ಶ್ರೀನಗರ: ಶ್ರೀನಗರದ ರಾಷ್ಟ್ರೀಯ ಹೆದ್ದಾರಿ 44ರಲ್ಲಿ ಗುರುವಾರ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮೃತಪಟ್ಟ ಇಬ್ಬರು ವಿದ್ಯಾರ್ಥಿಗಳಿಗೆ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಸಂತಾಪ ಸೂಚಿಸಿದ್ದಾರೆ. 'ಈ ಘಟನೆ ಹೃದಯ ವಿದ್ರಾವಕ' ಎಂದು ಕರೆದಿರುವ ಸಿಎಂ ಅಬ್ದುಲ್ಲಾ, ಅಪಘಾತ ದೃಶ್ಯ ಕಂಡು ಅಚ್ಚರಿ ವ್ಯಕ್ತಪಡಿಸಿದ್ದಾರೆ.
ಶ್ರೀನಗರ ಬೈಪಾಸ್‌ನ ಟೆಂಗ್‌ಪೋರಾ ಬಳಿ ಗುರುವಾರ ರಸ್ತೆಯಲ್ಲಿ ನಿಂತಿದ್ದ ಟಿಪ್ಪರ್‌ಗೆ ವೇಗವಾಗಿ ಬಂದ ಕಾರು (ಥಾರ್ ವಾಹನ) ರಭಸವಾಗಿ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಯುವಕರು ಮೃತಪಟ್ಟಿದ್ದಾರೆ. ಮೃತರನ್ನು ಲಾಲ್ ಬಜಾರ್‌ನ ಹಮ್ಮದ್ ಶೋಕತ್ ವಾನಿ ಮತ್ತು ರಾವಲ್ಪೋರಾದ ಅಜೀಮ್ ಸೋಫಿ ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ಲಾಲ್ ಬಜಾರ್ ಬಾಗ್ನ ಐಸಾ ಗನಿ ಎಂಬ ಯುವಕ ಗಾಯಗೊಂಡಿದ್ದು, ಆತನನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಮೂವರು ಕಾರಿನಲ್ಲಿ ಪ್ರಯಾಣಿಸುತ್ತಿದ್ದರು.
ಮೃತ ಮತ್ತು ಗಾಯಗೊಂಡ ವಿದ್ಯಾರ್ಥಿಗಳು ಶ್ರೀನಗರದ ದೆಹಲಿ ಪಬ್ಲಿಕ್ ಶಾಲೆಯ ವಿದ್ಯಾರ್ಥಿಗಳು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Heart breaking visuals. This accident claimed previous young lives & has had a devastating impact on their families. My heart goes out to the families of the boys killed in this tragic accident. May Allah grant them place in Jannat.
— Omar Abdullah (@OmarAbdullah) November 15, 2024
Our cars get quicker, our roads get better but… https://t.co/vlCmLJY3W7
'ವೇಗವಾಗಿ ಬಂದ ಥಾರ್ ವಾಹನ ಮತ್ತು ಟಿಪ್ಪರ್ ಡಿಕ್ಕಿ ಹೊಡೆದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ. ಘಟನೆಯ ಕುರಿತು ಪರಿಶೀಲಿಸಲಾಗುತ್ತಿದೆ. ಘಟನೆಯಲ್ಲಿ ಪ್ರಯಾಣಿಕರ ಕ್ಯಾಬ್‌ಗೂ ಡಿಕ್ಕಿ ಹೊಡೆದಿದೆ' ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. 'ಭೀಕರ ಅಪಘಾತದಲ್ಲಿ ಮೃತಪಟ್ಟ ಯುವಕರ ಅಗಲಿಕೆಯನ್ನು ತಡೆದುಕೊಳ್ಳುವ ಶಕ್ತಿಯನ್ನು ಅಲ್ಲಾ ಅವರ ಕುಟುಂಬಸ್ಥರಿಗೆ ನೀಡಲಿ. ಅವರಿಗೆ ನನ್ನ ಸಂತಾಪಗಳು. ಅಲ್ಲಾ ಅವರಿಗೆ ಒಳ್ಳೆಯದನ್ನು ಮಾಡಲಿ' ಎಂದು ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ತಮ್ಮ ಎಕ್ಸ್ ಖಾತೆಯಲ್ಲಿ ಸಂತಾಪ ಸೂಚಿಸಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಅಪಘಾತದಲ್ಲಿ ಭೀಕರ ದೃಶ್ಯ ವೈರಲ್ ಆಗಿದ್ದು, ಅದನ್ನು ಉಲ್ಲೇಖಿಸಿ ಸಾರ್ವಜನಿಕರಿಗೆ ಹಾಗೂ ಅಧಿಕಾರಿಗಳಿಗೆ ಸಿಎಂ ಅಬ್ದುಲ್ಲಾ ಕೆಲವು ಸಲಹೆ ಮತ್ತು ಸೂಚನೆಗಳನ್ನು ನೀಡಿದ್ದಾರೆ.
'ಎರಡು ಅಮೂಲ್ಯ ಜೀವಗಳು ಕ್ಷಣಾರ್ಧದಲ್ಲಿ ಕಳೆದು ಹೋಗಿದ್ದು ನೋವಿನ ಸಂಗತಿ. ಪ್ರತಿಯೊಬ್ಬರು ರಸ್ತೆ ಸುರಕ್ಷತೆಯನ್ನು ಪಾಲಿಸಬೇಕು. ಅತಿಯಾದ ವೇಗ ಒಳ್ಳೆಯದಲ್ಲ. ಸಂಚಾರ ನಿಯಮಗಳು ನಮ್ಮನ್ನು ಸುರಕ್ಷಿತವಾಗಿರಿಸುತ್ತವೆ. ನಾವು ಅವುಗಳನ್ನು ಅನುಸರಿಸಬೇಕು. ಅಪಘಾತಕ್ಕೆ ಮುಖ್ಯ ಕಾರಣ ಸಂಚಾರ ನಿಯಮಗಳ ಜಾರಿಯಾಗದಿರುವುದು. ರಸ್ತೆಗಳು ಉತ್ತಮವಾಗಿವೆ. ಹಾಗಾಗಿ ವಾಹನಗಳನ್ನು ವೇಗವಾಗಿ ಚಲಾಯಿಸಬೇಕೆಂದುಕೊಳ್ಳುತ್ತಾರೆ. ಇದು ಸರಿಯಾದ ಮಾರ್ಗವಲ್ಲ. ನಮ್ಮ ಸಂಚಾರ ಜಾಗೃತಿಯಲ್ಲಿ ಯಾವುದೇ ಸುಧಾರಣೆಯಾಗದಿರುವುದು ಬೇಸರ ಸಂಗತಿ' ಎಂದು ಎಕ್ಸ್ನಲ್ಲಿ ಅವರು ಬರೆದುಕೊಂಡಿದ್ದಾರೆ.
ಸಾಮಾಜಿಕ ಮಾಧ್ಯಮದಲ್ಲಿ ನೆಟ್ಟಿಗರು ಮೃತ ಮಕ್ಕಳ ಪೋಷಕರ ನಿರ್ಲಕ್ಷ್ಯಕ್ಕೆ ಕಿಡಿಕಾರಿದ್ದಾರೆ. ಮಕ್ಕಳ ಕೈಗೆ ವಾಹನ ನೀಡಬಾರದಿತ್ತು. ಮೊದಲು ಸಂಚಾರ ನಿಯಮಗಳನ್ನು ಉಲ್ಲಂಘಿಸಿದ್ದೇ ಅವರು ಎಂದು ಟೀಕಿಸಿದ್ದಾರೆ.
ಜಮ್ಮು ಮತ್ತು ಕಾಶ್ಮೀರದಲ್ಲಿ ಕಳೆದ ಎಂಟು ತಿಂಗಳಲ್ಲಿ 3954 ಅಪಘಾತಗಳು ಸಂಭವಿಸಿದ್ದು, 567 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಕೇಂದ್ರಾಡಳಿತ ಪ್ರದೇಶದಲ್ಲಿ ಪ್ರತಿದಿನ ಸರಾಸರಿ 16 ಅಪಘಾತಗಳು ನಡೆಯುತ್ತಿವೆ ಎಂದು ವರದಿಯಾಗಿದೆ.
ಇದನ್ನೂ ಓದಿ: ಗೂಗಲ್ ಮ್ಯಾಪ್ ಎಡವಟ್ಟು: ರಂಗ ಕಲಾವಿದರಿದ್ದ ಮಿನಿ ಬಸ್ ಅಪಘಾತ, ಇಬ್ಬರು ಸಾವು