೇಜ್ ಹೇಳಿದ್ದಾರೆ.
ಇದನ್ನು ಓದಿ:ಪ್ರೈವಸಿ, ದತ್ತಾಂಶ ಭದ್ರತೆಗೆ ಅಪಾಯ: ಎಐ ಅಳವಡಿಕೆಗೆ ಕಂಪನಿಗಳ ಹಿಂದೇಟು