ನವದೆಹಲಿ: ಕೋಲ್ಕತ್ತಾದಲ್ಲಿನ ಕಿರಿಯ ವೈದ್ಯೆ ಅತ್ಯಾಚಾರ, ಕೊಲೆ ಪ್ರಕರಣ ಖಂಡಿಸಿ ದೇಶಾದ್ಯಂತ ಪ್ರತಿಭಟನೆ ನಡೆಸಲು ಭಾರತೀಯ ವೈದ್ಯಕೀಯ ಸಂಘ (ಐಎಂಎ) ಸಜ್ಜುಗೊಂಡಿದೆ. ಕೋಲ್ಕತ್ತಾದ ಆರ್‌ಜಿ ಕಾರ್ ವೈದ್ಯಕೀಯ ಆಸ್ಪತ್ರೆಯಲ್ಲಿ ಬುಧವಾರ ರಾತ್ರಿ ನಡೆದ ಅಮಾನುಷ ಕೃತ್ಯದ ವಿರುದ್ಧ ಶನಿವಾರ (ಆಗಸ್ಟ್ 17) ಬೆಳಗ್ಗೆ 6 ಗಂಟೆಯಿಂದ ದೇಶಾದ್ಯಂತ ಹೊರರೋಗಿ(OP) ಸೇವೆಗಳನ್ನು ಬಂದ್ ಮಾಡಲಾಗುತ್ತಿದೆ. ತುರ್ತು ಹಾಗೂ ಅಪಘಾತ ಸೇವೆಗಳು ಎಂದಿನಂತೆ ಕಾರ್ಯನಿರ್ವಹಿಸುವ ಬಗ್ಗೆ ರಾಜ್ಯ ಇಲಾಖೆಗಳ ಜೊತೆಗಿನ ಸಭೆ ಬಳಿಕ ಐಎಂಎ ಈ ನಿರ್ಧಾರ ಕೈಗೊಂಡಿದೆ.
ಮಹಿಳಾ ವೈದ್ಯೆಯ ಮೇಲಿನ ಅಮಾನುಷ ಘಟನೆಯನ್ನು ವಿರೋಧಿಸಿ ಕೋಲ್ಕತ್ತಾದ ಆರ್‌ಜಿ ಕಾರ್ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿಗಳು ಸ್ವಾತಂತ್ರ್ಯ ದಿನಾಚರಣೆಯಂದು (ಬುಧವಾರ ರಾತ್ರಿ) ಪ್ರತಿಭಟನೆ ನಡೆಸಿದರು. ಪ್ರತಿಭಟನೆ ನಡೆಯುತ್ತಿರುವಾಗಲೇ ಆವರಣದ ಮೇಲೆ ಗುಂಪೊಂದು ದಾಳಿ ನಡೆಸಿತು. ಈ ಹ್ಯೇಯ ಕೃತ್ಯದ ವಿರುದ್ಧ ಶನಿವಾರ (ಆಗಸ್ಟ್ 17) ಬೆಳಗ್ಗೆ 6 ಗಂಟೆಯಿಂದ ಭಾನುವಾರ (ಆಗಸ್ಟ್ 18) ಬೆಳಗ್ಗೆ 6 ಗಂಟೆಯವರೆಗೆ ಮಾಡರ್ನ್ ಮೆಡಿಸಿನ್ ವೈದ್ಯರ ಸೇವೆಯನ್ನು ಬಂದ್ ಮಾಡಲಾಗುತ್ತಿದೆ.
ವೈದ್ಯಕೀಯ ವೃತ್ತಿಯ ಸ್ವರೂಪದಿಂದಾಗಿ ವಿಶೇಷವಾಗಿ ವೈದ್ಯೆಯರು ಹಿಂಸೆಗೆ ಬಲಿಯಾಗುತ್ತಾರೆ. ಅಂತಹ ವೈದ್ಯರಿಗೆ ಆಸ್ಪತ್ರೆ ಮತ್ತು ಕ್ಯಾಂಪಸ್‌ಗಳಲ್ಲಿ ಭದ್ರತೆ ಒದಗಿಸುವ ಜವಾಬ್ದಾರಿ ಅಧಿಕಾರಿಗಳ ಮೇಲಿದೆ. ವೈದ್ಯರು, ಶುಶ್ರೂಷಕರು ಹಾಗೂ ಇತರ ಆರೋಗ್ಯ ಕಾರ್ಯಕರ್ತರ ಬೇಡಿಕೆಗಳನ್ನು ನೋಡಿಕೊಳ್ಳುವ ಅಧಿಕಾರಿಗಳ ನಿರಾಸಕ್ತಿಯಿಂದಾಗಿ ದೈಹಿಕ ಹಲ್ಲೆ, ಅಪರಾಧಗಳು ನಡೆಯುತ್ತಿವೆ ಎಂದು ಐಎಂಎ ಪ್ರಕಟಣೆಯಲ್ಲಿ ವಿವರಿಸಿದೆ.
