ನವದೆಹಲಿ: ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ದೆಹಲಿ ಜಲಸಂಪನ್ಮೂಲ ಸಚಿವೆ ಅತಿಶಿ ಆರೋಗ್ಯ ಹದಗೆಟ್ಟಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ. ರಾಷ್ಟ್ರ ರಾಜಧಾನಿಯಲ್ಲಿ ನೀರಿನ ಬಿಕ್ಕಟ್ಟು ಇದ್ದು ಹರಿಯಾಣ ಸರ್ಕಾರ ಯಮುನಾ ನದಿಯಿಂದ ದೆಹಲಿಗೆ ಬರಬೇಕಾದ ನೀರನ್ನು ಬಿಡುಗಡೆ ಮಾಡುತ್ತಿಲ್ಲವೆಂದು ಆರೋಪಿಸಿ ಭೋಗಲ್ ಜಂಗ್ಪುರದಲ್ಲಿ ಅತಿಶಿ ಜೂನ್ 21 ರಿಂದ ಉಪವಾಸ ಸತ್ಯಾಗ್ರಹ ಆರಂಭಿಸಿದ್ದರು.
🚨 Water Minister Atishi's health deteriorates 🚨
— AAP (@AamAadmiParty) June 24, 2024
Her blood sugar level dropped to 43 at midnight and to 36 at 3 AM, after which LNJP Hospital doctors advised immediate hospitalization. She has not eaten anything for the last five days and is on an indefinite hunger strike… pic.twitter.com/nl5iTfnwnT
ಅನಿರ್ದಿಷ್ಟಾವಧಿ ಉಪವಾಸದಿಂದ ಇದೀಗ ಅತಿಶಿ ಆರೋಗ್ಯ ಏರುಪೇರಾಗಿದ್ದು, ಇಂದು ಮುಂಜಾನೆ ದೆಹಲಿಯ ಲೋಕನಾಯಕ ಜೈ ಪ್ರಕಾಶ್ (ಎಲ್‌ಎನ್‌ಜೆಪಿ) ಆಸ್ಪತ್ರೆಗೆ ದಾಖಲಿಸಲಾಗಿದೆ.
ಉಪವಾಸದ 4ನೇ ದಿನ ವೈದ್ಯರು ಅತಿಶಿ ಅವರ ಆರೋಗ್ಯ ತಪಾಸಣೆ ನಡೆಸಿದಾಗ ಆರೋಗ್ಯದ ಸ್ಥಿತಿ ಕಂಡು ಆಸ್ಪತ್ರೆಗೆ ದಾಖಲಿಸುವಂತೆ ಸೂಚಿಸಿದರೂ ದಾಖಲಾಗಲು ನಿರಾಕರಿಸಿದ್ದರು. ಆದರೆ, ಸೋಮವಾರ ತಡರಾತ್ರಿ ಅತಿಶಿ ಅವರ ರಕ್ತದಲ್ಲಿನ ಸಕ್ಕರೆ ಪ್ರಮಾಣ 43ಕ್ಕೆ ಕುಸಿದಿತ್ತು, ಮಂಗಳವಾರಕ್ಕೆ ಅಂದರೆ ಇಂದು ಬೆಳಗ್ಗೆ ತಪಾಸಣೆ ನಡೆಸಿದಾಗ 36ಕ್ಕೆ ಕುಸಿದಿದ್ದು, ಕೂಡಲೇ ಅವರನ್ನು ದಾಖಲಿಸುವಂತೆ ಎಲ್‌ಎನ್‌ಜೆಪಿ ಆಸ್ಪತ್ರೆಯ ವೈದ್ಯರು ಸೂಚಿಸಿದ ಮೇರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.
ಕಳೆದ ಐದು ದಿನಗಳಿಂದ ಸಚಿವೆ ಏನನ್ನೂ ಸೇವಿಸಿದ್ದಿರಲಿಲ್ಲ. 65.8 ಕೆಜಿ ಇದ್ದ ಅತಿಶಿ ಉಪವಾಸದ 4 ನೇ ದಿನದಲ್ಲಿ 63.6 ಕೆಜಿಗೆ ಇಳಿದಿದ್ದಾರೆ. ಒಟ್ಟು 2.2 ಕೆಜಿ ತೂಕ ಕಳೆದುಕೊಂಡಿದ್ದಾರೆ. ಜತೆಗೆ ಅವರ ಮೂತ್ರದ ಕೆಟೋನ್ ಮಟ್ಟವೂ ಹೆಚ್ಚುತ್ತಿದ್ದು ಇದು ದೇಹಕ್ಕೆ ಅಪಾಯಕಾರಿಯಾಗಿದೆ.
