ಕೊಲ್ಹಾಪುರ/ಚಿಕ್ಕೋಡಿ: ನಾಯಿಗಳು ಕುಶಾಗ್ರಮತಿಗಳು, ನಂಬಿಕಸ್ಥ ಮತ್ತು ಮಾಲೀಕರಿಗೆ ವಿಧೇಯವಾಗಿರುತ್ತವೆ ಎಂಬುದು ಜನಜನಿತ. ನೀವು ಅವುಗಳನ್ನು ಎಲ್ಲಿಯೇ ಬಿಟ್ಟು ಬಂದರೂ ಅವು ನಿಮ್ಮನ್ನ ಮತ್ತೆ ಹುಡುಕಿಕೊಂಡು ಬರುತ್ತವೆ. ಇಂಥಹದ್ದೇ ಅಚ್ಚರಿಯ ಘಟನೆಯೊಂದು ಬೆಳಗಾವಿ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ.
225 ಕಿ.ಮೀ ದೂರದಲ್ಲಿ ಕಳೆದುಹೋಗಿದ್ದ ನಾಯಿ ಎರಡು ದಿನಗಳ ಬಳಿಕ ತಾನಾಗಿಯೇ ಮನೆಯನ್ನು ಹುಡುಕಿಕೊಂಡು ಬಂದಿದೆ. ಅಷ್ಟು ದೂರವನ್ನು ಅದು ನಡೆದುಕೊಂಡು ಮತ್ತು ನಿಖರವಾದ ಜಾಗಕ್ಕೆ ವಾಪಸ್ ಆಗಿದೆ. ಇದು ಮಾಲೀಕರನ್ನು ತಬ್ಬಿಬ್ಬು ಮಾಡಿದೆ.
ಏನಾಯ್ತು?: ನಿಪ್ಪಾಣಿ ತಾಲೂಕಿನ ಯಮಗರ್ಣಿ ಗ್ರಾಮದ ಕುಟುಂಬವೊಂದು ಪಂಢರಾಪುರಕ್ಕೆ ಪಾದಯಾತ್ರೆ ಮಾಡಿತ್ತು. ಈ ವೇಳೆ ಜೊತೆಗೆ ಸಾಕುನಾಯಿಯೂ ಹೆಜ್ಜೆ ಹಾಕಿತ್ತು. ವಿಠ್ಠಲನ ದರ್ಶನದ ವೇಳೆ ಶ್ವಾನ ಅಚಾನಕ್ಕಾಗಿ ತಪ್ಪಿಸಿಕೊಂಡಿತ್ತು. ಕುಟುಂಬಸ್ಥರು ಹುಡುಕಾಡಿದರೂ, ಅದು ಸಿಕ್ಕಿರಲಿಲ್ಲ. ಕೊನೆಗೆ ಅವರು ವಾಪಸ್ ಮನೆಗೆ ಬಂದಿದ್ದರು.
ಪ್ರೀತಿಯ ಶ್ವಾನ ಕಳೆದುಹೋಗಿದ್ದು, ಮನೆಯವರಲ್ಲಿ ಬೇಸರ ಮತ್ತು ನೋವು ತಂದಿತ್ತು. ಇದಕ್ಕಾಗಿ ಅವರು ಸಾಮಾಜಿಕ ಜಾಲತಾಣದಲ್ಲಿ ಶ್ವಾನದ ಚಿತ್ರ ಸಮೇತ ಮಾಹಿತಿ ಹಂಚಿಕೊಂಡಿದ್ದರು. ಇಂತಹ ನಾಯಿ ಕಂಡುಬಂದಲ್ಲಿ ಮಾಹಿತಿ ನೀಡುವಂತೆ ಕೋರಿದ್ದರು. ಎರಡು ದಿನಗಳು ಕಳೆದರೂ ಶ್ವಾನದ ಬಗ್ಗೆ ಯಾವುದೇ ಮಾಹಿತಿ ಇರಲಿಲ್ಲ. ಇನ್ನೇನು ಪ್ರೀತಿಯ ಪ್ರಾಣಿ ತಮ್ಮಿಂದ ದೂರ ಆಯಿತು ಎಂದುಕೊಂಡಿದ್ದರು.
