ಕುವೈತ್ ಸಿಟಿ: ಕುವೈತ್‌ನಲ್ಲಿ ಸಂಭವಿಸಿದ ಭೀಕರ ಅಗ್ನಿ ದುರಂತದಲ್ಲಿ ಪ್ರಾಣ ಕಳೆದುಕೊಂಡ 45 ಭಾರತೀಯ ಸಂತ್ರಸ್ತರ ಪಾರ್ಥಿವ ಶರೀರಗಳನ್ನು ಹೊತ್ತ ಭಾರತೀಯ ವಾಯುಪಡೆಯ ವಿಶೇಷ ವಿಮಾನವು ಶೀಘ್ರವೇ ಕೊಚ್ಚಿಗೆ ಬಂದು ತಲುಪಲಿದೆ ಎಂದು ಕುವೈತ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಶುಕ್ರವಾರ ಬೆಳಗ್ಗೆ ತಿಳಿಸಿದೆ.
ಭಾರತೀಯ ರಾಯಭಾರ ಕಚೇರಿ ಸಾಮಾಜಿಕ ಜಾಲತಾಣವಾದ ಎಕ್ಸ್ ಖಾತೆಯಲ್ಲಿ ಪ್ರತಿಕ್ರಿಯಿಸಿ, "ಕುವೈತ್‌ನಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ 45 ಭಾರತೀಯರ ಮೃತಪಟ್ಟಿದ್ದರು, ಅವರ ಮೃತದೇಹಗಳನ್ನು ಹೊತ್ತ ವಿಶೇಷ IAF ವಿಮಾನವು ಕೊಚ್ಚಿಗೆ ಬಂದು ತಲುಪಲಿದೆ'' ಎಂದು ತಿಳಿಸಿದೆ.
ಬುಧವಾರ ಇಲ್ಲಿ ಬೆಂಕಿ ಅವಘಡದಲ್ಲಿ ಸಾವನ್ನಪ್ಪಿದ 45 ಭಾರತೀಯರಲ್ಲಿ ಕೇರಳದ ಇಪ್ಪತ್ಮೂರು ನಿವಾಸಿಗಳು ಸೇರಿದ್ದಾರೆ. ಈ ಘಟನೆಯು ಕುವೈತ್ ಮತ್ತು ಭಾರತದ ಜನರ ದುಃಖಕ್ಕೆ ಕಾರಣವಾಗಿದೆ. ಮೃತದೇಹಗಳನ್ನು ಸ್ವದೇಶಕ್ಕೆ ತರಲು ಅಧಿಕಾರಿಗಳು ವ್ಯಾಪಕ ವ್ಯವಸ್ಥೆ ಮಾಡಿದ್ದಾರೆ. ಕೊಚ್ಚಿನ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪೊಲೀಸ್ ಪಡೆ ಮತ್ತು ಆಂಬ್ಯುಲೆನ್ಸ್‌ಗಳನ್ನು ನಿಯೋಜಿಸಲಾಗಿದೆ.
ಎರ್ನಾಕುಲಂ ರೇಂಜ್ ಡಿಐಜಿ ಮಾಹಿತಿ: ಎರ್ನಾಕುಲಂ ರೇಂಜ್ ಡಿಐಜಿ ಪುಟ್ಟ ವಿಮಲಾದಿತ್ಯ ಮಾತನಾಡಿ, "ನಾವು ಮೃತದೇಹಗಳನ್ನು ಪಡೆದುಕೊಳ್ಳಲು ಬೇಕಾದ ಎಲ್ಲಾ ವ್ಯವಸ್ಥೆಗಳನ್ನು ಮಾಡಿದ್ದೇವೆ. ನಾವು ಸಂತ್ರಸ್ತರ ಕುಟುಂಬ ಸದಸ್ಯರೊಂದಿಗೆ ಸಂಪರ್ಕ ಸಾಧಿಸಿದ್ದೇವೆ. ಮೃತದೇಹಗಳನ್ನು ಪಡೆದ ನಂತರ ಆಯಾ ಸ್ಥಳಗಳಿಗೆ ಸರಿಯಾಗಿ ಸಾಗಿಸಲಾಗುವುದು. 23 ಮೃತದೇಹಗಳು ಕೇರಳಕ್ಕೆ, 7 ತಮಿಳುನಾಡಿಗೆ ಮತ್ತು 1 ಕರ್ನಾಟಕಕ್ಕೆ ಸೇರಿದೆ. ಪ್ರತಿಯೊಂದು ದೇಹಕ್ಕೆ ಪ್ರತ್ಯೇಕ ವಾಹನವನ್ನು ಒದಗಿಸಲಾಗುವುದು" ಎಂದು ತಿಳಿಸಿದರು.
