ಮೋತಿಹಾರಿ: ಆನ್‌ಲೈನ್ ಮಲ್ಟಿಪ್ಲೇಯರ್ ಗೇಮ್ ಬ್ಯಾಟಲ್‌ಗ್ರೌಂಡ್ಸ್ ಮೊಬೈಲ್ ಇಂಡಿಯಾ ಆಟ ಆಡಲು ಕುಟುಂಬ ಅನುಮತಿ ನಿರಾಕರಿಸಿದ ಬಳಿಕ ಯುವಕನೊಬ್ಬ ಕೀ, ಎರಡು ನೇಲ್ ಕಟರ್ ಮತ್ತು ಚಾಕು ನುಂಗಿ ಸ್ವಲ್ಪದರಲ್ಲೇ ಪ್ರಾಣಾಪಾಯದಿಂದ ಪಾರಾಗಿರುವ ಆಘಾತಕಾರಿ ಘಟನೆ ಬಿಹಾರದಲ್ಲಿ ನಡೆದಿದೆ.
ಮೋತಿಹಾರಿಯ ಚಂದ್ಮಾರಿ ಪ್ರದೇಶದ ನಿವಾಸಿಯಾದ ಯುವಕ, ಈ ವಸ್ತುಗಳನ್ನು ನುಂಗಿದ್ದ. ಆರಂಭದಲ್ಲಿ ಏನು ಆಗಿಯೇ ಇಲ್ಲ ಎಂಬಂತಿದ್ದ. ಆದರೆ, ಕೆಲವು ಗಂಟೆಗಳ ನಂತರ ಯುವಕನ ಆರೋಗ್ಯ ಹದಗೆಡಲು ಆರಂಭಿಸಿತು. ಇದರಿಂದ ಗಾಬರಿಗೊಳಗಾದ ಕುಟುಂಬ ಯುವಕನನ್ನು ಆಸ್ಪತ್ರೆಗೆ ದಾಖಲಿಸಿತು. ಯುವಕನ ಆರೋಗ್ಯ ಸ್ಥಿತಿ ಹದಗೆಟ್ಟಿರುವುದನ್ನು ಗಮನನಿಸಿದ ವೈದ್ಯರು, ಸೋನೋಗ್ರಫಿ ಮತ್ತು ಅಲ್ಟ್ರಾಸೌಂಡ್ ಮೂಲಕ, ಅವರ ಹೊಟ್ಟೆಯಲ್ಲಿ ಕೀಗಳ ಗೊಂಚಲು, ನೇಲ್ ಕಟರ್ ಮತ್ತು ಚಾಕು ಮುಂತಾದ ಅನೇಕ ಲೋಹದ ವಸ್ತುಗಳು ಹೊಟ್ಟೆಯಲ್ಲಿರುವುದನ್ನು ಕಂಡು ಕೊಂಡರು. ಇಷ್ಟೆಲ್ಲ ವಸ್ತುಗಳನ್ನು ನುಂಗಿದರೂ ಯುವಕ ಜೀವಂತ ಆಗಿರುವುದನ್ನು ಕಂಡು ವೈದ್ಯರು ಅಚ್ಚರಿಗೆ ಒಳಗಾಗಿದ್ದರು.
ವೈದ್ಯ ಡಾ.ಅಮಿತ್ ಕುಮಾರ್ ಸುಮಾರು ಒಂದು ಗಂಟೆಗಳ ಕಾಲ ಯುವಕನಿಗೆ ಶಸ್ತ್ರಚಿಕಿತ್ಸೆ ನಡೆಸಿ ಆತ ನುಂಗಿದ್ದ ಎಲ್ಲ ಅಪಾಯಕಾರಿ ವಸ್ತುಗಳನ್ನು ಹೊರತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ. ಈ ಬಗ್ಗೆ ಮಾತನಾಡಿರುವ ವೈದ್ಯ ಅಮಿತ್ ಕುಮಾರ್, ಯುವಕ ಮಾನಸಿಕ ಅಸ್ವಸ್ಥನಾಗಿದ್ದು, ಸುಮಾರು ಒಂದು ಗಂಟೆಯ ಕಾರ್ಯಾಚರಣೆ ನಂತರ ಆತನ ಹೊಟ್ಟೆಯಲ್ಲಿದ್ದ ಕೀ, ಚಾಕು, ಎರಡು ನೇಲ್ ಕಟರ್ ಮತ್ತು ಸಣ್ಣ ಕಬ್ಬಿಣದ ವಸ್ತುಗಳನ್ನು ಹೊರತೆಗೆದಿದ್ದೇವೆ. ಸದ್ಯ ಆತನ ಅಪಾಯದಿಂದ ಪಾರಾಗಿದ್ದಾನೆ ಎಂದು ಹೇಳಿದ್ದಾರೆ.