ದೆಹಲಿಯಲ್ಲಿ ವೈದ್ಯಕೀಯ ಮುಷ್ಕರ!: ಮತ್ತೊಂದೆಡೆ, ದೆಹಲಿ ರೆಸಿಡೆಂಟ್ ಡಾಕ್ಟರ್ಸ್ ಅಸೋಸಿಯೇಷನ್ (ಆರ್ಡಿಎ) ರಾಷ್ಟ್ರ ರಾಜಧಾನಿಯಲ್ಲಿ ಪ್ರತಿಭಟನೆ ನಡೆಸಲು ಸಿದ್ಧವಾಗಿದೆ. ಈ ನಿಟ್ಟಿನಲ್ಲಿ ದೆಹಲಿಯ AIIMS, SJH, MAMC ಆಸ್ಪತ್ರೆಗಳ RDAಗಳ ಪ್ರತಿನಿಧಿಗಳು ಸಭೆ ನಡೆಸಿದರು. ವ್ಯಾಪಕವಾದ ಚರ್ಚೆಗಳ ನಂತರ, ದೆಹಲಿಯಾದ್ಯಂತ ಎಲ್ಲಾ RDAಗಳು ಆಗಸ್ಟ್ 16ರಂದು ಹೊಸ ದೆಹಲಿಯ ನಿರ್ಮಾಣ್ ಭವನದಲ್ಲಿ ಜಂಟಿ ಪ್ರತಿಭಟನೆ ನಡೆಸಲಾಗುತ್ತಿದೆ.
19 ಜನರ ಬಂಧನ: ಆರ್‌ಜಿ ಕರ್ ಆಸ್ಪತ್ರೆಯಲ್ಲಿ ಬುಧವಾರ ರಾತ್ರಿ ನಡೆದ ವೈದ್ಯೆ ಮೇಲಿನ ಅತ್ಯಾಚಾರ, ಕೊಲೆ ಪ್ರಕರಣ ಸಂಬಂಧ 19 ಜನರನ್ನು ಬಂಧಿಸಲಾಗಿದೆ ಎಂದು ಕೋಲ್ಕತ್ತಾ ಪೊಲೀಸರು ತಿಳಿಸಿದ್ದಾರೆ. ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳ ಪ್ರತಿಕ್ರಿಯೆಯ ಆಧಾರದ ಮೇಲೆ ಅವರಲ್ಲಿ ಐವರನ್ನು ಗುರುತಿಸಲಾಗಿದೆ.
'ಸಾಕ್ಷ್ಯ ನಾಶಪಡಿಸುವುದನ್ನು ನಿಲ್ಲಿಸಿ!': ಘಟನೆ ಕುರಿತಂತೆ, ಬಂಗಾಳದ ಪ್ರತಿಪಕ್ಷದ ನಾಯಕ ಸುವೇಂದು ಅಧಿಕಾರಿ, ಕೇಂದ್ರ ಗೃಹ ಕಾರ್ಯದರ್ಶಿ ಮತ್ತು ಸಿಬಿಐ ನಿರ್ದೇಶಕರಿಗೆ ಆಸ್ಪತ್ರೆಯಲ್ಲಿ ವಿಧ್ವಂಸಕ ಕೃತ್ಯಗಳ ಬಗ್ಗೆ ಪತ್ರ ಬರೆದಿದ್ದಾರೆ. ಸಾಕ್ಷ್ಯಾಧಾರಗಳನ್ನು ಮತ್ತಷ್ಟು ನಾಶಪಡಿಸುವುದನ್ನು ತಡೆಯಲು ಆರ್‌ಜಿ ಕರ್ ಆಸ್ಪತ್ರೆಯಲ್ಲಿ ಸಿಎಪಿಎಫ್ ಸಿಬ್ಬಂದಿಯನ್ನು ನಿಯೋಜಿಸುವಂತೆ ಕೋರಿದ್ದಾರೆ.
ಓದಿ: ಬಂಗಾಳ ವೈದ್ಯೆ ಅತ್ಯಾಚಾರ, ಕೊಲೆ ಕೇಸ್: ಕಾಂಗ್ರೆಸ್-ಟಿಎಂಸಿ ಮಧ್ಯೆ ವಾಗ್ಯುದ್ಧ - Doc Rape And Murder Case