ನವದೆಹಲಿ: ಲೋಕಸಭೆ ಚುನಾವಣೆಯ ಅತ್ಯಂತ ಪ್ರಮುಖ ಘಟ್ಟ ಮತ ಎಣಿಕೆ ಇಂದು ಬೆಳಗ್ಗೆ 8 ಗಂಟೆಯಿಂದ ದೇಶದ ವಿವಿಧೆಡೆಯ ಎಣಿಕೆ ಕೇಂದ್ರಗಳಲ್ಲಿ ಬಿಗಿ ಭದ್ರತೆಯಲ್ಲಿ ನಡೆಯಲಿದೆ. ಸುಮಾರು 64.2 ಕೋಟಿ ಮತದಾರರು ನೀಡಿರುವ ತೀರ್ಪು ಸಂಜೆಯೊಳಗೆ ಸ್ಪಷ್ಟವಾಗುತ್ತದೆ.
ಏಪ್ರಿಲ್ 19ರಿಂದ ಆರಂಭವಾಗಿದ್ದ ಲೋಕಸಭೆ ಚುನಾವಣೆಯ ಮತದಾನ ಜೂನ್ 1ರವರೆಗೂ ನಡೆದಿತ್ತು. ಹೀಗಾಗಿ ಸುದೀರ್ಘವಾಗಿ ನಡೆದ ಚುನಾವಣಾ ಪ್ರಕ್ರಿಯೆ ಎಂಬ ದಾಖಲೆಯನ್ನೂ ಬರೆದಿದೆ. ಹಲವು ಅಡೆತಡೆಗಳು, ಸಾಕಷ್ಟು ಸವಾಲುಗಳ ಮಧ್ಯೆ ಕೇಂದ್ರ ಚುನಾವಣಾ ಆಯೋಗ ಯಶಸ್ವಿಯಾಗಿ ಚುನಾವಣಾ ಪ್ರಕ್ರಿಯೆ ಮುಗಿಸಿತ್ತು. ಆದರೆ, ಇಂದು ನಡೆಯುವ ಮತ ಎಣಿಕೆಯೊಂದಿಗೆ ಈ ಎಲ್ಲಾ ಪ್ರಕ್ರಿಯೆಗಳೂ ಮುಕ್ತಾಯ ಕಾಣಲಿವೆ.
ನೆಹರು ದಾಖಲೆ ಸರಿಗಟ್ಟುವರೇ ಮೋದಿ?: ಈಗಾಗಲೇ ಬಹುತೇಕ ಎಲ್ಲ ಮತದಾನೋತ್ತರ ಸಮೀಕ್ಷೆಗಳು ಪ್ರಧಾನಿ ನರೇಂದ್ರ ಮೋದಿ 3ನೇ ಬಾರಿಗೆ ಪ್ರಧಾನಿಯಾಗುವ ಭವಿಷ್ಯ ನುಡಿದಿವೆ. ಒಂದು ವೇಳೆ ಮೋದಿ ನೇತೃತ್ವದ ಬಿಜೆಪಿ ಮತ್ತೆ ಅಧಿಕಾರದ ಗದ್ದುಗೆ ಹಿಡಿದದ್ದೇ ಆದಲ್ಲಿ ಹೊಸದೊಂದು ದಾಖಲೆ ನಿರ್ಮಾಣವಾಗಲಿದೆ. ಸತತ ಮೂರನೇ ಬಾರಿಗೆ ಪ್ರಧಾನಿಯಾದ ಜವಾಹರ ಲಾಲ್ ನೆಹರು ಅವರ ದಾಖಲೆಯನ್ನು ಮೋದಿ ಸರಿಗಟ್ಟಲಿದ್ದಾರೆ. ಇದೇ ರೀತಿ ಕಾಂಗ್ರೆಸ್ ನೇತೃತ್ವದ 'ಇಂಡಿಯಾ' ಮೈತ್ರಿಕೂಟ ಗೆದ್ದರೆ, ಪ್ರಧಾನಿ ಮೋದಿಯ ಗೆಲುವಿನ ನಾಗಾಲೋಟಕ್ಕೆ ಬ್ರೇಕ್ ಹಾಕಿದ ದಾಖಲೆಯೂ ಆಗಬಹುದು.
ಮ್ಯಾಜಿಕ್ ನಂಬರ್ 272: ಕೇಂದ್ರದಲ್ಲಿ ಯಾವುದೇ ಪಕ್ಷ ಅಧಿಕಾರದ ಗದ್ದುಗೆ ಹಿಡಿಯಬೇಕಾದರೆ ಒಟ್ಟು 543 ಲೋಕಸಭಾ ಸ್ಥಾನಗಳ ಪೈಕಿ 272 ಸ್ಥಾನಗಳು ಬೇಕು.
