ನವದೆಹಲಿ: ಕೇಂದ್ರ ವಿಚಕ್ಷಣಾ ದಳ (CVC) ದೇಶದಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ ಪ್ರಕರಣಗಳ ಬಗ್ಗೆ ಅಚ್ಚರಿಯ ಅಂಕಿ - ಅಂಶಗಳನ್ನು ಬಹಿರಂಗಪಡಿಸಿದೆ. ಕಳೆದ ವರ್ಷ ಸಿವಿಸಿಗೆ ಬಂದಿರುವ ಭ್ರಷ್ಟಾಚಾರ ದೂರುಗಳಲ್ಲಿ ಅತಿ ಹೆಚ್ಚು ರೈಲ್ವೇ ನೌಕರರ ವಿರುದ್ಧವೇ ಇವೆ. ನಂತರ, ದೆಹಲಿಯ ಸ್ಥಳೀಯ ಸಂಸ್ಥೆಗಳು ಮತ್ತು ಸಾರ್ವಜನಿಕ ವಲಯದ ಬ್ಯಾಂಕ್‌ಗಳ ವಿರುದ್ಧ ಆಪಾದನೆಗಳು ಬಂದಿವೆ ಎಂದು ತನ್ನ ವಾರ್ಷಿಕ ವರದಿಯಲ್ಲಿ ತಿಳಿಸಿದೆ.
ಮಂಗಳವಾರ ಬಿಡುಗಡೆ ಮಾಡಿರುವ ವರದಿಯಲ್ಲಿ 2023 ರಲ್ಲಿ ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ 74,203 ದೂರುಗಳು ಬಂದಿವೆ. ಇದರಲ್ಲಿ 66,373 ದೂರುಗಳನ್ನು ವಿಲೇವಾರಿ ಮಾಡಲಾಗಿದೆ. 7,830 ಕೇಸ್ ಬಾಕಿ ಇವೆ. ಅತಿ ಹೆಚ್ಚು ಭ್ರಷ್ಟತೆ ನಡೆಸಿದ್ದು, ರೈಲ್ವೆ ಇಲಾಖೆಯಾಗಿದೆ. ಅಲ್ಲಿನ ನೌಕರರ ವಿರುದ್ಧ 10,447 ದೂರುಗಳು ಸಲ್ಲಿಕೆಯಾಗಿವೆ ಎಂದು ಸಿವಿಸಿ ಹೇಳಿದೆ.
ದೆಹಲಿ ಸ್ಥಳೀಯ ಸಂಸ್ಥೆಗಳ ವಿರುದ್ಧ ರಾಶಿ ದೂರು: ರಾಷ್ಟ್ರೀಯ ರಾಜಧಾನಿ ದೆಹಲಿಯ ಸ್ಥಳೀಯ ಸಂಸ್ಥೆಗಳ ವಿರುದ್ಧ ಜನರು ರಾಶಿ ರಾಶಿ ದೂರುಗಳನ್ನು ಸಲ್ಲಿಸಿದ್ದಾರೆ. ಒಂದೇ ವರ್ಷದಲ್ಲಿ ಹಲವು ಸಂಸ್ಥೆಗಳ ವಿರುದ್ಧ 7,665 ಆಪಾದನೆಗಳನ್ನು ಸಲ್ಲಿಸಿದ್ದಾರೆ. ಕೈಗಾರಿಕಾ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮ, ಜಲ ಮಂಡಳಿ, ಪ್ರವಾಸೋದ್ಯಮ ಮತ್ತು ಸಾರಿಗೆ ಅಭಿವೃದ್ಧಿ ನಿಗಮ, ಸಾರಿಗೆ ನಿಗಮ, ದೆಹಲಿ ಟ್ರಾನ್ಸ್‌ಕೋ, ವಿದ್ಯುತ್ ಉತ್ಪಾದನೆ ಮತ್ತು ಮುನ್ಸಿಪಲ್ ಕಾರ್ಪೊರೇಷನ್‌ನಲ್ಲಿ ಭ್ರಷ್ಟಾಚಾರದ ಹಲವು ದೂರುಗಳು ಬಂದಿವೆ ಎಂದು ಸಿವಿಸಿ ವಿವರಿಸಿದೆ. ದೆಹಲಿಯಲ್ಲಿ ಸರ್ಕಾರಿ ನೌಕರರ ಭ್ರಷ್ಟಾಚಾರದ ವಿರುದ್ಧ 6,638 ದೂರುಗಳು ಬಂದರೆ, ಅಲ್ಲಿನ ಪೊಲೀಸರ ವಿರುದ್ಧ 3,325 ದೂರುಗಳು ಬಂದಿವೆ ಎಂದು ವರದಿಯಲ್ಲಿ ನಮೂದಿಸಲಾಗಿದೆ.
