ಲಕ್ನೋ (ಉತ್ತರ ಪ್ರದೇಶ): ಇಲ್ಲಿನ ಮಾದೇ ಗಂಜ್ ಪ್ರದೇಶದಲ್ಲಿ ತನ್ನ ಮನೆಯ ಟೆರೇಸ್‌ನಲ್ಲಿ ಮದ್ಯ ಸೇವನೆಗೆ ಅವಕಾಶ ನಿರಾಕರಿಸಿದ್ದಕ್ಕೆ ಸ್ಥಳೀಯ ಗೂಂಡಾಗಳು ವ್ಯಾಪಾರಿಯೊಬ್ಬರನ್ನು ಛಾವಣಿಯ ಮೇಲಿಂದ ಎಸೆದಿರುವ ದೃಶ್ಯ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಮೇಲಿಂದ ಬಿದ್ದ ಮೇಲೆಯೂ ವ್ಯಾಪಾರಿಗೆ ಗೂಂಡಾಗಳು ಮತ್ತೆ ಥಳಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಲಕ್ನೋ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಎಲ್ಲಾ ಆರೋಪಿಗಳನ್ನು ಬಂಧಿಸಿದ್ದಾರೆ.
ಐವರು ಗೂಂಡಾಗಳು ಬಲವಂತವಾಗಿ ವ್ಯಾಪಾರಿಯ ಮನೆಗೆ ನುಗ್ಗಿ ಮದ್ಯ ಸೇವಿಸಲು ಆತನ ಛಾವಣಿಗೆ ಹೋಗುವುದಕ್ಕೆ ಅನುಮತಿಸುವಂತೆ ಒತ್ತಾಯಿಸಿದ್ದಾರೆ. ಇದಕ್ಕೆ ವ್ಯಾಪಾರಿ ನಿರಾಕರಿಸಿದಾಗ, ದುಷ್ಕರ್ಮಿಗಳು ಅವರನ್ನು ಛಾವಣಿಯಿಂದ ನೆಲಕ್ಕೆ ಎಸೆದಿದ್ದಾರೆ.
ಆರೋಪಿಗಳಾದ ನಿಕ್ಕಿ, ಸಾಕೇತ್ ಮತ್ತು ಅಮಿತ್, ಗೌತಮ್ ಮತ್ತು ಅಂಕುರ್ ಮದ್ಯದ ಅಮಲಿನಲ್ಲಿ ಆಗಾಗ ಗಲಾಟೆ ಮಾಡುತ್ತಿದ್ದರು ಮತ್ತು ನೆರೆಹೊರೆಯವರಲ್ಲಿ ಬೆದರಿಕೆಯನ್ನು ಸೃಷ್ಟಿಸುತ್ತಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ವೈರಲ್ ಆಗಿರುವ ವಿಡಿಯೋದಲ್ಲಿ, ಅಮಿತ್, ಗೌತಮ್ ಮತ್ತು ಅಂಕುರ್ ಅವರು ವ್ಯಾಪಾರಿ ಯಾದವ್‌ನನ್ನು ಎತ್ತಿಕೊಂಡು ಕಟ್ಟಡದ ಮೊದಲ ಮಹಡಿಯ ಟೆರೇಸ್‌ನಿಂದ ಕೊಲೆ ಮಾಡುವ ಉದ್ದೇಶದಿಂದ ಕೆಳಗೆ ಎಸೆದಿರುವುದನ್ನು ಕಾಣಬಹುದು. ವಿಡಿಯೋದ ನಂತರದ ಭಾಗದಲ್ಲಿ, ದಾರಿಹೋಕರೊಬ್ಬರು ಇವರಿಗೆ ಸಹಾಯವನ್ನು ನೀಡಲು ಪ್ರಯತ್ನಿಸುತ್ತಿರುವುದು ದಾಖಲಾಗಿದೆ. ಆದರೆ ಇಷ್ಟಕ್ಕೆ ಸುಮ್ಮನಾಗದ ಗೂಂಡಾಗಳು ಯಾದವ್ ಮೇಲೆ ಮತ್ತೆ ಹಲ್ಲೆ ಮುಂದುವರೆಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಎಕ್ಸ್ನಲ್ಲಿ ಪೊಲೀಸರು ಪ್ರತಿಕ್ರಿಯಿಸಿದ್ದು, "ಅಗತ್ಯ ಕಾನೂನು ಕ್ರಮಕ್ಕೆ ಮುಂದಾಗಿರುವುದಾಗಿ ತಿಳಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಬಗ್ಗೆ ಈಗಾಗಲೇ ಮಡೆಗಂಜ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಮತ್ತು ತನಿಖೆ ನಡೆಯುತ್ತಿದೆ ಎಂದು ಹೇಳಿದ್ದಾರೆ.