ಮನೆ ಹುಡುಕಿಕೊಂಡು ಬಂದ ಶ್ವಾನ: ಎರಡು ದಿನ ಕಳೆದ ಬಳಿಕ ಇದ್ದಕ್ಕಿದ್ದಂತೆ ಕಳೆದುಹೋಗಿದ್ದ ಶ್ವಾನ ದಿಢೀರ್ ಆಗಿ ಮನೆಯ ಮುಂದೆ ಪ್ರತ್ಯಕ್ಷವಾಗಿದೆ. ಇದನ್ನು ಕಂಡ ಕುಟುಂಬಸ್ಥರು ಅಚ್ಚರಿಗೊಂಡಿದ್ದಾರೆ. ಪಂಢರಾಪುರದಿಂದ ನಿಪ್ಪಾಣಿ ತಾಲೂಕಿನ ಯಮಗರ್ಣಿಗೆ ಸುಮಾರು 225 ಕಿ.ಮೀ ದೂರವಿದೆ. ಇಷ್ಟು ದೂರವನ್ನು ನಾಯಿ ಎರಡೇ ದಿನದಲ್ಲಿ ಕ್ರಮಿಸಿ ಮನೆಗೆ ಬಂದಿತ್ತು. ಇದು ನಿಜಕ್ಕೂ ಜನರಿಗೆ ನಂಬಲಾಗದ ಸಂಗತಿಯಾಗಿತ್ತು. ವಾಪಸ್ ಬಂದ ನಾಯಿಗೆ ಕುಟುಂಬಸ್ಥರು ಹೂವಿನ ಹಾರ ಹಾಕಿ, ತಿಲಕ ಇಟ್ಟು ಊರಿನಲ್ಲಿ ಮೆರವಣಿಗೆ ಮಾಡಿದ್ದಾರೆ.
225 ಕಿಲೋ ಮೀಟರ್ ದೂರವನ್ನು ಏಕಾಂಗಿಯಾಗಿ ನಡೆದುಕೊಂಡು ಮನೆಗೆ ಬಂದ ನಾಯಿ ಕಂಡು ಅಪಾರ ಸಂತಸವಾಗಿದೆ. ಅದು ತಮ್ಮೊಂದಿಗೆ ಹಲವು ವರ್ಷಗಳಿಂದ ಬದುಕುತ್ತಿದೆ. ಕಳೆದುಹೋದ ಬಗ್ಗೆ ಚಿಂತಿತರಾಗಿದ್ದೆವು. ಇದೀಗ ವಾಪಸ್ ಆಗಿದೆ ಎಂದು ಮನೆಯ ಮಾಲೀಕರು ಸಂತಸ ವ್ಯಕ್ತಪಡಿಸಿದ್ದಾರೆ.
ನಾಯಿಗಳಲ್ಲಿ ಇರುತ್ತೆ ವಿಶೇಷ ಗುಣ: ದೂರದ ಊರಿನಲ್ಲಿ ಕಳೆದುಹೋಗಿದ್ದ ನಾಯಿ ಅದೇಗೆ ಮನೆಯನ್ನು ತಾನೇ ಹುಡುಕಿಕೊಂಡು ಬಂದಿತು ಎಂಬ ಬಗ್ಗೆ ಹಲವರಲ್ಲಿ ಪ್ರಶ್ನೆ ಉಂಟಾಗಿದೆ. ಈ ಬಗ್ಗೆ ಪಶು ವೈದ್ಯಾಧಿಕಾರಿ ಡಾ. ಸ್ಯಾಮ್ ಲುಡ್ರಿಕ್ ಅವರಲ್ಲಿ ಮಾಹಿತಿ ಕೇಳಿದಾಗ, "ಸಾಕು ಪ್ರಾಣಿಗಳು ತಾವು ಇರುವ ಪ್ರದೇಶದಿಂದ ಕೆಲವು ಸ್ಥಳಗಳಲ್ಲಿ ಮಲವಿಸರ್ಜನೆಯನ್ನು ಮಾಡಿರುತ್ತವೆ. ಅವು ದೂರ ಕ್ರಮಿಸುವಾಗ ಅಲ್ಲಲ್ಲಿ ಮಲವನ್ನು ಮಾಡಿರುತ್ತವೆ. ಇದರ ವಾಸನೆಯನ್ನೇ ಗ್ರಹಿಸಿ ಅವು ಮತ್ತೆ ತಮ್ಮ ಮೂಲಸ್ಥಾನವನ್ನು ಸೇರುತ್ತವೆ. ಹೀಗೆಯೇ ಮಾಡಿದ್ದರಿಂದ ಸಾಕು ನಾಯಿ ಪಂಢರಾಪುರದಿಂದ ಕೊಲ್ಹಾಪುರಕ್ಕೆ ಬಂದಿದೆ ಎಂದು ವಿವರಿಸಿದ್ದಾರೆ.
ಇದನ್ನೂ ಓದಿ: ಸಾಕು ನಾಯಿ ನಿಯತ್ತು, ಯುವಕನ ಸಮಯ ಪ್ರಜ್ಞೆ: ಆತ್ಮಹತ್ಯೆಗೆ ಯತ್ನಿಸಿದ್ದ ಮಹಿಳೆ ಬಚಾವ್ - Woman Rescue