ಸೂರತ್‌ನಲ್ಲಿ ಬಿಜೆಪಿ ಅಭ್ಯರ್ಥಿ ಅವಿರೋಧ ಆಯ್ಕೆ: ಈ ಬಾರಿ ಒಟ್ಟು 8,360 ಅಭ್ಯರ್ಥಿಗಳು ಚುನಾವಣೆಗೆ ಸ್ಪರ್ಧಿಸಿದ್ದರು. ಈ ಪೈಕಿ 797 ಮಹಿಳೆಯರು ಕಣದಲ್ಲಿದ್ದಾರೆ. ಸೂರತ್ ಲೋಕಸಭೆ ಕ್ಷೇತ್ರವನ್ನು ಬಿಜೆಪಿ ಈಗಾಗಲೇ ಅವಿರೋಧವಾಗಿ ಗೆದ್ದುಗೊಂಡಿದೆ.
ಈ ಬಾರಿ ಚುನಾವಣಾಪೂರ್ವ ಘೋಷಣೆಯಂತೆ ಬಿಜೆಪಿ 370 ಹಾಗು ಎನ್‌ಡಿಎ 400 ಸ್ಥಾನಗಳ ಗಡಿ ದಾಟುತ್ತಾ?, ಕಾಂಗ್ರೆಸ್ ತನ್ನ ಕಳೆದ ಬಾರಿಯ ಚುನಾವಣೆಯ ಸಾಧನೆಯನ್ನು ಮೀರಿ ಮುನ್ನಡೆಯುತ್ತಾ ಎಂಬುದು ತೀವ್ರ ಕುತೂಹಲ ಕೆರಳಿಸಿದೆ. 2014 ಮತ್ತು 2019ರಲ್ಲಿ ಕಾಂಗ್ರೆಸ್ ಒಟ್ಟು ಕ್ಷೇತ್ರಗಳ ಪೈಕಿ ಕೇವಲ ಶೇ 10ರಷ್ಟು ಸ್ಥಾನಗಳನ್ನೂ ಪಡೆಯಲೂ ಸಾಧ್ಯವಾಗಿಲ್ಲ ಎಂಬುದು ಗಮನಾರ್ಹ.
ಎಕ್ಸಿಟ್ ಪೋಲ್ ನಿಜವಾಗುತ್ತಾ?: ಚುನಾವಣೋತ್ತರ ಸಮೀಕ್ಷೆಗಳ ಭವಿಷ್ಯ ನಿಜವಾದಲ್ಲಿ ಈ ಬಾರಿ ಬಿಜೆಪಿ ನೇತೃತ್ವದ ಎನ್‌ಡಿಎ ಕೇಂದ್ರದಲ್ಲಿ ಹ್ಯಾಟ್ರಿಕ್ ಸಾಧನೆ ಮಾಡುವುದು ನಿಚ್ಚಳ. ಏಕೆಂದರೆ, ಬಹುತೇಕ ಎಲ್ಲ ಸರ್ವೇಗಳೂ ಕೂಡಾ ಬಿಜೆಪಿಗೆ 350ಕ್ಕೂ ಸ್ಥಾನಗಳನ್ನು ನೀಡಿವೆ. ಆದರೆ ಕಾಂಗ್ರೆಸ್ ಚುನಾವಣೋತ್ತರ ಸರ್ವೆಗಳನ್ನು ತಿರಸ್ಕರಿಸಿದ್ದು, ನಾಳೆ ಫಲಿತಾಂಶ ನಮ್ಮ ಪರವಾಗಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದೆ.
ಇದನ್ನೂ ಓದಿ: ಲೋಕಸಮರ: ಯಾರಿಂದ ಯಾರಿಗೆ ಹೊಡೆತ? ರಾಜ್ಯದ 28 ಕ್ಷೇತ್ರಗಳ ಮಾಹಿತಿ - Lok Sabha Election
ಮತ ಎಣಿಕೆ ಕಾರ್ಯ ಬೆಳಗ್ಗೆ 8 ಗಂಟೆ ಶುರುವಾಗಲಿದೆ. ಇದಕ್ಕೂ ಮೊದಲು ಅಂಚೆ ಮತಗಳ ಎಣಿಕೆ ಕಾರ್ಯ ನಡೆಯುತ್ತದೆ. ದೇಶದೆಲ್ಲೆಡೆ ಮತ ಎಣಿಕಾ ಕೇಂದ್ರಗಳ ಸುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಉನ್ನತ ದರ್ಜೆಯ ಅಧಿಕಾರಿಗಳು ಭದ್ರತೆಯ ಮೇಲ್ವಿಚಾರಣೆ ಹೊತ್ತಿದ್ದಾರೆ. ಈ ಪ್ರಕ್ರಿಯೆಯಲ್ಲಿ ಸುಮಾರು 70 ರಿಂದ 80 ಲಕ್ಷ ಚುನಾವಣಾ ಸಿಬ್ಬಂದಿ ಪಾಲ್ಗೊಂಡಿದ್ದಾರೆ ಎಂದು ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ತಿಳಿಸಿದ್ದಾರೆ.
