ನವದೆಹಲಿ: ''ಹಮಾಸ್‌ನೊಂದಿಗಿನ ಯುದ್ಧದ ನಡುವೆ ಸಾವಿರಾರು ಭಾರತೀಯರು ಇಸ್ರೇಲ್‌ನಲ್ಲಿ ಉದ್ಯೋಗ ಹುಡುಕುತ್ತಿದ್ದಾರೆ'' ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.
"ಗ್ರಾಮೀಣ ಭಾಗದಲ್ಲಿ ತೀವ್ರ ಉದ್ಯೋಗ ಸಮಸ್ಯೆ ಇದೆ. ಅದರಲ್ಲೂ ಪ್ರಮುಖವಾಗಿ ಯುದ್ಧದ ಸಮಯದಲ್ಲಿ ಭಾರತೀಯರು ತಮ್ಮ ಪ್ರಾಣ ಪಣಕ್ಕಿಟ್ಟು ಇಸ್ರೇಲ್‌ನಲ್ಲಿ ಉದ್ಯೋಗ ಹುಡುಕಾಡುತ್ತಿದ್ದಾರೆ. "2022-2023ರಲ್ಲಿ ಗ್ರಾಮೀಣ ಭಾರತದಲ್ಲಿ ಪುರುಷರ ದೈನಂದಿನ ವೇತನ 212 ರೂ.ಗಳಾಗಿದ್ದರೆ, 2014 ರಲ್ಲಿ 220 ರೂ.ಗಳಷ್ಟಿತ್ತು'' ಎಂದು ಪ್ರಧಾನಿ ನರೇಂದ್ರ ಮೋದಿಯವರ ಸರಕಾರದ ವಿರುದ್ಧ ಕಟುಟೀಕೆ ಮಾಡಿದ್ದಾರೆ.
"ಕಳೆದ 5 ವರ್ಷಗಳಲ್ಲಿ ಮೋದಿ ಸರ್ಕಾರದ ಅಡಿಯಲ್ಲಿ ನಿಜವಾದ ಗ್ರಾಮೀಣ ವೇತನದ ಬೆಳವಣಿಗೆ ದರ ಕೃಷಿ (-0.6%) ಮತ್ತು ಕೃಷಿಯೇತರ (-1.4%) ಎರಡು ಋಣಾತ್ಮಕವಾಗಿದೆ. 2022-23ರಲ್ಲಿ ಪುರುಷರಿಗೆ ಗ್ರಾಮೀಣ ಭಾರತದಲ್ಲಿ ದೈನಂದಿನ ವೇತನ 212 ರೂ. ಆಗಿದೆ. ಇದು 2014ರಲ್ಲಿ 220 ರೂ.ಕ್ಕಿಂತ ಕಡಿಮೆ" ಎಂದು ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಖರ್ಗೆ ಬರೆದುಕೊಂಡಿದ್ದಾರೆ.
ಗ್ರಾಮೀಣ ನಿರುದ್ಯೋಗ: "ಔಪಚಾರಿಕ ಉದ್ಯೋಗ ಸೃಷ್ಟಿಯು 30 ತಿಂಗಳ ಕನಿಷ್ಠ ಮಟ್ಟಕ್ಕೆ ಕುಸಿದಿದೆ. ಇದು ವಿದ್ಯಾವಂತ ಯುವಕರಿಗೆ ಉದ್ಯೋಗವಿಲ್ಲ ಎಂಬುದನ್ನು ಸೂಚಿಸುತ್ತದೆ" ಎಂದು ಅವರು ಒತ್ತಿ ಹೇಳಿದ್ದಾರೆ. "ಮನರೇಗಾ ಅಡಿಯಲ್ಲಿ ಕೆಲಸಕ್ಕಾಗಿ ಬೇಡಿಕೆಯು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಮೋದಿ ಸರ್ಕಾರವು 2023-24ರ ಬಜೆಟ್‌ನಲ್ಲಿ ತನ್ನ ನಿಧಿಯನ್ನು ಕಡಿತಗೊಳಿಸಿತ್ತು. ಆದರೆ, ಹೆಚ್ಚಿನ ಗ್ರಾಮೀಣ ನಿರುದ್ಯೋಗದ ಕಾರಣದಿಂದಾಗಿ 28,000 ಕೋಟಿ ರೂ.ಗೂ ಹೆಚ್ಚು ಮೀಸಲಿಡಲು ಒತ್ತಾಯಿಸಲಾಯಿತು'' ಎಂದು ಹೇಳಿದ್ದಾರೆ.
"14ನೇ ಹಣಕಾಸು ಆಯೋಗದಲ್ಲಿ (2015-2020) ಭರವಸೆ ನೀಡಿದ್ದಕ್ಕಿಂತ ಪಂಚಾಯತ್‌ಗಳಿಗೆ ನಿಜವಾದ ಹಣ ವಿತರಣೆ ಶೇ.10.4ರಷ್ಟು ಕಡಿಮೆಯಾಗಿದೆ. ಇದೇ ಪ್ರವೃತ್ತಿ ಮುಂದುವರೆದಿದೆ" ಎಂದಿರುವ ಅವರು, ''ಫಾಸ್ಟ್-ಮೂವಿಂಗ್ ಗ್ರಾಹಕ ಸರಕುಗಳ (ಎಫ್‌ಎಂಸಿಜಿ) ಮಾರಾಟವು 2023ರಲ್ಲಿ ಯಾವುದೇ ಹೆಚ್ಚಳ ಕಂಡಿಲ್ಲ'' ಎಂದು ತಿಳಿಸಿದ್ದಾರೆ. ಖಾಸಗಿ ಬಳಕೆಯ ವೆಚ್ಚದಲ್ಲಿನ ಬೆಳವಣಿಗೆಯು ಉದ್ಯೋಗಗಳನ್ನು ಸೃಷ್ಟಿಸುವ ವೇಗವರ್ಧಕವಾಗಿದೆ. ಇದು 21 ವರ್ಷಗಳಲ್ಲಿ ಅತೀ ಕಡಿಮೆಯಾಗಿದೆ. 2018-19ರಿಂದ 2022-23ರ ನಡುವೆ, ಸಾರ್ವಜನಿಕರಿಂದ ವೈಯಕ್ತಿಕ ತೆರಿಗೆ ಸಂಗ್ರಹವು ಶೇ.50.55 ರಷ್ಟು ಹೆಚ್ಚಾಗಿದೆ. ಆದರೆ ಕಾರ್ಪೊರೇಟ್ ತೆರಿಗೆ ಸಂಗ್ರಹ ಕೇವಲ ಶೇ.2.72ರಷ್ಟು ಹೆಚ್ಚಾಗಿದೆ. ಇದು ನಿರಂತರವಾಗಿ ಬೆಳೆಯುತ್ತಿರುವ ಆರ್ಥಿಕ ಅಸಮಾನತೆಯನ್ನು ತೋರಿಸುತ್ತದೆ ಎಂದಿದ್ದಾರೆ. ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ, ಈ ವರ್ಷ ತರಕಾರಿಗಳ ಬೆಲೆಗಳು ಶೇ.60ರಷ್ಟು ಏರಿಕೆಯಾಗಿದ್ದು, ಇದು ಜನರಿಗೆ ಹೆಚ್ಚು ಹೊರೆಯಾಗಿದೆ" ಎಂದು ಕಿಡಿಕಾರಿದ್ದಾರೆ.
ಮೋದಿ ಸರ್ಕಾರದ ