ಗಡ್ಚಿರೋಲಿ (ಮಹಾರಾಷ್ಟ್ರ): ನಕ್ಸಲ್ಪೀಡಿತ ರಾಜ್ಯವಾದ ಛತ್ತೀಸ್ಗಢಕ್ಕೆ ಹೊಂದಿಕೊಂಡಿರುವ ಮಹಾರಾಷ್ಟ್ರದ ಗಡ್‌ಚಿರೋಲಿಯಲ್ಲಿ ಮಾವೋವಾದಿಗಳು ಮತ್ತು ಪೊಲೀಸರ ನಡುವೆ ಭಾರೀ ಗುಂಡಿನ ಕಾಳಗ ನಡೆದಿದೆ. ಇದರಿಂದ 12 ನಕ್ಸಲರು ಹತರಾಗಿದ್ದು, ಭಾರೀ ಪ್ರಮಾಣದ ಶಸ್ತ್ರಾಸ್ತ್ರಗಳು ಸಿಕ್ಕಿವೆ.
ಬುಧವಾರ ಬೆಳಗ್ಗೆ 10 ಗಂಟೆ ಸುಮಾರಿಗೆ ಗಡ್‌ಚಿರೋಲಿಯಲ್ಲಿ ನಕ್ಸಲ್ ದಮನ ಕಾರ್ಯಾಚರಣೆ ಆರಂಭಿಸಲಾಗಿತ್ತು. ಛತ್ತೀಸ್ಗಢ ಗಡಿಯ ಬಳಿ ಇರುವ ವಂಡೋಲಿ ಗ್ರಾಮದಲ್ಲಿ ಮಾವೋವಾದಿಗಳು ಅಡಗಿದ್ದನ್ನು ಪೊಲೀಸರು ಪತ್ತೆ ಮಾಡಿದ್ದರು. 12 ರಿಂದ 15 ನಕ್ಸಲರು ಬೀಡು ಬಿಟ್ಟಿದ್ದಾರೆ ಎಂದು ಮಾಹಿತಿ ಲಭಿಸಿದ ಹಿನ್ನೆಲೆಯಲ್ಲಿ ಪೊಲೀಸ್ ತಂಡಗಳು ಅರಣ್ಯಕ್ಕೆ ನುಗ್ಗಿದ್ದವು.
ಮಧ್ಯಾಹ್ನ ಆರಂಭವಾದ ಗುಂಡಿನ ಚಕಮಕಿ ಸಂಜೆ 6 ಗಂಟೆವರೆಗೂ ಮುಂದುವರಿದಿತ್ತು. ಬಳಿಕ ಕೆಲ ನಕ್ಸಲರು ಅಲ್ಲಿಂದ ಪರಾರಿಯಾದ ಬಳಿಕ ಈ ಪ್ರದೇಶದಲ್ಲಿ ಶೋಧ ನಡೆಸಲಾಗಿದೆ. ಈವರೆಗೆ 12 ನಕ್ಸಲರ ಮೃತದೇಹಗಳು ಪತ್ತೆಯಾಗಿವೆ. ಜೊತೆಗೆ ಸ್ಥಳದಲ್ಲಿ ಮೂರು ಎಕೆ 47, ಎರಡು ಐಎನ್‌ಎಸ್‌ಎಎಸ್, 1 ಕಾರ್ಬೈನ್, 1 ಎಸ್‌ಎಲ್‌ಆರ್ ಸೇರಿದಂತೆ 7 ಆಧುನಿಕ ಶಸ್ತ್ರಾಸ್ತ್ರಗಳು ಸಿಕ್ಕಿವೆ. ಇದರಲ್ಲಿ ಪೊಲೀಸ್ ಪಡೆಗಳಿಗೆ ಬೇಕಾಗಿದ್ದ, ತಲೆಗೆ ಬಹುಮಾನ ಘೋಷಿಸಲಾಗಿದ್ದ ನಕ್ಸಲರೂ ಹತರಾಗಿದ್ದಾರೆ ಎಂದು ಹೇಳಲಾಗಿದೆ.
ಇನ್ನಷ್ಟು ಜನ ನಕ್ಸಲರು ಇರುವ ಶಂಕೆ ಮೇರೆಗೆ ಈ ಪ್ರದೇಶದಲ್ಲಿ ಶೋಧ ಕಾರ್ಯಾಚರಣೆ ಮುಂದುವರಿದಿದೆ. ಇದೇ ವೇಳೆ ಗುಂಡಿನ ಕಾಳಗದಲ್ಲಿ ಪಿಎಸ್‌ಐ ಮತ್ತು ಪೊಲೀಸ್ ಕಾನ್ಸ್ಟೇಬಲ್ಗೆ ಬುಲೆಟ್ ತಗುಲಿದೆ. ಅಪಾಯದಿಂದ ಪಾರಾಗಿದ್ದು, ಗಾಯಗೊಂಡಿರುವ ಅವರನ್ನು ನಾಗ್ಪುರದ ಆಸ್ಪತ್ರೆಗೆ ದಾಖಲಿಸಲಾಗಿದೆ.
ಬಹುಮಾನ ಘೋಷಣೆ: 12 ನಕ್ಸಲರನ್ನು ಹೊಡೆದುರುಳಿಸಿ ಯಶಸ್ವಿ ಕಾರ್ಯಾಚರಣೆ ನಡೆಸಿದ ಪೊಲೀಸ್ ಪಡೆಗಳಿಗೆ ಮಹಾರಾಷ್ಟ್ರ ಸರ್ಕಾರ ನಗದು ಬಹುಮಾನ ಘೋಷಿಸಿದೆ. C60 ಕಮಾಂಡೋಗಳು ಮತ್ತು ಗಡ್ಚಿರೋಲಿ ಪೊಲೀಸರಿಗೆ 51 ಲಕ್ಷ ರೂಪಾಯಿಗಳ ನಗದು ಬಹುಮಾನ ನೀಡಲಾಗುವುದು ಎಂದು ಉಪಮುಖ್ಯಮಂತ್ರಿ ಮತ್ತು ಗೃಹ ಸಚಿವರಾಗಿರುವ ದೇವೇಂದ್ರ ಫಡ್ನವೀಸ್ ತಿಳಿಸಿದ್ದಾರೆ.
ಇದನ್ನೂ ಓದಿ: ಛತ್ತೀಸ್‌ಗಢದಲ್ಲಿ ಗುಂಡಿನ ಚಕಮಕಿ: 8 ನಕ್ಸಲರ ಹತ್ಯೆ, ಓರ್ವ ಭದ್ರತಾ ಪಡೆ ಸಿಬ್ಬಂದಿ ಹುತಾತ್ಮ - 8 NAXALITES KILLED