ಮತ ಎಣಿಕೆ ಹೀಗೆ ನಡೆಯುತ್ತದೆ:
1. ಅಭ್ಯರ್ಥಿಗಳು, ಅವರ ಪ್ರತಿನಿಧಿಗಳು ಹಾಗು ಚುನಾವಣಾಧಿಕಾರಿಗಳ ಸಮ್ಮುಖದಲ್ಲಿ ಇವಿಎಂಗಳನ್ನು ಇಡಲಾಗಿದ್ದ ಸ್ಟ್ರಾಂಗ್ ರೂಂಗಳನ್ನು ಮೊದಲು ತೆರೆಯಲಾಗುತ್ತದೆ. ಇದರ ವಿಡಿಯೋ ಚಿತ್ರೀಕರಣ ಮಾಡಲಾಗುತ್ತದೆ.
2. ಇವಿಎಂ (ಎಲೆಕ್ಟ್ರಾನಿಕ್ ಮತಯಂತ್ರಗಳು)ನಿಂದ ಕಂಟ್ರೋಲ್ ಘಟಕವನ್ನು (ಸಿಯು) ಮಾತ್ರ ಮತ ಎಣಿಕೆ ಕೇಂದ್ರಗಳಿಗೆ ತರಲಾಗುತ್ತದೆ.
3. ಸ್ಟ್ರಾಂಗ್ ರೂಂಗಳಿಂದ ಕಂಟ್ರೋಲ್ ಘಟಕಗಳನ್ನು ಮತ ಎಣಿಕೆ ಕೇಂದ್ರಗಳ ಟೇಬಲ್‌ಗಳ ಮೇಲೆ ತಂದಿರಿಸಲಾಗುತ್ತದೆ. ಸಂಪೂರ್ಣ ಸಿಸಿಟಿವಿ ಕಣ್ಗಾವಲಿನಲ್ಲೇ ಮತ ಎಣಿಕೆ ನಡೆಯುತ್ತದೆ.
4. ಕಂಟ್ರೇಲ್ ಘಟಕಗಳಿಂದ ಫಲಿತಾಂಶಗಳನ್ನು ಪಡೆಯವ ಮುನ್ನ, ಅದರಲ್ಲಿ ಹಾಕಿರುವ ಸೀಲ್‌ಗಳು, ವಿಭಿನ್ನ ಸೀರಿಯಲ್ ಸಂಖ್ಯೆಯ ಪರಿಶೀಲನೆ ನಡೆಯುತ್ತದೆ.
5. ಕೌಂಟಿಂಗ್ ಏಜೆಂಟ್‌ಗಳು ಮತದಾನವಾಗಿರುವ ಮತಗಳನ್ನು ಪಾರ್ಮ್ 17 ಸಿ ದಾಖಲೆಯ ಮೂಲಕ ಪರಿಶೀಲನೆ ಮಾಡಬಹುದಾಗಿದೆ.
ಕಣದಲ್ಲಿರುವ ಪ್ರಮುಖರು :
1. ನರೇಂದ್ರ ಮೋದಿ ವರ್ಸಸ್ ಅಜಯ್ ರೈ- ವಾರಣಾಸಿ
2. ರಾಹುಲ್ ಗಾಂಧಿ ವರ್ಸಸ್ ದಿನೇಶ್ ಪ್ರತಾಪ್ ಸಿಂಗ್- ರಾಯ್ ಬರೇಲಿ
3. ರಾಹುಲ್ ಗಾಂಧಿ ವರ್ಸಸ್ ಆ್ಯನಿ ರಾಜಾ- ವಯನಾಡ್
4. ಸ್ಮೃತಿ ಇರಾಲಿ ವರ್ಸಸ್ ಕಿಶೋರಿ ಲಾಲ್ ಶರ್ಮಾ- ಅಮೇಥಿ
5. ಶಶಿ ತರೂರ್ ವರ್ಸಸ್ ರಾಜೀವ್ ಚಂದ್ರಶೇಖರ್- ತಿರುವನಂತಪುರಂ
6. ಅಧಿರ್ ರಂಜನ್ ಚೋಧರಿ ವರ್ಸರ್ ಯೂಸುಫ್ ಪಠಾಣ್- ಬೆಹ್ರಾಂಪುರ್
7. ಬಾನ್ಸುರಿ ಸ್ವರಾಜ್ ವರ್ಸಸ್ ಸೋಮನಾಥ್ ಭಾರ್ತಿ- ನವದೆಹಲಿ
8. ಬಿ.ವೈ.ರಾಘವೇಂದ್ರ ವರ್ಸಸ್ ಕೆ.ಎಸ್.ಈಶ್ವರಪ್ಪ- ಶಿವಮೊಗ್ಗ
ಇದನ್ನೂ ಓದಿ: ಲೋಕಸಭೆ ಚುನಾವಣೆಯ ಮತ ಎಣಿಕೆ ಪ್ರಕ್ರಿಯೆ ಹೇಗಿರಲಿದೆ ಗೊತ್ತಾ? - Vote Counting Process