ನವದೆಹಲಿ: ಕೋಲ್ಕತ್ತಾದ ಆರ್ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಕಿರಿಯ ಟ್ರೈನಿ ವೈದ್ಯೆಯ ಅತ್ಯಾಚಾರ ಮತ್ತು ಕೊಲೆ ಪ್ರಕರಣ ಖಂಡಿಸಿ ನಡೆಸಲಾದ ಪ್ರತಿಭಟನೆಯಿಂದಾಗಿ 23 ಮಂದಿ ಸಾವನ್ನಪ್ಪಿದ್ದಾರೆ ಎಂದು ಪಶ್ಚಿಮ ಬಂಗಾಳ ಸರ್ಕಾರ ಇಂದು ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ.
ಪಶ್ಚಿಮ ಬಂಗಾಳ ಸರ್ಕಾರದ ಪರವಾಗಿ ಹಿರಿಯ ವಕೀಲ ಕಪಿಲ್ ಸಿಬಲ್, ರಾಜ್ಯ ಆರೋಗ್ಯ ಇಲಾಖೆಯ ಪರಿಸ್ಥಿತಿಯ ವರದಿಯನ್ನು ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ನೇತೃತ್ವದ ಪೀಠದ ಮುಂದೆ ಮಂಡಿಸಿದರು.
ನ್ಯಾ.ಜೆ.ಪಿ.ಪರ್ದಿವಾಲಾ ಮತ್ತು ನ್ಯಾ.ಮನೋಜ್ ಮಿಶ್ರಾ ಅವರನ್ನೊಳಗೊಂಡ ಸಿಜೆಐ ಚಂದ್ರಚೂಡ್ ನೇತೃತ್ವದ ಪೀಠದ ಮುಂದೆ ವರದಿ ಮಂಡಿಸಿದ ಕಪಿಲ್ ಸಿಬಲ್, ಆರೋಗ್ಯ ಇಲಾಖೆಯ ವರದಿಯನ್ನು ಮಂಡಿಸಲಾಗಿದೆ. ವೈದ್ಯರ ಮುಷ್ಕರದ ಹಿನ್ನೆಲೆಯಲ್ಲಿ 23 ಮಂದಿ ಸಾವನ್ನಪ್ಪಿದ್ದಾರೆ ಎಂದು ತಿಳಿಸಿದರು.
ಹೊಸ ತನಿಖಾ ವರದಿ ಸಲ್ಲಿಸಲು ಸುಪ್ರೀಂ ಕೋರ್ಟ್ ಸೂಚನೆ: ಪ್ರಕರಣದ ಸ್ಥಿತಿಗತಿ ವರದಿಯನ್ನು ಸಿಬಿಐ ಸಲ್ಲಿಸಿದೆ. ಆದರೆ, ಹೊಸ ವರದಿ ಸಲ್ಲಿಸುವಂತೆ ನಾವು ಸಿಬಿಐಗೆ ನಿರ್ದೇಶಿಸುತ್ತೇವೆ. ಸಿಬಿಐ ತನಿಖೆ ಸಂಬಂಧ ನಾವು ಯಾವುದೇ ಮಾರ್ಗದರ್ಶನ ನೀಡುವುದಿಲ್ಲ. ಆದರೆ ಹೊಸ ವರದಿಯನ್ನು ಸೆಪ್ಟೆಂಬರ್ 17ರೊಳಗೆ ಸಲ್ಲಿಸಬೇಕು ಎಂದು ತಾಕೀತು ಮಾಡಿತು.
