ನವದೆಹಲಿ: ಇಂದು ಮಹಾತ್ಮ ಗಾಂಧೀಜಿಯವರ 76ನೇ ಪುಣ್ಯಸ್ಮರಣೆ. ಭಾರತದ ಸ್ವಾತಂತ್ರ್ಯಕ್ಕಾಗಿ ಅಹಿಂಸಾ ಪಥದಲ್ಲಿ ಹೋರಾಡಿದ ಬಾಪು 1948 ಜನವರಿ 30ರಂದು ನಾಥುರಾಮ್ ಗೋಡ್ಸೆ ಗುಂಡೇಟಿನಿಂದ ನಿಧನರಾಗಿದ್ದರು. ಸತ್ಯ, ಅಹಿಂಸೆಯಲ್ಲಿ ಅಪಾರ ನಂಬಿಕೆ ಹೊಂದಿದ್ದ ಗಾಂಧಿ ಚಿಂತನೆಗಳು ಜಗತ್ತಿನಾದ್ಯಾಂತ ಪ್ರಶಂಸೆಗೊಳಗಾಗಿವೆ. ಈ ದಿನವನ್ನು ಶಹೀದ್ ದಿವಸ್ (ಹುತಾತ್ಮರ ದಿನ) ಮತ್ತು ಅಹಿಂಸೆ ಮತ್ತು ಶಾಂತಿಯ ದಿನವನ್ನಾಗಿಯೂ ಆಚರಿಸಲಾಗುತ್ತದೆ.
ರಾಜ್ಘಾಟ್ನಲ್ಲಿ ನಮನ: ರಾಷ್ಟ್ರಪತಿ, ಉಪರಾಷ್ಟ್ರಪತಿ, ಪ್ರಧಾನಮಂತ್ರಿ, ರಕ್ಷಣಾ ಸಚಿವ ಮತ್ತು ಸೇನೆ, ವಾಯುಪಡೆ ಮತ್ತು ನೌಕಾಪಡೆ ಮುಖ್ಯಸ್ಥರು ದೆಹಲಿಯ ರಾಜ್ ಘಾಟ್‌ನಲ್ಲಿರುವ ಗಾಂಧಿ ಸಮಾಧಿಗೆ ಪುಷ್ಪ ನಮನ ಸಲ್ಲಿಸಲಿದ್ದಾರೆ. ಇದಾದ ಬಳಿಕ ದೇಶಾದ್ಯಂತ ಎರಡು ನಿಮಿಷಗಳ ಮೌನಾಚರಣೆ ನಡೆಯುತ್ತದೆ.
ಸರಳತೆ, ಶಾಂತಿ, ಸತ್ಯ, ಅಹಿಂಸೆ ಹಾಗೂ ರಾಮ ರಾಜ್ಯದ ಪ್ರತಿಪಾದಕರು ಗಾಂಧಿ. ಈಗಿನ ಕಾಲಮಾನದಲ್ಲಿ ಗಾಂಧಿ ತತ್ವಗಳನ್ನು ಯುವಕರು ಯಾವ ರೀತಿ ಪಾಲಿಸುತ್ತಿದ್ದಾರೆ ಎಂಬುದು ಎಲ್ಲರನ್ನೂ ಕಾಡುವ ಪ್ರಶ್ನೆ. ಗಾಂಧಿ ಕೇವಲ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ್ದು ಮಾತ್ರವಲ್ಲದೆ ಸ್ವತಂತ್ರ ಭಾರತದ ಸರ್ವಾಂಗೀಣ ಅಭಿವೃದ್ಧಿಗಾಗಿ ವಿವಿಧ ವಿಚಾರಗಳ ಬಗೆಗೂ ತಮ್ಮದೇ ಆದ ದೂರದೃಷ್ಟಿ ಹೊಂದಿದ್ದರು.
ಶಿಕ್ಷಣ, ಆತ್ಮಬಲ, ಸ್ವಾವಲಂಬನೆ, ಗ್ರಾಮ ಜೀವನ, ಹಿಂದಿ ರಾಷ್ಟ್ರಭಾಷೆ, ಹಿಂದೂ-ಮುಸ್ಲಿಂ ಕೋಮು ಸೌಹಾರ್ದತೆ, ಅಸ್ಪೃಶ್ಯತೆಯ ನಿವಾರಣೆ, ಹೆಣ್ಣು ಮಕ್ಕಳ ಗೌರವ, ಬಾಲ ಪತ್ನಿಯರು ಹಾಗೂ ಬಾಲ ವಿಧವೆಯರು, ಆರ್ಥಿಕ ಸಂಪನ್ಮೂಲ ಕ್ರೋಡೀಕರಣ, ಕಾರ್ಮಿಕರಿಗೆ ಸಮಾನ ಕೆಲಸ ಹಾಗೂ ವೇತನ ಹೀಗೆ ಹಲವು ವಿಷಯಗಳ ಕುರಿತಾಗಿ ಬಾಪು ಆಗಾಗ್ಗೆ ತಮ್ಮ ವಿಚಾರಧಾರೆಗಳನ್ನು ಮಂಡಿಸಿದವರು. ಕೃಷಿ ಕ್ಷೇತ್ರ ಹಾಗೂ ರೈತರ ಬಗ್ಗೆ ಗಾಂಧಿ ನಿಲುವು ಅತ್ಯಂತ ಸ್ಪಷ್ಟವಾಗಿತ್ತು. ಇಡೀ ದೇಶವೇ ರೈತನ ಗುಡಿಸಲಿನಲ್ಲಿದೆ ಎಂದು ಅವರು ಹೇಳುತ್ತಿದ್ದರು.
ಸಂಪೂರ್ಣ ಸ್ವರಾಜ್ಯ ಎಂಬ ಗಾಂಧಿ ಪರಿಕಲ್ಪನೆಯಲ್ಲಿ ಕೃಷಿಗೆ ಪ್ರಮುಖ ಸ್ಥಾನ ನೀಡಲಾಯಿತು. ಎಲ್ಲ ಅಭಿವೃದ್ಧಿಗೂ ಕೃಷಿಯೇ ಮೂಲಾಧಾರ ಎಂಬುದು ಅವರ ಮಂತ್ರ. ಕೃಷಿಗೆ ಉತ್ತೇಜನ ನೀಡುವ ಹೊಸ ಯೋಜನೆಗಳನ್ನು ಜಾರಿಗೊಳಿಸುವುದು ಮತ್ತು ದೇಶದ ಜನರಿಗೆ ದಿನನಿತ್ಯ ಬೇಕಾಗುವ ವಸ್ತುಗಳನ್ನು ಗುಡಿ ಕೈಗಾರಿಕೆಗಳ ಮೂಲಕ ಉತ್ಪಾದಿಸುವುದು ಹಾಗೂ ಆ ಮೂಲಕ ಬೃಹತ್ ಸಂಖ್ಯೆಯಲ್ಲಿ ಸ್ಥಳೀಯವಾಗಿ ಉದ್ಯೋಗಗಳನ್ನು ಸೃಷ್ಟಿಸುವುದು ಗಾಂಧಿ ಕನಸಾಗಿತ್ತು.
ಇದನ್ನೂ ಓದಿ: ಧಮನಕಾರಿ ನೀತಿ ವಿರುದ್ಧ ಗಾಂಧೀಜಿ ಚಿಂತನೆ ಅರಿಯಲು ಪ್ರಬಂಧ ಸ್ಪರ್ಧೆ ಏರ್ಪಡಿಸಿ: ಶಿಕ್ಷಣ ಸಚಿವರಿಗೆ ಸಿಎಂ ಪತ್ರ