ಈ ಮೊದಲೇ ಆಮ್ ಆದ್ಮಿ ಪಕ್ಷ ಅತಿಶಿ ಅವರಿಗೆ ಆಸ್ಪತ್ರೆಗೆ ದಾಖಲಾಗುವಂತೆ ಸೂಚಿಸಿತ್ತು. ಆದರೂ ಹಠ ಬಿಡದ ಸಚಿವೆ ತನ್ನ ಆರೋಗ್ಯವನ್ನು ಪಣಕ್ಕಿಟ್ಟು ಹೋರಾಟ ಮಾಡಿದ್ದಾರೆ. ಎಎಪಿ ಪತ್ರಿಕಾ ಪ್ರಕಟಣೆಯ ಪ್ರಕಾರ, ಆರೋಗ್ಯ ತಪಾಸಣೆ ವರದಿಯಲ್ಲಿ ರಕ್ತದೊತ್ತಡ ಮತ್ತು ಸಕ್ಕರೆ ಮಟ್ಟವು ತೀವ್ರವಾಗಿ ಕುಸಿದಿದೆ ಎಂದು ವೈದ್ಯರು ತಿಳಿಸಿದ್ದಾರೆ ಎಂದು ಎಎಪಿ ಹೇಳಿದೆ.
ಸಚಿವೆ ಅತಿಶಿ ಬೇಡಿಕೆಯೇನು?: ದೆಹಲಿಯಲ್ಲಿ ಒಟ್ಟು 28 ಲಕ್ಷ ಜನರು ಅಗತ್ಯ ನೀರಿನ ಕೊರತೆ ಎದುರಿಸುತ್ತಿದ್ದಾರೆ. ಹರಿಯಾಣ ಸರ್ಕಾರ ದಿನಕ್ಕೆ ದೆಹಲಿಗೆ 613 ಮಿಲಿಯನ್ ಗ್ಯಾಲನ್ ನೀರು ಬಿಡುಗಡೆ ಮಾಡಬೇಕು. ಆದರೆ 513 ಮಿಲಿಯನ್ ಗ್ಯಾಲನ್ ನೀರನ್ನು ಮಾತ್ರ ಬಿಡುಗಡೆ ಮಾಡಲಾಗುತ್ತಿದೆ. ಇದರಿಂದಾಗಿ ದೆಹಲಿಗರಿಗೆ 100 ಮಿಲಿಯನ್ ಗ್ಯಾಲನ್(MGD) ನೀರಿನ ಕೊರತೆ ಉಂಟಾಗಿದೆ. ಇದರಿಂದ ಒಟ್ಟಾರೆ 28 ಲಕ್ಷ ಜನ ಸಂಕಷ್ಟದಲ್ಲಿದ್ದಾರೆ. ಹಾಗಾಗಿ ಹರಿಯಾಣ ಸರ್ಕಾರ ದೆಹಲಿಯ ನೀರಿನ ಹಕ್ಕುಗಳನ್ನು ಸಂಪೂರ್ಣವಾಗಿ ನೀಡುವ ತನಕ ಹಾಗೂ ಹತ್ನಿಕುಂಡ್ ಬ್ಯಾರೇಜ್‌ನ ಗೇಟ್‌ಗಳನ್ನು ತೆರೆಯುವವರೆಗೆ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹವನ್ನು ಮುಂದುವರಿಸುವುದಾಗಿ ಸಚಿವೆ ಅತಿಶಿ ಹೇಳಿದ್ದರು.
ಇದನ್ನೂ ಓದಿ: ನೀರಿಗಾಗಿ ಆಗ್ರಹಿಸಿ ದೆಹಲಿ ಸಚಿವೆ ಅತಿಶಿ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ: ಬಿಜೆಪಿ ಗರಂ - indefinite hunger