ಧಮ್ತಾರಿ(ಛತ್ತೀಸ್ಗಢ): ಚಿರತೆಯೊಂದು ಮಗು ಹೊತ್ತೊಯ್ದ ಘಟನೆ ಭಾನುವಾರ ರಾತ್ರಿ ಇಲ್ಲಿನ ಸಿಹಾವಾ ಪೊಲೀಸ್ ಠಾಣಾ ವ್ಯಾಪ್ತಿಯ ಕೊರ್ಮುಡ್ ಅರಣ್ಯ ಪ್ರದೇಶದ ಬಿರ್ಗುರಿ ಗ್ರಾಮದಲ್ಲಿ ನಡೆದಿದೆ.
ಪೋಷಕರೊಂದಿಗೆ ಮೂರು ವರ್ಷದ ಮಗು ಮಲಗಿತ್ತು. ತಂದೆ ಮಧ್ಯರಾತ್ರಿ ಎಚ್ಚರಗೊಂಡಾಗ ಮಗು ನಾಪತ್ತೆಯಾಗಿತ್ತು. ಬೆಳಗ್ಗೆ ಮನೆಯವರು ಚಿರತೆಯ ಹೆಜ್ಜೆ ಗುರುತುಗಳನ್ನು ಕಂಡು ಗಾಬರಿಗೊಂಡಿದ್ದಾರೆ. ಮಗುವನ್ನು ಚಿರತೆ ಹೊತ್ತೊಯ್ದಿರುವ ಶಂಕೆ ಮೂಡಿತ್ತು. ಈ ಸುದ್ದಿ ಗ್ರಾಮದಲ್ಲಿ ಹರಡಿದ ತಕ್ಷಣ ಎಲ್ಲರೂ ಹುಡುಕಾಟ ನಡೆಸಿದ್ದಾರೆ.
ಗ್ರಾಮಕ್ಕೆ ಚಿರತೆ ಬಂದಿರುವ ಬಗ್ಗೆ ಮಾಹಿತಿ ಪಡೆದ ಅರಣ್ಯ ಇಲಾಖೆಯ ತಂಡವೂ ಕೂಡ ಸ್ಥಳಕ್ಕೆ ಆಗಮಿಸಿದ್ದು, ಮಗುವಿನ ಪತ್ತೆಗೆ ಪ್ರಯತ್ನಿಸುತ್ತಿದ್ದಾರೆ. ಅರಣ್ಯ ಇಲಾಖೆಯವರು ಗ್ರಾಮಸ್ಥರೊಂದಿಗೆ ಸೇರಿ ಶೋಧ ನಡೆಸುತ್ತಿದ್ದು, ಇದುವರೆಗೂ ಸುಳಿವು ಸಿಕ್ಕಿಲ್ಲ.
ಸೋಮವಾರ ಇದೇ ಭಾಗದಲ್ಲಿ ಮಾಧ್ಯಮದವರೊಬ್ಬರ ಮೇಲೆ ಚಿರತೆ ದಾಳಿ ನಡೆಸಿದ್ದು, ಅವರು ಗಂಭೀರವಾಗಿ ಗಾಯಗೊಂಡಿದ್ದರು. ಚಿರತೆಯಿಂದಾಗಿ ಸುತ್ತಮುತ್ತಲ ಪ್ರದೇಶದಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ.
ಇದನ್ನೂ ಓದಿ: ಮನೆ ಬಿಟ್ಟು ಹೋದ ತಂದೆಗಾಗಿ ಕಾಯುತ್ತಿದೆ ಮಗಳ ಶವ: ಅಂತ್ಯ ಸಂಸ್ಕಾರಕ್ಕೆ ಬರುವಂತೆ ಮನವಿ - DEAD BODY WAITING FOR FATHER