ಮೀರತ್ (ಉತ್ತರ ಪ್ರದೇಶ): ಶನಿವಾರ ಸಂಜೆ ಉತ್ತರ ಪ್ರದೇಶದ ಮೀರತ್ನ ಮೂರು ಅಂತಸ್ತಿನ ಕಟ್ಟಡ ಕುಸಿದಿದೆ. ದುರಂತದಲ್ಲಿ ಈವರೆಗೆ 10 ಜನ ಸಾವನ್ನಪ್ಪಿದ್ದಾರೆ. ಇನ್ನು ಐವರು ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ಮೃತರೆಲ್ಲರೂ ಒಂದೇ ಕುಟುಂಬದವರೆಂದು ತಿಳಿದುಬಂದಿದೆ.
ಮೃತ 10 ಜನರಲ್ಲಿ ಆರು ಮಕ್ಕಳಿದ್ದಾರೆ. ಸಾಜೀದ್ (40), ಇವರ ಪುತ್ರಿ ಸಾನಿಯಾ (15), ಪುತ್ರ ಶಕೀಬ್ (11) ಮತ್ತು ಸಿಮ್ರಾ (ಒಂದೂವರೆ ವರ್ಷ), ರೀಜಾ (7), ನಪೋ (63), ಫರ್ಹಾನ್ (20), ಅಲಿಸಾ (18), ಅಲಿಯಾ (6) ಮತ್ತು ರಿಮ್ಸಾ (5 ತಿಂಗಳು) ಮೃತಪಟ್ಟವರೆಂದು ಜಿಲ್ಲಾಡಳಿತ ಮಾಹಿತಿ ನೀಡಿದೆ.
ಅವಶೇಷಗಳಡಿ ಯಾರಾದರೂ ಸಿಲುಕಿದ್ದಾರೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಶೋಧ ಹಾಗೂ ರಕ್ಷಣಾ ಕಾರ್ಯಾಚರಣೆ ಮುಂದುವರಿಸಲಾಗಿದೆ. ಗಾಯಗೊಂಡ ಐವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವಶೇಷಗಳಡಿಯಿಂದ ತೆಗೆದ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆ ಸೇರಿದಂತೆ ಹೆಚ್ಚಿನ ವೈದ್ಯಕೀಯ ಕಾರ್ಯವಿಧಾನಗಳಿಗಾಗಿ ಆಸ್ಪತ್ರೆಗೆ ಕಳುಹಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಮಾಧ್ಯಮಗಳ ಜೊತೆಗೆ ಮಾತನಾಡಿದ ಮೀರತ್ನ ಡಿಎಂ ದೀಪಕ್ ಮೀನಾ, "ಮೀರತ್ ನಗರದ ಜಾಕಿರ್ ಕಾಲೊನಿ ಪ್ರದೇಶದಲ್ಲಿ ಶನಿವಾರ ಸಂಜೆ 4.30 ಸುಮಾರಿಗೆ ಈ ಘಟನೆ ಸಂಭವಿಸಿದೆ. ಕುಟುಂಬ ಹಾಗೂ ಸಂಬಂಧಿಕರು ಹೇಳಿದಂತೆ 15 ಜನರು ಮನೆಯ ಅವಶೇಷಗಳಡಿ ಸಿಲುಕ್ಕಿದ್ದರು. ಅವರಲ್ಲಿ 10 ಮಂದಿ ಸಾವನ್ನಪ್ಪಿದ್ದು, ಉಳಿದವರನ್ನು ರಕ್ಷಿಸಲಾಗಿದೆ. ಗಾಯಗೊಂಡ ಐವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ಸಾಗಿಸಲಾಗಿದೆ. ಅವಶೇಷಗಳನ್ನು ತೆರವುಗೊಳಿಸುವ ಕಾರ್ಯ ನಡೆಯುತ್ತಿದೆ. ಅವಶೇಷಗಳಡಿ ಇನ್ನು ಯಾರೂ ಬಾಕಿಯಾಗಿಲ್ಲ ಎನ್ನುವುದನ್ನು ಖಚಿತಪಡಿಸಿಕೊಳ್ಳುವವರೆಗೆ ರಕ್ಷಣಾ ಕಾರ್ಯಾಚರಣೆ ಮುಂದುವರಿಸಲಾಗುವುದು." ಎಂದು ತಿಳಿಸಿದರು.
ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್) ಮತ್ತು ರಾಜ್ಯ ವಿಪತ್ತು ನಿರ್ವಹಣಾ ಪಡೆ (ಎಸ್‌ಡಿಆರ್‌ಎಫ್) ತಂಡಗಳು ಘಟನಾ ಸ್ಥಳದಲ್ಲಿದ್ದು, ಪ್ರದೇಶದಲ್ಲಿ ಮಳೆಯ ನಡುವೆಯೂ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ತಂಡಗಳು ಯಾರಾದರೂ ಅವಶೇಷಗಳಡಿ ಸಿಲುಕ್ಕಿದ್ದಾರೆಯೇ ಎಂಬುದನ್ನು ಪತ್ತೆಹಚ್ಚಲು ಸ್ನಿಫರ್ ಡಾಗ್ಗಳನ್ನು ಬಳಸಿವೆ.
50 ವರ್ಷಗಳಷ್ಟು ಹಳೆಯದಾದ ಮನೆ ಇದಾಗಿತ್ತು. ಸರಿಯಾಗಿ ದುರಸ್ತಿ ಮಾಡದ ಕಾರಣ, ಮಳೆಯಿಂದಾಗಿ ಏಕಾಏಕಿ ಕುಸಿದಿದೆ. ಈ ವೇಳೆ ಒಂದೇ ಕುಟುಂಬದ 15 ಮಂದಿ ಅವಶೇಷಗಳಡಿ ಸಿಲುಕಿದ್ದರು. ಅವರಲ್ಲಿ 10 ಮಂದಿ ಶವವಾಗಿ ಪತ್ತೆಯಾಗಿದ್ದಾರೆ. ಮನೆಯ ಕೆಳ ಭಾಗದಲ್ಲಿದ್ದ ಜಾನುವಾರುಗಳೂ ಸಾವನ್ನಪ್ಪಿವೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ: ಮೂರಂತಸ್ತಿನ ಕಟ್ಟಡ ಕುಸಿತ; ಸಾವಿನ ಸಂಖ್ಯೆ 8ಕ್ಕೇರಿಕೆ - Building Collapse