ಮಾಹಿತಿ ಪ್ರಕಾರ, ತಮಿಳುನಾಡಿನಿಂದ ಏಳು ಜನರು, ಆಂಧ್ರಪ್ರದೇಶದಿಂದ ಮೂವರು, ಬಿಹಾರ, ಒಡಿಶಾ, ಕರ್ನಾಟಕ, ಮಹಾರಾಷ್ಟ್ರ, ಉತ್ತರ ಪ್ರದೇಶ, ಜಾರ್ಖಂಡ್, ಹರಿಯಾಣ, ಪಂಜಾಬ್ ಮತ್ತು ಪಶ್ಚಿಮ ಬಂಗಾಳದಿಂದ ತಲಾ ಒಬ್ಬರು ಹಾಗೂ ಕೇರಳದ ಮೂಲದ 23 ಜನರು ಕುವೈತ್ ಅಗ್ನಿ ದುರಂತದಲ್ಲಿ ಮೃತಪಟ್ಟಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಸಂತಾಪ: ಬೆಂಕಿ ಹೇಗೆ ತಗುಲಿದೆ ಎಂಬುದರ ಕುರಿತು ತನಿಖೆ ಮಾಡಲು ಮತ್ತು ಸಂತ್ರಸ್ತ ಕುಟುಂಬಗಳಿಗೆ ಬೆಂಬಲ ನೀಡಲು ಕುವೈತ್ ಅಧಿಕಾರಿಗಳು ಅವಿರತವಾಗಿ ಶ್ರಮಿಸುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಮೃತರಿಗೆ ಸಂತಾಪ ಸೂಚಿಸಿದ್ದಾರೆ. ಮೃತರ ಕುಟುಂಬಕ್ಕೆ ಎಲ್ಲ ರೀತಿಯ ನೆರವು ನೀಡುವುದಾಗಿ ಮೋದಿ ಭರವಸೆ ನೀಡಿದ್ದಾರೆ.
ಭಾರತದ ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ಕೀರ್ತಿ ವರ್ಧನ್ ಸಿಂಗ್ ಅವರು, ಜೂನ್ 13 ರಂದು ಕುವೈತ್‌ನ ಆಸ್ಪತ್ರೆಗಳಿಗೆ ಭೇಟಿ ನೀಡಿದರು. ಮಂಗಾಫ್‌ನಲ್ಲಿನ ಅಗ್ನಿ ದುರಂತದಲ್ಲಿ ತೀವ್ರವಾಗಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿರುವ ಭಾರತೀಯ ಪ್ರಜೆಗಳೊಂದಿಗೆ ಸಚಿವ ಕೀರ್ತಿ ವರ್ಧನ್ ಸಿಂಗ್ ಸಂವಾದ ನಡೆಸಿದರು. ಸಚಿವರ ಭೇಟಿಯು ವಿದೇಶದಲ್ಲಿರುವ ಭಾರತೀಯ ಪ್ರಜೆಗಳ ಯೋಗಕ್ಷೇಮವನ್ನು ಖಾತ್ರಿಪಡಿಸುವ ದೇಶದ ಬದ್ಧತೆಯನ್ನು ಒತ್ತಿ ಹೇಳುತ್ತದೆ.
ಇದನ್ನೂ ಓದಿ: ಜಿ7 ಶೃಂಗಸಭೆ: ವಿಶ್ವ ನಾಯಕರೊಂದಿಗೆ ದ್ವಿಪಕ್ಷೀಯ ಮಾತುಕತೆಗಾಗಿ ಇಟಲಿಗೆ ಆಗಮಿಸಿದ ಪ್ರಧಾನಿ ಮೋದಿ - G7 SUMMIT MODI IN ITALY