ಪಾಟ್ನಾ(ಬಿಹಾರ): ರಾಷ್ಟ್ರೀಯ ಪ್ರಜಾಸತ್ತಾತ್ಮಕ ಮೈತ್ರಿಯ (ಎನ್‌ಡಿಎ) ಭಾಗವಾಗಿದ್ದ ಬಿಹಾರದ ರಾಷ್ಟ್ರೀಯ ಲೋಕ ಜನಶಕ್ತಿ ಪಕ್ಷ ಕೂಟದಿಂದ ಹಿಂದೆ ಸರಿದಿದೆ. ಇದರ ಜೊತೆಗೆ ಪಕ್ಷದ ಅಧ್ಯಕ್ಷ ಪಶುಪತಿ ಕುಮಾರ್ ಪಾರಸ್ ಅವರು ಕೇಂದ್ರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾಗಿ ಘೋಷಿಸಿದ್ದಾರೆ.
ಲೋಕಸಭೆ ಚುನಾವಣೆಗೆ ಸೀಟು ಹಂಚಿಕೆಯಲ್ಲಿ ತಮ್ಮ ಪಕ್ಷವನ್ನು ಕಡೆಗಣಿಸಲಾಗಿದೆ. ಹೀಗಾಗಿ ಎನ್ಡಿಎಯಿಂದ ಹೊರಬಂದಿದ್ದೇವೆ. ತಮ್ಮ ಪಕ್ಷಕ್ಕೆ ಅನ್ಯಾಯವಾಗಿದೆ ಎಂದು ಅವರು ಹೇಳಿದ್ದಾರೆ. ಚುನಾವಣೆಯಲ್ಲಿ ಸ್ಪರ್ಧೆಯ ಬಗ್ಗೆ ಮುಂದಿನ ನಿರ್ಣಯ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ.
ಎನ್‌ಡಿಎ ಮೈತ್ರಿಕೂಟವು ಬಿಹಾರ ಲೋಕಸಭೆಗೆ 40 ಅಭ್ಯರ್ಥಿಗಳ ಪಟ್ಟಿಯನ್ನು ಭಾನುವಾರ ಪ್ರಕಟಿಸಿದೆ. ನಮ್ಮ ಪಕ್ಷವು 5 ಸಂಸದರನ್ನು ಹೊಂದಿತ್ತು. ನಾನು ಅತ್ಯಂತ ಪ್ರಾಮಾಣಿಕತೆಯಿಂದ ಕೆಲಸ ಮಾಡಿದ್ದೇನೆ. ಆದರೂ ಪಕ್ಷಕ್ಕೆ ಯಾವುದೇ ಸ್ಥಾನಗಳನ್ನು ನೀಡಿಲ್ಲ. ನಮಗೆ ಅನ್ಯಾಯವಾಗಿದೆ. ಆದ್ದರಿಂದ, ನಾನು ಕೇಂದ್ರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೇನೆ ಎಂದು ಪಶುಪತಿ ಕುಮಾರ್ ಅಸಮಾಧಾನ ಹೊರಹಾಕಿದರು.
ಪ್ರಧಾನಿ ನರೇಂದ್ರ ಮೋದಿ ದೊಡ್ಡ ನಾಯಕರು. ಆದರೆ, ಮಿತ್ರಪಕ್ಷವಾದ ನಮ್ಮನ್ನು ಚುನಾವಣೆಯಲ್ಲಿ ಪರಿಗಣಿಸಿಲ್ಲ. ರಾಷ್ಟ್ರೀಯ ಲೋಕ ಜನಶಕ್ತಿ ಪಕ್ಷಕ್ಕೆ ಒಂದೇ ಒಂದು ಸೀಟನ್ನೂ ನೀಡಿಲ್ಲ. ಇದು ನಮಗೆ ಮಾಡಿದ ಅಪಮಾನ ಎಂದು ಪಶುಪತಿ ಪರಸ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಎನ್‌ಡಿಎ ಹೊಸ ಮಿತ್ರ ಲೋಕ ಜನಶಕ್ತಿ: ರಾಜಕೀಯ ಧ್ರುವೀಕರಣದಲ್ಲಿ ಎನ್‌ಡಿಎ ಕೂಟಕ್ಕೆ ಹೊಸ ಮಿತ್ರ ಪಕ್ಷವಾಗಿ ಲೋಕ ಜನಶಕ್ತಿ ಸೇರಿಕೊಂಡಿದ್ದರಿಂದ ರಾಷ್ಟ್ರೀಯ ಲೋಕ ಜನಶಕ್ತಿಯನ್ನು ಸೀಟು ಹಂಚಿಕೆಯಲ್ಲಿ ಹೊರಗಿಡಲಾಗಿತ್ತು. ಬಿಹಾರದ ಇತ್ತೀಚೆಗಿನ ರಾಜಕೀಯ ಬದಲಾವಣೆಗಳು ಇದಕ್ಕೆ ಕಾರಣವಾಗಿದೆ. ಚಿರಾಗ್ ಪಾಸ್ವಾನ್ ನೇತೃತ್ವದ ಲೋಕ ಜನಶಕ್ತಿಗೆ ಹಾಜಿಪುರ ಸೇರಿದಂತೆ 5 ಲೋಕಸಭಾ ಸ್ಥಾನಗಳನ್ನು ನೀಡಲಾಗಿದೆ.
ಇದನ್ನೂ ಓದಿ: ಲೋಕಸಭೆ ಚುನಾವಣೆ: ಏ.19ರಿಂದ 7 ಹಂತದಲ್ಲಿ ಮತದಾನ; ಜೂ.4ಕ್ಕೆ ಮತಎಣಿಕೆ