ಭೋಪಾಲ್(ಮಧ್ಯಪ್ರದೇಶ): ಶಿಷ್ಯವೇತನದ ನೆಪದಲ್ಲಿ ಧ್ವನಿ ಬದಲಿಸುವ ಆ್ಯಪ್ ಬಳಸಿ, ಕಾಲೇಜು ಶಿಕ್ಷಕಿಯ ಸೋಗಿನಲ್ಲಿ 7 ವಿದ್ಯಾರ್ಥಿನಿಯರ ಮೇಲೆ ಅತ್ಯಾಚಾರವೆಸಗಿದ ಹೇಯ ಕೃತ್ಯ ಮಧ್ಯಪ್ರದೇಶದಲ್ಲಿ ಬೆಳಕಿಗೆ ಬಂದಿದೆ. ಪ್ರಕರಣದ ಪ್ರಮುಖ ಆರೋಪಿ ಸೇರಿ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.
ಸಿಧಿ ಜಿಲ್ಲೆಯಲ್ಲಿ ಈ ಪ್ರಕರಣ ನಡೆದಿದೆ. ಆರೋಪಿಯ ಬಲೆಗೆ ಬಿದ್ದವರು ಬುಡಕಟ್ಟು ಜನಾಂಗದ ವಿದ್ಯಾರ್ಥಿನಿಯರಾಗಿದ್ದಾರೆ. ಸ್ಕಾಲರ್ಶಿಪ್ ನೀಡುವ ನೆಪದಲ್ಲಿ ವಿದ್ಯಾರ್ಥಿನಿಯರ ಮೊಬೈಲ್ಗೆ ಕರೆ ಮಾಡಿ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಅತ್ಯಾಚಾರ ಮಾಡಲಾಗುತ್ತಿತ್ತು ಎಂಬ ಆಘಾತಕಾರಿ ಸಂಗತಿ ಬಯಲಾಗಿದೆ.
ಧ್ವನಿ ಬದಲಿಸಿ ದುಷ್ಕೃತ್ಯ: ಬಂಧಿತ ಆರೋಪಿ ಬ್ರಜೇಶ್ ಪ್ರಜಾಪತಿ, ಧ್ವನಿ ಬದಲಿಸುವ ಆ್ಯಪ್ ಬಳಸಿ ಕಾಲೇಜಿನ ಶಿಕ್ಷಕಿಯಂತೆ ಮಾತನಾಡುತ್ತಾ, ವಿದ್ಯಾರ್ಥಿನಿಯರನ್ನು ಯಾಮಾರಿಸುತ್ತಿದ್ದ. ನಿಮಗೆ ಶಿಷ್ಯವೇತನ ಹಣ ಬಂದಿದೆ. ಬಂದು ತೆಗೆದುಕೊಳ್ಳಿ ಎಂದು ತಿಳಿಸುತ್ತಿದ್ದ. ಇದನ್ನು ನಂಬಿದ ವಿದ್ಯಾರ್ಥಿನಿಯರು ಮೋಸ ಹೋಗಿದ್ದಾರೆ.
"ಮಹಿಳಾ ಶಿಕ್ಷಕಿಯಂತೆ ಮಾತನಾಡಿ ಕರೆ ಮಾಡುತ್ತಿದ್ದ. ಬಳಿಕ ನನ್ನ ಮಗ ನಿಮ್ಮನ್ನು ಕರೆದೊಯ್ದು ಹಣ ಕೊಡಿಸುತ್ತಾನೆ ಎಂದು ನಂಬಿಸುತ್ತಿದ್ದ. ಬಳಿಕ ಆರೋಪಿ ತಾನೇ ಬೈಕ್ನಲ್ಲಿ ಬಂದು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಅತ್ಯಾಚಾರ ಮಾಡುತ್ತಿದ್ದ. ಕೃತ್ಯದ ಬಳಿಕ ಮೊಬೈಲ್ ಕಸಿದುಕೊಂಡು ಹೋಗುತ್ತಿದ್ದ" ಎಂದು ಸಂತ್ರಸ್ತೆಯೊಬ್ಬರು ದೂರು ನೀಡಿದ್ದಾರೆ.
