ಪಾಟ್ನಾ (ಬಿಹಾರ): ಬಿಹಾರದ 8 ಕ್ಷೇತ್ರಗಳಿಗೆ ಏಳನೇ ಮತ್ತು ಕೊನೆಯ ಹಂತದ ಚುನಾವಣೆ ನಡೆಯಲಿದೆ. ಸಂಜೆ 5 ಗಂಟೆಯವರೆಗೆ ಬಹಿರಂಗ ಪ್ರಚಾರ ಮಾಡಬಹುದು. ಚುನಾವಣಾ ಪ್ರಚಾರದ ಗಡುವು ಮುಗಿದ ನಂತರ ಅಭ್ಯರ್ಥಿಗಳು ತಮ್ಮ ಕ್ಷೇತ್ರದ ಮತದಾರರ ಮನೆ ಬಾಗಿಲಿಗೆ ತೆರಳಿ ಮತ ಯಾಚನೆ ಮಾಡಬಹುದು. ಜೂನ್ 1 ರಂದು ಪಾಟಲಿಪುತ್ರ,ಪಾಟ್ನಾ ಸಾಹಿಬ್, ನಳಂದಾ, ಅರ್ರಾ, ಬಕ್ಸಾರ್, ಕರಕಟ್, ಸಸಾರಾಮ್ ಮತ್ತು ಜೆಹಾನಾಬಾದ್ ಕ್ಷೇತ್ರಗಳಲ್ಲಿ ಮತದಾನವಾಗಲಿದೆ.
ಪಾಟಲೀಪುತ್ರದಲ್ಲಿ ಮಾವ-ಸೊಸೆ ನಡುವೆ ಪೈಪೋಟಿ: ಪಾಟಲಿಪುತ್ರ ಲೋಕಸಭೆ ಕ್ಷೇತ್ರದಲ್ಲಿ ಮೂರನೇ ಬಾರಿಗೆ ಬಿಜೆಪಿ ಅಭ್ಯರ್ಥಿ ರಾಮಕೃಪಾಲ್ ಯಾದವ್ ಮತ್ತು ಆರ್‌ಜೆಡಿ ಅಭ್ಯರ್ಥಿ ಮಿಸಾ ಭಾರತಿ ನಡುವೆ ಪೈಪೋಟಿ ನಡೆಯುತ್ತಿದೆ. 2014 ಮತ್ತು 2019ರಲ್ಲಿ ಬಿಜೆಪಿ ಆರ್‌ಜೆಡಿಯನ್ನು ಸೋಲಿಸಿತ್ತು. ಈ ಬಾರಿ ಇಬ್ಬರ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ.
ಪಾಟ್ನಾ ಸಾಹಿಬ್‌ನಲ್ಲಿ ಬಿಜೆಪಿ-ಕಾಂಗ್ರೆಸ್ ಸ್ಪರ್ಧೆ: ಭಾರತೀಯ ಜನತಾ ಪಕ್ಷವು ಹಾಲಿ ಸಂಸದ ರವಿಶಂಕರ್ ಪ್ರಸಾದ್ ಅವರನ್ನು ಪಾಟ್ನಾ ಸಾಹಿಬ್ ಲೋಕಸಭಾ ಸ್ಥಾನಕ್ಕೆ ತನ್ನ ಅಭ್ಯರ್ಥಿಯಾಗಿ ನಾಮನಿರ್ದೇಶನ ಮಾಡಿದೆ. ಕಾಂಗ್ರೆಸ್ ಮಾಜಿ ಲೋಕಸಭಾ ಸ್ಪೀಕರ್ ಮೀರಾ ಕುಮಾರ್ ಅವರ ಪುತ್ರ ಅನ್ಶುಲ್ ಅವಿಜಿತ್‌ಗೆ ಟಿಕೆಟ್ ನೀಡಿದೆ. ಇಬ್ಬರ ಪೈಕಿ ಮತದಾರನ ಒಲವು ಯಾರ ಕಡೆ ಇದೆ ಎಂಬುದು ನಾಳೆ ತಿಳಿಯಲಿದೆ.