ಸಿಬಿಐ ಪರವಾಗಿ ಪೀಠದ ಮುಂದೆ ಹಾಜರಾಗಿದ್ದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, "ನಮ್ಮ ಬಳಿ ವಿಧಿ ವಿಜ್ಞಾನ ಪರೀಕ್ಷೆಯ ವರದಿ ಇದೆ. ಸಂತ್ರಸ್ತೆ ಅರೆಬೆತ್ತಲೆ ಪರಿಸ್ಥಿತಿಯಲ್ಲಿ ಪತ್ತೆಯಾಗಿರುವುದನ್ನು ನಾವು ಒಪ್ಪುತ್ತೇವೆ. ಆಕೆಯ ದೇಹದ ಮೇಲೆ ಗಾಯದ ಕಲೆಗಳಿದ್ದವು ಎಂದು ರಾಜ್ಯದ ಅಧಿಕಾರಿಗಳು ಘಟನಾ ಸ್ಥಳದ ಮಾದರಿಗಳನ್ನು ಪಶ್ಚಿಮ ಬಂಗಾಳದ ಸೆಂಟ್ರಲ್ ಫಾರೆನ್ಸಿಕ್ ಲ್ಯಾಬ್ಗೆ ಕಳುಹಿಸಿದ್ದಾರೆ. ಇದೀಗ ಸಿಬಿಐ ಈ ಮಾದರಿಯನ್ನು ದೆಹಲಿಯ ಏಮ್ಸ್ಗೆ ಕಳುಹಿಸಲು ನಿರ್ಧರಿಸಿದೆ" ಎಂದು ತಿಳಿಸಿದರು.
ಕೋಲ್ಕತ್ತಾ ಪೊಲೀಸರು ಪ್ರಕರಣ ದಾಖಲಿಸುವಲ್ಲಿ ವಿಳಂಬಿಸಿದ್ದಾರೆ ಎಂದು ಆಗಸ್ಟ್ 22ರಂದು ಸುಪ್ರೀಂ ಕೋರ್ಟ್ ಕಿಡಿಕಾರಿತ್ತು. ಇದನ್ನು ತೀವ್ರ ಗೊಂದಲಕಾರಿ ನಡೆ ಎಂದಿತ್ತು. ಅಲ್ಲದೇ, ಪ್ರಕರಣದ ಕುರಿತ ತನಿಖೆಗೆ ಸುಪ್ರೀಂ ಕೋರ್ಟ್ 10 ಸದಸ್ಯರ ನ್ಯಾಷನಲ್ ಟಾಸ್ಕ್ ಫೋರ್ಸ್ (ಎನ್ಟಿಎಫ್) ರಚಿಸಿ, ಇತರೆ ಆರೋಗ್ಯ ವೃತ್ತಿಪರರು ಹಾಗೂ ವೈದ್ಯರ ಸುರಕ್ಷೆ ಮತ್ತು ರಕ್ಷಣೆ ಭರವಸೆಗೆ ಪ್ರೋಟೋಕಾಲ್ ರೂಪಿಸಿತ್ತು.
ಕೋಲ್ಕತ್ತಾ ಘಟನೆಯನ್ನು ಭಯಾನಕ ಎಂದ ಸುಪ್ರೀಂ, ಈ ಪ್ರಕರಣದಲ್ಲಿ ಎಫ್ಐಆರ್ ದಾಖಲಿಸಲು ವಿಳಂಬ ಮಾಡಿದ ರಾಜ್ಯ ಸರ್ಕಾರದ ನಡೆಯನ್ನು ಟೀಕಿಸಿತ್ತು. ಅಲ್ಲದೇ ಈ ತನಿಖೆಯನ್ನು ಕೋಲ್ಕತ್ತಾ ಪೊಲೀಸರಿಂದ ಸಿಬಿಐಗೆ ಒಪ್ಪಿಸುವಂತೆ ಸೂಚಿಸಿತ್ತು. ಆಗಸ್ಟ್ 14ರಿಂದ ಸಿಬಿಐ ಪ್ರಕರಣದ ತನಿಖೆ ನಡೆಸುತ್ತಿದೆ.
ಇದನ್ನೂ ಓದಿ: ಅತ್ಯಾಚಾರ ವಿರೋಧಿ ಮಸೂದೆಯ ಜೊತೆಗೆ ತಾಂತ್ರಿಕ ವರದಿ ಕಳುಹಿಸಿಲ್ಲ: ಸಿಎಂ ಮಮತಾ ವಿರುದ್ದ ರಾಜ್ಯಪಾಲ ಕಿಡಿ