ಪಾಟ್ನಾ (ಬಿಹಾರ): ಆರ್ಜೆಡಿ ವರಿಷ್ಠ ಲಾಲು ಯಾದವ್ ವಿರುದ್ಧ ಮಾತನಾಡುವ ಭರದಲ್ಲಿ ಬಿಹಾರ ಉಪ ಮುಖ್ಯಮಂತ್ರಿ, ಬಿಜೆಪಿ ರಾಜ್ಯಾಧ್ಯಕ್ಷ ಸಾಮ್ರಾಟ್ ಚೌಧರಿ ವಿವಾದ ಸೃಷ್ಟಿಸಿದ್ದಾರೆ. ''ಲಾಲು ಟಿಕೆಟ್ ಮಾರಾಟದಲ್ಲಿ ಪರಿಣಿತರು. ಈ ಬಾರಿ ಟಿಕೆಟ್ ಹಂಚಿಕೆ ವಿಷಯದಲ್ಲಿ ಅವರು ತಮ್ಮ ಮಗಳನ್ನು ಸಹ ಬಿಟ್ಟಿಲ್ಲ. ಮೊದಲಿಗೆ ತಮ್ಮ ಮಗಳಿಂದ ಕಿಡ್ನಿ ಪಡೆದರು, ನಂತರ ಅವರಿಗೆ ಟಿಕೆಟ್ ನೀಡಿದ್ದಾರೆ ಎಂದು ಸಾಮ್ರಾಟ್ ಚೌಧರಿ ಹೇಳಿಕೆ ನೀಡಿದ್ದಾರೆ.
ಬಿಹಾರದ ಮಾಜಿ ಸಿಎಂ ಲಾಲು ಯಾದವ್ ಮೇವು ಹಗರಣದಲ್ಲಿ ಆರೋಪಿಯಾಗಿದ್ದು, ಸದ್ಯ ಜಾಮೀನಿನ ಮೇಲೆ ಹೊರಗಿದ್ದಾರೆ. ಈ ಹಿಂದೆ ಸಿಂಗಾಪುರದಲ್ಲಿ ಮೂತ್ರಪಿಂಡ ಕಸಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಕಿರಿಯ ಪುತ್ರಿ ರೋಹಿಣಿ ಆಚಾರ್ಯ ಅವರೇ ತಮ್ಮ ತಂದೆ ಲಾಲು ಯಾದವ್ ಅವರಿಗೆ ಕಿಡ್ನಿ ದಾನ ಮಾಡಿದ್ದರು. ಇದೀಗ ಲಾಲು ಆರೋಗ್ಯ ಕ್ರಮೇಣವಾಗಿ ಸುಧಾರಿಸುತ್ತಿದ್ದು, ರಾಜಕೀಯದಲ್ಲಿ ಸಾಕಷ್ಟು ಸಕ್ರಿಯರಾಗಿದ್ದಾರೆ.
ಮಾರ್ಚ್ 3ರಂದು ಪಾಟ್ನಾದ ಗಾಂಧಿ ಮೈದಾನದಲ್ಲಿ 'ಇಂಡಿಯಾ'ದ ಮಹಾಮೈತ್ರಿಕೂಟದ ಸಾರ್ವಜನಿಕ ಸಭೆ ಏರ್ಪಡಿಸಲಾಗಿತ್ತು. ಈ ಸಭೆಯಲ್ಲಿ ತಮ್ಮ ಪುತ್ರಿ ರೋಹಿಣಿ ಆಚಾರ್ಯ ಅವರನ್ನು ಮೊದಲ ಬಾರಿಗೆ ಸಾರ್ವಜನಿಕ ವೇದಿಕೆಯಲ್ಲಿ ಪರಿಚಯಿಸಿದ್ದರು. ಅಲ್ಲದೇ, ರೋಹಿಣಿ ಆಚಾರ್ಯ ತಮಗೆ ಕಿಡ್ನಿ ದಾನ ಮಾಡಿರುವುದನ್ನು ಜನತೆ ಮತ್ತು ಪಕ್ಷದ ತಮ್ಮ ಕಾರ್ಯಕರ್ತರಿಗೆ ಹಮ್ಮೆಯಿಂದ ಲಾಲು ತಿಳಿಸಿದ್ದರು.