ಮಗನ ಬಗ್ಗೆ ತಾಯಿ ಹೇಳಿದ್ದಿಷ್ಟು: ಇನ್ನು ಈ ಬಗ್ಗೆ ಮಾತನಾಡಿರುವ ಯುವಕನ ತಾಯಿ, ತಮ್ಮ ಮಗ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯನಾಗಿದ್ದ, ಹೀಗಾಗಿ ಆತ ಸ್ಮಾರ್ಟ್‌ಫೋನ್, ವೆಬ್‌ನಲ್ಲಿ ಬ್ರೌಸಿಂಗ್ ಮತ್ತು ಆನ್‌ಲೈನ್ ಗೇಮಿಂಗ್ ವ್ಯಸನಿಯಾಗಿದ್ದ ಎಂದು ಹೇಳಿಕೊಂಡಿದ್ದಾರೆ. ಆತ ಹೆಚ್ಚಿನ ಸಮಯವನ್ನು ಚಲನಚಿತ್ರ ವೀಕ್ಷಣೆ ಹಾಗೂ ರೀಲ್‌ಗಳನ್ನು ನೋಡುವುದರಲ್ಲೇ ತಲ್ಲೀನನಾಗಿರುತ್ತಿದ್ದ. ಇದು ಅವನನ್ನು ಮಾನಸಿಕವಾಗಿ ಮತ್ತಷ್ಟು ದುರ್ಬಲವಾಗುವಂತೆ ಮಾಡಿತು ಎಂದು ಅವರು ಅಲವತ್ತುಕೊಂಡಿದ್ದಾರೆ.
ಬ್ಯಾಟಲ್‌ಗ್ರೌಂಡ್ಸ್ ಮೊಬೈಲ್ ಇಂಡಿಯಾಗೆ ಗೇಮ್ನ ದಾಸನಾಗುವ ಮುನ್ನ ಯುವಕ, PUBG ಆಡುತ್ತಿದ್ದ, ಈ ಗೇಮ್ ಆತನ ಮಾನಸಿಕ ಸಮತೋಲನವನ್ನು ಹದಗೆಡಿಸಿತು. ಅವನ ಈ ವ್ಯಸನ ಬಿಡಿಸಲು ಕುಟುಂಬದವರು ವೈದ್ಯರ ಮೊರೆ ಹೋಗಬೇಕಾಯಿತು.
ಇನ್ನು ಈತ ಇತ್ತೀಚೆಗೆ ಲೋಹದ ವಸ್ತುಗಳನ್ನು ಸೇವಿಸಲು ಪ್ರಾರಂಭಿಸಿದ್ದ ಇದು ಕುಟುಂಬದವರ ಗಮನಕ್ಕೆ ಬಂದಿರಲಿಲ್ಲ. ತಾನು ಇತರರಿಗಿಂತ ಶ್ರೇಷ್ಠ ಎಂದು ತೋರಿಸುವುದಕ್ಕೋಸ್ಕರ ಈ ವಸ್ತುಗಳನ್ನು ಸೇವಿಸಿದ್ದಾನೆ ಎಂದು ಬಾಲಕನ ತಾಯಿ ಹೇಳಿದ್ದಾರೆ.
ಮಕ್ಕಳು ಸ್ಮಾರ್ಟ್‌ಫೋನ್‌ಗಳು ಮತ್ತು ಆನ್‌ಲೈನ್ ಗೇಮಿಂಗ್‌ಗೆ ವ್ಯಸನಿಯಾಗುವುದನ್ನು ತಡೆಯಲು, ಪೋಷಕರು ಎಚ್ಚರಿಕೆ ವಹಿಸಬೇಕಿದೆ ಮತ್ತು ಅವರ ಮೇಲೆ ತೀವ್ರ ನಿಗಾ ಇಡಬೇಕಾದ ಅವಶ್ಯಕತೆ ಇದೆ ಎಂದು ವೈದ್ಯರು ಸಲಹೆ ನೀಡಿದ್ದಾರೆ. ಒಂದೊಮ್ಮೆ ಮಗು ಇಂತಹ ವ್ಯಸನಕ್ಕೆ ಈಡಾಗಿದ್ದರೆ, ಸೂಕ್ತ ಚಿಕಿತ್ಸೆ ಕೊಡಿಸಬೇಕು ಎಂದು ವ್ಯದ್ಯರು ಸಲಹೆ ನೀಡಿದ್ದಾರೆ.
ಇದನ್ನು ಓದಿ: ಸಿಲಿಂಡರ್ ಖಾಲಿಯಾಗುವ 10 ದಿನ ಮೊದಲೇ ತಿಳಿಸುವ ಸಾಧನ ಕಂಡು ಹಿಡಿದ 8ನೇ ತರಗತಿ ಬಾಲಕ! - CYLINDER DEPLETION