ನಳಂದದಲ್ಲಿ ಜೆಡಿಯು ಸ್ಪರ್ಧೆ: ಸಿಎಂ ನಿತೀಶ್ಕುಮಾರ್ ನೇತೃತ್ವದ ಜೆಡಿಯು ನಳಂದ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಿದೆ. ಹಾಲಿ ಸಂಸದ ಕೌಶಲೇಂದ್ರ ಕುಮಾರ್ ಅವರನ್ನು ಕಣಕ್ಕಿಳಿಸಿದೆ. ಇಂಡಿ ಕೂಟದ ಪರವಾಗಿ ಸಿಪಿಐ ಮಾಲೆ ಸಂದೀಪ್ ಸೌರಭ್ ಸ್ಪರ್ಧೆಯಲ್ಲಿದ್ದಾರೆ. ಹಲವು ಚುನಾವಣೆಗಳಲ್ಲಿ ಗೆದ್ದಿದ್ದರೂ, ಈ ಬಾರಿ ನಿತೀಶ್ ಕುಮಾರ್ ಅವರ ವಿಶ್ವಾಸಾರ್ಹತೆಯ ಮೇಲೆ ಪ್ರಶ್ನೆ ಎದ್ದಿದೆ.
ಅರ್ರಾ ಕ್ಷೇತ್ರದಲ್ಲಿ ಕೇಂದ್ರ ಸಚಿವರಿಗೆ ಸವಾಲು: ಕೇಂದ್ರ ಸಚಿವ ಆರ್.ಕೆ.ಸಿಂಗ್ ಅರ್ರಾ ಲೋಕಸಭೆ ಸ್ಥಾನಕ್ಕೆ ಬಿಜೆಪಿ ಅಭ್ಯರ್ಥಿಯಾಗಿದ್ದಾರೆ. ಇವರ ಎದುರು ಸಿಪಿಐನ ಮಾಲೆ ಸುದಾಮ ಪ್ರಸಾದ್ ಅವರು ಇಂಡಿ ಕೂಟದಿಂದ ಸ್ಪರ್ಧಿಸಿದ್ದಾರೆ. ಸಾಮಾಜಿಕ ಸಮೀಕರಣಗಳ ದೃಷ್ಟಿಯಿಂದ ಈ ಬಾರಿ ಸ್ಪರ್ಧೆ ಕಠಿಣವಾಗಿದೆ.
ಬಕ್ಸಾರ್ನಲ್ಲಿ ತ್ರಿಕೋನ ಸ್ಪರ್ಧೆ: ಬಕ್ಸಾರ್ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಕೇಂದ್ರ ಸಚಿವೆ ಅಶ್ವಿನಿ ಚೌಬೆ ಬದಲಿಗೆ ಮಿಥಿಲೇಶ್ ತಿವಾರಿಗೆ ಟಿಕೆಟ್ ನೀಡಲಾಗಿದೆ. ಆರ್‌ಜೆಡಿ ರಾಜ್ಯಾಧ್ಯಕ್ಷ ಜಗದಾನಂದ ಸಿಂಗ್ ಅವರ ಪುತ್ರ ಸುಧಾಕರ್ ಸಿಂಗ್ ಕಣದಲ್ಲಿದ್ದಾರೆ. ಮಾಜಿ ಐಪಿಎಸ್ ಅಧಿಕಾರಿ ಆನಂದ್ ಮಿಶ್ರಾ ಸ್ವತಂತ್ರ ಅಭ್ಯರ್ಥಿಯಾಗಿಯಾಗಿದ್ದಾರೆ.
