ಕೋಲ್ಕತ್ತಾ (ಪಶ್ಚಿಮಬಂಗಾಳ) : ದೇಶದ ಗಮನ ಸೆಳೆದಿದ್ದ ಪಶ್ಚಿಮಬಂಗಾಳದ ಸಂದೇಶ್ಖಾಲಿ ಪ್ರಕರಣದಲ್ಲಿ ಸಿಎಂ ಮಮತಾ ಬ್ಯಾನರ್ಜಿ ಅವರು ಕೊನೆಗೂ ಕ್ಷಮೆಯಾಚಿಸಿದ್ದಾರೆ. ಜತೆಗೆ ಟಿಎಂಸಿ ನಾಯಕನಿಂದ ದೌರ್ಜನ್ಯಕ್ಕೊಳಗಾದ ಸಂತ್ರಸ್ತ ಮಹಿಳೆಯರನ್ನು ಶೀಘ್ರವೇ ಭೇಟಿ ಮಾಡುವುದಾಗಿ ಭರವಸೆ ನೀಡಿದ್ದಾರೆ.
ಬಸಿರ್‌ಹತ್ ಲೋಕಸಭಾ ಕ್ಷೇತ್ರದಲ್ಲಿ ನಡೆದ ಚುನಾವಣಾ ಪ್ರಚಾರದಲ್ಲಿ ಮಾತನಾಡಿದ ಅವರು, ಸಂದೇಶ್ಖಾಲಿ ಘಟನೆ ಬಿಜೆಪಿಯ ಷಡ್ಯಂತ್ರ. ಅಲ್ಲಿನ ತಾಯಂದಿರು, ಸಹೋದರಿಯರನ್ನು ಅಗೌರವವಾಗಿ ಕಾಣಲಾಗಿದೆ. ಇದಕ್ಕೆ ನಾನು ತೀವ್ರವಾಗಿ ವಿಷಾದಿಸುತ್ತೇನೆ. ಇದು ಸಂಭವಿಸಬಾರದಿತ್ತು. ಮಹಿಳೆಯರನ್ನು ರಾಜಕೀಯಕ್ಕೆ ಬಳಸಿಕೊಂಡಿರುವುದು ಬಿಜೆಪಿಯ ನಿಜವಾದ ಮುಖವಾಡ ಎಂದು ಟೀಕಿಸಿದರು.
ರಾಜಕೀಯಕ್ಕಾಗಿ ಮಹಿಳೆಯರ ಬಳಕೆ: ಸಂದೇಶ್ಖಾಲಿಯ ಸಂತ್ರಸ್ತೆ ಮತ್ತು ಬಿಜೆಪಿ ಅಭ್ಯರ್ಥಿಯಾದ ರೇಖಾ ಪಾತ್ರಾ ಅವರನ್ನು ರಾಜಕೀಯಕ್ಕೆ ಬರುವಂತೆ ಮಾಡಿದ್ದನ್ನು ಟೀಕಿಸಿದ ಮಮತಾ, ಅವರಿಗೆ ಟಿಕೆಟ್ ನೀಡಿದ ಬಿಜೆಪಿ ವಿರುದ್ಧ ಹರಿಹಾಯ್ದರು. ಈ ಘಟನೆಯು ಬಿಜೆಪಿ ಕೃಪಾಪೋಷಿತ ನಾಟಕವಾಗಿದೆ. ಬಿಜೆಪಿ ಆಡಳಿತದಲ್ಲಿ ಹಲವಾರು ಮಹಿಳೆಯರ ಮೇಲೆ ದೌರ್ಜನ್ಯ ನಡೆಯುತ್ತಿದೆ. ಉತ್ತರಪ್ರದೇಶ ಈ ಪಟ್ಟಿಯಲ್ಲಿ ಮೊದಲಿದೆ. ಇನ್ನು ಎಷ್ಟು ಮಹಿಳೆಯರನ್ನು ರಾಜಕೀಯಕ್ಕೆ ಬಳಸಿಕೊಳ್ಳುತ್ತೀರಿ ಎಂದು ಕಮಲ ಪಕ್ಷವನ್ನು ತರಾಟೆಗೆ ತೆಗೆದುಕೊಂಡರು.
ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ವಿಚಾರದಲ್ಲಿ ಮಮತಾ ಅವರು ನರೇಂದ್ರ ಮೋದಿಯವರನ್ನೂ ಗುರಿಯಾಗಿಸಿಕೊಂಡು ವಾಗ್ದಾಳಿ ನಡೆಸಿದರು. ಯುಸಿಸಿ ವಿಚಾರವಾಗಿ ಕೇಂದ್ರ ಸರ್ಕಾರ ವಿರೋಧ ಎದುರಿಸುತ್ತಿದೆ. ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ದಿನವೂ ಸುಳ್ಳು ಹೇಳುತ್ತಿದ್ದಾರೆ ಎಂದು ಟೀಕಿಸಿದರು.
ಸತ್ಯ ಹೊರಬರಬಹುದೆಂಬ ಭಯದಿಂದ ಪ್ರಧಾನಿ ಸುಳ್ಳು ಹೇಳುತ್ತಿದ್ದಾರೆ. ಆದಿವಾಸಿಗಳಿಂದ ಮೀಸಲಾತಿಯನ್ನು ಕಿತ್ತು ಅಲ್ಪಸಂಖ್ಯಾತರಿಗೆ ನೀಡಲಾಗುತ್ತಿದೆ ಎಂದು ಅವರು ಹೇಳುತ್ತಿದ್ದಾರೆ. ಹೀಗೆ ಮಾಡಲು ಸಾಧ್ಯವೇ? ಇದು ಎಂದಿಗೂ ಸಾಧ್ಯವಿಲ್ಲ. ಸಂವಿಧಾನ ರಚನೆಕಾರರಾದ ಡಾ.ಬಿ.ಆರ್. ಅಂಬೇಡ್ಕರ್ ಅವರು ಮೀಸಲಾತಿ ಹಕ್ಕನ್ನು ಭದ್ರಪಡಿಸಿದ್ದಾರೆ. ಬುಡಕಟ್ಟು ಜನಾಂಗದವರಿಗೆ ಮೀಸಲಾತಿ ನೀಡಲಾಗಿದೆ ಎಂದು ಮಮತಾ ಹೇಳಿದರು.
ಸಂತ್ರಸ್ತೆಯರ ಭೇಟಿ ಭರವಸೆ: ಬಸಿರ್‌ಹತ್ ಉಪವಿಭಾಗಕ್ಕೆ ಬರುವ ಸಂದೇಶ್ಖಾಲಿಯು ಕಳೆದ 5 ತಿಂಗಳಿನಿಂದ ಭಾರೀ ಸುದ್ದಿಯಲ್ಲಿದೆ. ಟಿಎಂಸಿ ನಾಯಕನಿಂದ ದೌರ್ಜನ್ಯಕ್ಕೆ ಒಳಗಾದ ಮಹಿಳೆಯರು ಭಾರೀ ಹೋರಾಟ ನಡೆಸಿದ್ದರು. ಪ್ರಕರಣದಲ್ಲಿ ಹಲವರನ್ನು ಬಂಧಿಸಲಾಗಿದೆ. ಈ ಕುರಿತು ಟೀಕಿಸುತ್ತಿದ್ದ ಮಮತಾ ಅವರು ಚುನಾವಣಾ ಪ್ರಚಾರಕ್ಕಾಗಿ ಈಗ ಬಸಿರ್ಹತ್ಗೆ ತೆರಳಿದ್ದಾರೆ. ಸಂದೇಶ್ಖಾಲಿಗೂ ಭೇಟಿ ನೀಡುವುದಾಗಿ ಹೇಳಿರುವ ಸಿಎಂ ಯಾವಾಗ ಹೋಗುತ್ತಾರೆ ಎಂಬುದರ ಬಗ್ಗೆ ತಿಳಿಸಿಲ್ಲ.