Firing Incident: ಮಹಾರಾಷ್ಟ್ರದಲ್ಲಿಯೂ ಗುಂಡಿನ ದಾಳಿ: ಪಾರ್ಕಿಂಗ್ ಸ್ಥಳದ ವಿಚಾರಕ್ಕೆ ನಡೆದ ಗಲಾಟೆಯಲ್ಲಿ ನಿವೃತ್ತ ಯೋಧರೊಬ್ಬರು ವ್ಯಕ್ತಿಯ ಮೇಲೆ ಗುಂಡಿನ ದಾಳಿ ನಡೆಸಿರುವ ಪ್ರಕರಣ ಮಹಾರಾಷ್ಟ್ರದ ಪುಣೆಯ ಅಶೋಕ್ ನಗರದಲ್ಲಿ ನಡೆದಿದೆ. ಸದ್ಯ ಗಾಯಗೊಂಡ ವ್ಯಕ್ತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಪುಣೆ ಡಿಸಿಪಿ ಹಿಮ್ಮತ್ ಜಾಧವ್ ಹೇಳಿಕೆ ಪ್ರಕಾರ, ಪುಣೆ ನಗರದ ಯರವಾಡದಲ್ಲಿ ಪಾರ್ಕಿಂಗ್ ಸ್ಥಳದ ವಿಚಾರವಾಗಿ ನಡೆದ ಜಗಳದಲ್ಲಿ ಆರೋಪಿ ಡಬಲ್ ಬ್ಯಾರೆಲ್ ಗನ್ನಿಂದ ಸಂತ್ರಸ್ತನ ಮೇಲೆ ಗುಂಡಿನ ದಾಳಿ ನಡೆಸಿದ್ದಾನೆ. ಆರೋಪಿಯನ್ನು ವಶಕ್ಕೆ ಪಡೆಯಲಾಗಿದ್ದು, ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ತನಿಖೆ ನಡೆಯುತ್ತಿದ್ದು, ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ದೆಹಲಿಯಲ್ಲಿ ಇಬ್ಬರು ಸಾವು: ರಾಷ್ಟ್ರ ರಾಜಧಾನಿ ದೆಹಲಿಯ ಜನನಿಬೀಡ ಪ್ರದೇಶದಲ್ಲಿ ಗುಂಡಿನ ಸದ್ದು ಕೇಳಿ ಬಂದಿದೆ. ಕಳೆದ ರಾತ್ರಿ ವೇಳೆ ಅಪರಿಚಿತ ವ್ಯಕ್ತಿಗಳು ಗುಂಡಿನ ದಾಳಿ ನಡೆಸಿದ್ದು, ಇಬ್ಬರು ಸಾವನ್ನಪ್ಪಿದ್ದಾರೆ. ಬಾಲಕನೊಬ್ಬ ಗಾಯಗೊಂಡಿದ್ದು, ಚಿಂತಾಜನಕ ಸ್ಥಿತಿಯಲ್ಲಿದ್ದಾನೆ. ಇನ್ನು ಮಹಾರಾಷ್ಟ್ರದ ಪುಣೆಯಲ್ಲಿಯೂ ಸಹ ಗುಂಡಿನ ದಾಳಿ ನಡೆದಿದೆ.
ರಾತ್ರಿ ಗುಂಡಿನ ದಾಳಿ ನಡೆದಿರುವುದರ ಬಗ್ಗೆ ಪೊಲೀಸರು ಮಾಹಿತಿ ನೀಡಿದ್ದಾರೆ. ದೆಹಲಿಯ ಶಹದಾರ ನಗರದ ಫ್ರೇಶ್ ಬಜಾರ್ ಏರಿಯಾದಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಆಕಾಶ್ ಮತ್ತು ಆತನ ಸಂಬಂಧಿ ಬಾಲಕ ರಿಷಭ್ ಪ್ರಾಣ ಕಳೆದುಕೊಂಡಿದ್ದಾರೆ. ಇನ್ನು ಕ್ರಿಶ್ ಎಂಬ ಮತ್ತೊಬ್ಬ ಬಾಲಕನಿಗೆ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಶಹದಾರ ನಗರ ಪೊಲೀಸ್ ಡೆಪ್ಯುಟಿ ಕಮಿಷನರ್ ಪ್ರಶಾಂತ್ ಗೌತಮ್ ಪ್ರತಿಕ್ರಿಯಿಸಿ, ರಾತ್ರಿ ಸುಮಾರು 8.30ಕ್ಕೆ ಪಿಸಿಆರ್ಗೆ ಗುಂಡಿನ ದಾಳಿ ನಡೆದಿರುವುದರ ಬಗ್ಗೆ ಕರೆ ಬಂದಿತ್ತು. ಫ್ರೇಶ್ ನಗರದ ಬಿಹಾರಿ ಕಾಲೋನಿಯಲ್ಲಿ ಅಪರಿಚಿತರು ಗುಂಡಿನ ನಡೆಸಿದ್ದು, ಕೆಲವರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂಬ ಮಾಹಿತಿ ಸ್ಥಳೀಯರು ನೀಡಿದ್ದರು. ನಾವು ಕೂಡಲೇ ಸ್ಥಳಕ್ಕೆ ದೌಡಾಯಿಸಿ ಪರಿಶೀಲಿಸಿದಾಗ ಆಕಾಶ್ (40), ಆತನ ಮಗ ಕ್ರಿಶ್ (10) ಮತ್ತು ಸಂಬಂಧಿ ರಿಷಭ್ಗೆ ಗುಂಡೇಟು ಬಿದ್ದಿದ್ದವು. ಆದ್ರೆ ಆಕಾಶ್ ಮತ್ತು ರಿಷಭ್ ಗುಂಡೇಟಿಗೆ ಸಾವನ್ನಪ್ಪಿದ್ದು, ಕ್ರಿಶ್ ಅನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಹೇಳಿದರು.
ಪ್ರಾಥಮಿಕ ತನಿಖೆ ಪ್ರಕಾರ ಸ್ಥಳದಲ್ಲಿ ನಮಗೆ ಐದು ಗುಂಡುಗಳು ಪತ್ತೆಯಾಗಿವೆ. ಈ ಘಟನೆಗೆ ಇನ್ನು ಕಾರಣ ತಿಳಿದುಬಂದಿಲ್ಲ. ನಮ್ಮ ತನಿಖೆ ಮುಂದುವರಿದ್ದು, ಆದಷ್ಟು ಬೇಗ ಆರೋಪಿಗಳನ್ನು ಬಂಧಿಸಲಾಗುವುದು ಎಂದು ಡಿಸಿಪಿ ಹೇಳಿದರು.
ಓದಿ: ಪಾರ್ಕಿಂಗ್ ಸ್ಥಳದಲ್ಲಿ ಅಗ್ನಿ ಅನಾಹುತ: 4 ಕಾರು, 1 ಆಟೋ ಬೆಂಕಿಗೆ ಆಹುತಿ. ತಮಿಳುನಾಡಲ್ಲೂ ಭಾರಿ ಬೆಂಕಿ