ಎಸ್ಐಟಿ ರಚನೆ: ರಾಜ್ಯದಲ್ಲಿ ಸತತ ಅತ್ಯಾಚಾರ ಪ್ರಕರಣಗಳು ದಾಖಲಾಗುತ್ತಿರುವುದರ ವಿರುದ್ಧ ತನಿಖೆ ನಡೆಸಲು ಮುಖ್ಯಮಂತ್ರಿ ಮೋಹನ್ ಯಾದವ್ ಅವರು ಎಸ್ಐಟಿ ರಚಿಸಿದ್ದರು. ಇದೀಗ ಆರೋಪಿಯನ್ನು ಬಂಧಿಸಲಾಗಿದೆ. ಆರೋಪಿ ತಾನು ಮಾಡಿದ ದುಷ್ಕೃತ್ಯ ಒಪ್ಪಿಕೊಂಡಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿರುವ ಇನ್ಸ್‌ಪೆಕ್ಟರ್ ಜನರಲ್ (ಐಜಿ) ಮಹೇಂದ್ರ ಸಿಂಗ್ ಸಿಕರ್ವಾರ್, "ಕಾಲೇಜು ಶಿಕ್ಷಕಿಯ ಸೋಗಿನಲ್ಲಿ ಆರೋಪಿ ವಿದ್ಯಾರ್ಥಿನಿಯರಿಗೆ ಕರೆ ಮಾಡಿ ಹಣ ನೀಡಲು ಕರೆದೊಯ್ದು ಅತ್ಯಾಚಾರ ಎಸಗಿದ್ದಾನೆ. 7 ಜನರ ಮೇಲೆ ದೌರ್ಜನ್ಯ ನಡೆಸಿದ ಬಗ್ಗೆ ಒಪ್ಪಿಕೊಂಡಿದ್ದಾನೆ. ನಾಲ್ವರು ವಿದ್ಯಾರ್ಥಿನಿಯರು ದೂರು ನೀಡಲು ಮುಂದೆ ಬಂದಿದ್ದಾರೆ."
"ಆತ ಇನ್ನಷ್ಟು ಹುಡುಗಿಯರ ಮೇಲೆ ಅತ್ಯಾಚಾರ ನಡೆಸಿರುವ ಶಂಕೆ ಇದೆ. ಆರೋಪಿಯ ಜೊತೆಗೆ ಆತನ ಸಹಚರರಾದ ಲವ್ಕುಶ ಪ್ರಜಾಪತಿ, ರಾಹುಲ್ ಪ್ರಜಾಪತಿ ಮತ್ತು ಸಂದೀಪ್ ಪ್ರಜಾಪತಿಯನ್ನೂ ಬಂಧಿಸಲಾಗಿದೆ. ಅವರಿಂದ 16 ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಇವರಲ್ಲಿ ಒಬ್ಬ ಕಾಲೇಜು ವಿದ್ಯಾರ್ಥಿಯಾಗಿದ್ದು, ಕಾಲೇಜು ವಾಟ್ಸ್‌ಆ್ಯಪ್ ಗ್ರೂಪ್‌ನಿಂದ ಹುಡುಗಿಯರ ಸಂಖ್ಯೆಗಳನ್ನು ಪಡೆದುಕೊಳ್ಳುತ್ತಿದ್ದರು."
"ಪ್ರಕರಣದಲ್ಲಿ ಆರೋಪಿ ಹೊರತಾಗಿ ಉಳಿದವರ ಪಾತ್ರದ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಮೇ 13ರಿಂದ ಈವರೆಗೂ ಒಂದು ಪೋಕ್ಸೋ ಕೇಸ್ ಸೇರಿ ನಾಲ್ಕು ಪ್ರಕರಣಗಳು ದಾಖಲಾಗಿವೆ. ಅಕ್ರಮವಾಗಿ ಕಟ್ಟಿರುವ ಆರೋಪಿಯ ಮನೆಯನ್ನು ನೆಲಸಮ ಮಾಡಲಾಗಿದೆ" ಎಂದು ಐಜಿ ಮಾಹಿತಿ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: ದೆಹಲಿಯ ಬೇಬಿಕೇರ್ ಆಸ್ಪತ್ರೆಯಲ್ಲಿ ಭೀಕರ ಬೆಂಕಿ ಅವಘಡ: 6 ನವಜಾತ ಶಿಶುಗಳ ದಾರುಣ ಸಾವು - Fire in Baby Care Hospital