ಬ್ಯಾಂಕ್‌ಗಳ ಮೇಲೆ ಆಪಾದನೆ: ಜನರು ಮೂರನೇ ಅತ್ಯಧಿಕ ದೂರು ಆಗಿ ಸಾರ್ವಜನಿಕ ಬ್ಯಾಂಕ್‌ಗಳ ಮೇಲೆ ನೀಡಿದ್ದಾರೆ. ಬ್ಯಾಂಕ್‌ಗಳ ವಿರುದ್ಧ 7,004 ದೂರುಗಳು ಬಂದಿವೆ. ಅದರಲ್ಲಿ 6,667 ಅನ್ನು ವಿಲೇವಾರಿ ಮಾಡಿದ್ದರೆ, 337 ಬಾಕಿ ಉಳಿದಿವೆ. ಜೊತೆಗೆ ಕೇಂದ್ರ ಕಲ್ಲಿದ್ದಲು ಇಲಾಖೆ ನೌಕರರ ವಿರುದ್ಧ 4,420, ಕೇಂದ್ರ ಕಾರ್ಮಿಕ ಇಲಾಖೆ ನೌಕರರ ವಿರುದ್ಧ 3,217, ಪೆಟ್ರೋಲಿಯಂ ಇಲಾಖೆಯ ನೌಕರರ ವಿರುದ್ಧ 2,749, ಗೃಹ ಇಲಾಖೆಯ ನೌಕರರ ವಿರುದ್ಧ 2,309, ರಕ್ಷಣಾ ಇಲಾಖೆಯ ನೌಕರರ ವಿರುದ್ಧ 1,861, ಕೇಂದ್ರೀಯ ನೇರ ತೆರಿಗೆ ಮಂಡಳಿಯ ನೌಕರರ ವಿರುದ್ಧ 1,828, ದೂರಸಂಪರ್ಕ ಇಲಾಖೆಯ ನೌಕರರ ವಿರುದ್ಧ 1457, ಕೇಂದ್ರ ಪರೋಕ್ಷ ತೆರಿಗೆಗಳು ಮತ್ತು ಕಸ್ಟಮ್ಸ್ ಮಂಡಳಿಯ ನೌಕರರ ವಿರುದ್ಧ 1205 ದೂರುಗಳು ಬಂದಿವೆ. ಇವಲ್ಲದೇ ಬೇರೆ ಕೆಲವು ಸರ್ಕಾರಿ ಇಲಾಖೆಗಳ ನೌಕರರ ವಿರುದ್ಧವೂ ಆಪಾದನೆಗಳು ಬಂದಿವೆ ಎಂದು ಸಿವಿಸಿ ಹೇಳಿದೆ.
ಇದನ್ನೂ ಓದಿ: ಛತ್ತೀಸ್ಗಢದಲ್ಲಿ 9 ನಕ್ಸಲೀಯರು ಹತ, ಐವರು ಶರಣಾಗತಿ; ಭಾರೀ ಶಸ್ತ್ರಾಸ್ತ್ರಗಳು ಪೊಲೀಸರ ವಶ - Naxals killed in Chhattisgarh