ನಾಗ್ಪುರ(ಮಹಾರಾಷ್ಟ್ರ): ಮಹಾರಾಷ್ಟ್ರ ಉಪಮುಖ್ಯಮಂತ್ರಿ, ಬಿಜೆಪಿ ಹಿರಿಯ ಮುಖಂಡ ದೇವೇಂದ್ರ ಫಡ್ನವೀಸ್ ಅವರು ನಾಗ್ಪುರ ಆಗ್ನೇಯ ವಿಧಾನಸಭಾ ಕ್ಷೇತ್ರದಿಂದ ಆಯ್ಕೆ ಬಯಸಿ ಪಕ್ಷದ ಮುಖಂಡರ ಸಮ್ಮುಖದಲ್ಲಿ ಶುಕ್ರವಾರ ನಾಮಪತ್ರ ಸಲ್ಲಿಸಿದ್ದಾರೆ.
ನಾಮಪತ್ರ ಸಲ್ಲಿಸಿದ ನಂತರ ಮಾತನಾಡಿದ ಅವರು, "ಮಹಾಯುತಿ ಸರ್ಕಾರ ತಾನು ಹೇಳಿದ್ದನ್ನು ಮಾಡಿತೋರಿಸುತ್ತದೆ. ನನ್ನ ಮೇಲೆ ನಂಬಿಕೆ ಇಟ್ಟು ಆರನೇ ನನಗೆ ಬಾರಿ ಟಿಕೆಟ್ ನೀಡಿದ ಭಾರತೀಯ ಜನತಾ ಪಕ್ಷ ಮತ್ತು ಅದರ ಉನ್ನತ ನಾಯಕರಿಗೆ ಧನ್ಯವಾದ" ಎಂದರು.
ಮಾತು ಮುಂದುವರೆಸಿ, "ನಮ್ಮ ಮಾತಿಗಿಂತ ನಮ್ಮ ಕೆಲಸಗಳೇ ಕ್ಷೇತ್ರದಲ್ಲಿ ಹೆಚ್ಚು ಸದ್ದು ಮಾಡುತ್ತಿವೆ. ಹಾಗಾಗಿ ಜನರು ನನ್ನನ್ನು ಗೆಲ್ಲಿಸಿ ಕಳಿಸುತ್ತಾರೆ ಎಂಬ ವಿಶ್ವಾಸವಿದೆ. ರಾಜ್ಯದಲ್ಲಿ ನಾವು ಮತ್ತೆ ನಮ್ಮದೇ ಸರ್ಕಾರ ರಚಿಸುತ್ತೇವೆ" ಎಂದು ಹೇಳಿದರು.
#WATCH | Maharashtra Deputy CM & BJP candidate from Nagpur South-West Assembly seat, Devendra Fadnavis arrives to file his nomination for the upcoming #MaharashtraElection2024. pic.twitter.com/IzAlTcJter
— ANI (@ANI) October 25, 2024
"ಮೀಸಲಾತಿ ಮತ್ತು ಅಂಬೇಡ್ಕರ್ ಆದರ್ಶಗಳಿಗೆ ಕಾಂಗ್ರೆಸ್ ವಿರುದ್ಧವಾಗಿದೆ. ಬಿಜೆಪಿ ಅಧಿಕಾರದಲ್ಲಿರುವವರೆಗೂ ಮೀಸಲಾತಿಯನ್ನು ಯಾರಿಗೂ ಮುಟ್ಟಲು ಬಿಡುವುದಿಲ್ಲ" ಎಂದು ಇದೇ ವೇಳೆ ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು.
ನಾಮಪತ್ರ ಸಲ್ಲಿಸುವ ಮುನ್ನ ಫಡ್ನವೀಸ್ ತಮ್ಮ ಪಕ್ಷದ ಮುಖಂಡರೊಂದಿಗೆ ಕ್ಷೇತ್ರದಲ್ಲಿ ರೋಡ್ ಶೋ ನಡೆಸಿದರು.
6ನೇ ಬಾರಿ ಆಯ್ಕೆ ಬಯಸಿ ಫಡ್ನವೀಸ್ ಸ್ಪರ್ಧೆ: 2014ರಿಂದ 2019ರವರೆಗೆ ಮತ್ತು 2019ರ ನವೆಂಬರ್‌ನಲ್ಲಿ ಅಲ್ಪಾವಧಿಗೆ ಸಿಎಂ ಆಗಿದ್ದ ಫಡ್ನವಿಸ್, 5 ಬಾರಿ ವಿಧಾನಸಭೆಗೆ ಆಯ್ಕೆಯಾಗಿದ್ದಾರೆ. ಎರಡು ಬಾರಿ ನಾಗ್ಪುರ ಪಶ್ಚಿಮ ಕ್ಷೇತ್ರದಿಂದ, ಮೂರು ಬಾರಿ ನಾಗ್ಪುರ ನೈಋತ್ಯ ಕ್ಷೇತ್ರದಿಂದ ಆಯ್ಕೆಯಾಗಿದ್ದಾರೆ. ಇದೀಗ 6ನೇ ಬಾರಿ ನಾಗ್ಪುರ ಆಗ್ನೇಯ ವಿಧಾನಸಭಾ ಕ್ಷೇತ್ರದಿಂದ ಆಯ್ಕೆ ಬಯಸಿ ಸ್ಪರ್ಧಿಸುತ್ತಿದ್ದಾರೆ.
ನಾಮಪತ್ರ ಸಲ್ಲಿಸುವ ಮುನ್ನ ಫಡ್ನವೀಸ್ ಅವರು ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರ ನಿವಾಸಕ್ಕೆ ಭೇಟಿ ನೀಡಿದ್ದರು. ನಂತರ ಸಂವಿಧಾನ ಚೌಕದಲ್ಲಿರುವ ಡಾ.ಅಂಬೇಡ್ಕರ್ ಅವರ ಪ್ರತಿಮೆಗೆ ಬಿಜೆಪಿ ನಾಯಕರು ಪುಷ್ಪನಮನ ಸಲ್ಲಿಸಿದರು. ನಂತರ ಅಲ್ಲಿಂದ ಆಕಾಶವಾಣಿ ಚೌಕದವರೆಗೆ ರೋಡ್ ಶೋ ನಡೆಸಿದರು.
288 ವಿಧಾನಸಭಾ ಕ್ಷೇತ್ರಗಳಿರುವ ಮಹಾರಾಷ್ಟ್ರ ವಿಧಾನಸಭೆಗೆ ನ.20ರಂದು ಚುನಾವಣೆ ನಿಗದಿಯಾಗಿದೆ. ನವೆಂಬರ್ 23ರಂದು ಮತ ಎಣಿಕೆ ನಡೆಯಲಿದೆ.
ಇದನ್ನೂ ಓದಿ: ಮಹಾರಾಷ್ಟ್ರ ಎಲೆಕ್ಷನ್: ಪ್ರಧಾನಿ ಮೋದಿ ವರ್ಚಸ್ಸಿನ ಲಾಭ ಪಡೆಯಲು 'ಮಹಾಯುತಿ' ಪ್ಲಾನ್