ಸಸಾರಾಮ್‌ನಲ್ಲಿ ಬಿಜೆಪಿ-ಕಾಂಗ್ರೆಸ್ ಹಣಾಹಣಿ: ಸಸಾರಾಮ್ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ತನ್ನ ಹಳೆಯ ಅಭ್ಯರ್ಥಿಗಳನ್ನು ಬದಲಿಸಿವೆ. ಬಿಜೆಪಿ ಛೇಡಿ ಪಾಸ್ವಾನ್ ಅವರ ಬದಲಿಗೆ ಶಿವೇಶ್ ರಾಮ್ ಅವರಿಗೆ ಟಿಕೆಟ್ ನೀಡಿದರೆ, ಕಾಂಗ್ರೆಸ್ ಮೀರಾ ಕುಮಾರ್ ಬದಲಿಗೆ ಮನೋಜ್ ರಾಮ್ ಅವರನ್ನು ಅಭ್ಯರ್ಥಿಯನ್ನಾಗಿ ಮಾಡಿದೆ. ಬಿಎಸ್‌ಪಿ ಕೂಡ ಇಲ್ಲಿ ಸ್ಪರ್ಧೆಯಲ್ಲಿದೆ.
ಕಾರಕಟದಲ್ಲಿ ಪವನ್‌ಸಿಂಗ್‌ಗೆ ಪರೀಕ್ಷೆ: ಎನ್‌ಡಿಎಯಿಂದ ಉಪೇಂದ್ರ ಕುಶ್ವಾಹ ಕಾರಕಟ್ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದರೆ, ಸಿಪಿಐನಿಂದ ರಾಜಾರಾಂ ಸಿಂಗ್ ಕುಶ್ವಾಹ ಅವರು ಕಣದಲ್ಲಿದ್ದಾರೆ. ಭೋಜ್‌ಪುರಿ ನಟ ಪವನ್ ಸಿಂಗ್ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದಾರೆ.
ಜೆಹನಾಬಾದ್‌ನಲ್ಲಿ ತ್ರಿಕೋನ ಹೋರಾಟ: ಈ ಕ್ಷೇತ್ರದಲ್ಲಿ ಆರ್‌ಜೆಡಿ ಮತ್ತೊಮ್ಮೆ ಸುರೇಂದ್ರ ಪ್ರಸಾದ್ ಯಾದವ್ ಮೇಲೆ ವಿಶ್ವಾಸವಿಟ್ಟು ಕಣಕ್ಕಿಳಿಸಿದೆ. ಜೆಡಿಯುನಿಂದ ಚಂದೇಶ್ವರ್ ಚಂದ್ರವಂಶಿ ಕಣದಲ್ಲಿದ್ದಾರೆ. ಮಾಜಿ ಸಂಸದ ಅರುಣ್ ಕುಮಾರ್ ಸಿಂಗ್ ಕೂಡ ಬಿಎಸ್ಪಿ ಅಭ್ಯರ್ಥಿಯಾಗಿದ್ದಾರೆ.
ಇಂದು ಸಂಜೆ ಬಹಿರಂಗ ಪ್ರಚಾರ ಕೊನೆಗೊಳ್ಳಲಿದ್ದು, ಇನ್ನೇನಿದ್ದರೂ ಮನೆ ಮನೆ ಪ್ರಚಾರವಷ್ಟೇ ಬಾಕಿ ಇದೆ. ಶನಿವಾರ 7ನೇ ಹಾಗೂ ಅಂತಿಮ ಹಂತದ ಮತದಾನ ನಡೆಯಲಿದೆ. ಪ್ರಧಾನಿ ಮೋದಿ ಕ್ಷೇತ್ರ ವಾರಾಣಸಿ ಸೇರಿದಂತೆ 57 ಕ್ಷೇತ್ರಗಳಲ್ಲಿ ಅಂತಿಮ ಹಂತದ ಮತದಾನ ನಡೆಯಲಿದೆ. ಪ್ರಧಾನಿ ಇಂದು ಚುನಾವಣಾ ಪ್ರಚಾರ ಮುಗಿಸಿ ಧ್ಯಾನಕ್ಕಾಗಿ ಕನ್ಯಾಕುಮಾರಿಗೆ ಪ್ರಯಾಣ ಬೆಳಸಲಿದ್ದಾರೆ.