ರಾಜಕೀಯ ಕೆಸರೆರಚಾಟ : ಯೋಗಿ ಆದಿತ್ಯನಾಥ್ ನೇತೃತ್ವದ ಸರ್ಕಾರವನ್ನು ಗುರಿಯಾಗಿಸಿಕೊಂಡು ಕಾಂಗ್ರೆಸ್ ಪಕ್ಷವು ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯ ಪರಿಸ್ಥಿತಿ ಕುರಿತಂತೆ ತೀವ್ರ ವಾಗ್ದಾಳಿ ನಡೆಸಿದೆ. 'ಅಪರಾಧಿಗಳು ಯಾವುದೇ ಭಯವಿಲ್ಲದೆ ಬಹಿರಂಗವಾಗಿ ಅಪರಾಧಗಳನ್ನು ಮಾಡುತ್ತಿದ್ದಾರೆ. ನಿನ್ನೆಯಷ್ಟೇ ಮಾಜಿ ಐಎಎಸ್ ಅಧಿಕಾರಿಯ ಪತ್ನಿಯನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದ್ದು, ಇದೀಗ ರೌಡಿಗಳು ಯುವಕನೊಬ್ಬನನ್ನು ಮನೆಯ ಮಾಳಿಗೆಯಿಂದ ಕೆಳಗೆ ಎಸೆದಿದ್ದಾರೆ.
ಯುವಕನು ನೋವಿನಿಂದ ನರಳುತ್ತಿದ್ದರೂ ಜೀವಂತವಾಗಿರುವುದನ್ನು ಕಂಡಿರುವ ಅವರು, ಅವನನ್ನು ನಿರ್ದಯವಾಗಿ ಹೊಡೆಯಲು ಪ್ರಾರಂಭಿಸಿದ್ದಾರೆ. ರಾಜಧಾನಿಯಲ್ಲಿ ಇಂತಹ ಘಟನೆಗಳು ಸಾಮಾನ್ಯವಾಗುತ್ತಿವೆ ಮತ್ತು ಧೃತರಾಷ್ಟ್ರ ರಾಜ್ಯದ ಮುಖ್ಯಸ್ಥನಾಗಿ ಉಳಿದಿದ್ದಾನೆ. ಆದಿತ್ಯನಾಥ್ ಜೀ, ನಿಮಗೆ ಅಧಿಕಾರವನ್ನು ನಿಭಾಯಿಸಲು ಸಾಧ್ಯವಾಗದಿದ್ದರೆ ನೀವು ಏಕೆ ರಾಜೀನಾಮೆ ನೀಡಬಾರದು? ರಾಜ್ಯದ ಜನರನ್ನು ಏಕೆ ನರಕಕ್ಕೆ ತಳ್ಳುತ್ತಿದ್ದೀರಿ?' ಎಂದು ಪ್ರಶ್ನಿಸಿದೆ.
ಇದನ್ನೂ ಓದಿ : ಪಶ್ಚಿಮ ಬಂಗಾಳ: ಬಿಜೆಪಿ ನಾಯಕಿಗೆ ಚೂರಿ ಇರಿತ.. ಟಿಎಂಸಿ ಕೃತ್ಯ ಎಂದ ಬಿಜೆಪಿ