ಈಗ ಲೋಕಸಭೆ ಚುನಾವಣೆಗೆ ಪಕ್ಷದ ಟಿಕೆಟ್ ಹಂಚಿಕೆಯಲ್ಲಿ ಲಾಲು ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ಇತ್ತೀಚೆಗೆ ಖುದ್ದು ಅವರೇ ನಾಲ್ವರ ಅಭ್ಯರ್ಥಿಗಳ ಹೆಸರನ್ನು ಘೋಷಿಸಿದ್ದರು. ಈ ಬಾರಿ ರೋಹಿಣಿ ಆಚಾರ್ಯ ಅವರಿಗೂ ಟಿಕೆಟ್ ನೀಡುವ ಬಗ್ಗೆ ಚರ್ಚೆ ಜೋರಾಗಿದೆ.
ಲಾಲು ಬಗ್ಗೆ ಸಾಮ್ರಾಟ್ ಹೇಳಿದ್ದೇನು?: ಬಿಜೆಪಿ ರಾಜ್ಯಾಧ್ಯಕ್ಷರಾದ ಉಪ ಮುಖ್ಯಮಂತ್ರಿ ಸಾಮ್ರಾಟ್ ಚೌಧರಿ ಮಾಧ್ಯಮಗಳೊಂದಿಗೆ ಮಾತನಾಡುತ್ತಾ ಲಾಲು ವಿರುದ್ಧ ವಾಗ್ದಾಳಿ ನಡೆಸಿದರು. ಈ ವೇಳೆ, ಲಾಲು ಪ್ರಸಾದ್ ಟಿಕೆಟ್ ಹಂಚಿಕೆ ಕುರಿತು ಪ್ರಸ್ತಾಪಿಸಿದ ಸಾಮ್ರಾಟ್ ಚೌಧರಿ, ಎಡವಟ್ಟೊಂದನ್ನು ಮಾಡಿದ್ಧಾರೆ.
''ಲಾಲು ಪ್ರಸಾದ್ ಅಂತಹ ನಾಯಕ ಎಂದರೆ, ಟಿಕೆಟ್ ಮಾರಾಟದಲ್ಲಿ ಪರಿಣಿತರಾಗಿದ್ದಾರೆ. ಲಾಲು ಜೀ ಈಗ ತಮ್ಮ ಮಗಳನ್ನೂ ಬಿಟ್ಟಿಲ್ಲ. ಮೊದಲಿಗೆ ಕಿಡ್ನಿ ಪಡೆದರು, ನಂತರದಲ್ಲಿ ಟಿಕೆಟ್ ಕೊಟ್ಟಿದ್ದಾರೆ. ಇದೇ ಲಾಲು ಯಾದವ್ ಅವರ ಪರಿಚಯವಾಗಿದೆ. ಟಿಕೆಟ್ ವಿಷಯದಲ್ಲಿ ಮಗಳನ್ನೂ ಬಿಡುವುದಲ್ಲೋ, ಅವರ ಹೆಸರೇ ಲಾಲು ಪ್ರಸಾದ್'' ಎಂದು ಡಿಸಿಎಂ ಸಾಮ್ರಾಟ್ ಚೌಧರಿ ಹೇಳಿದ್ಧಾರೆ.
ಇದನ್ನೂ ಓದಿ: ಲಾಲು ಪ್ರಸಾದ್ ಯಾದವ್ ಕಿಡ್ನಿ ಆಪರೇಷನ್ ಸಕ್ಸಸ್.. ಮಾಜಿ ಸಿಎಂಗೆ ಮಗಳಿಂದ ಜೀವದಾನ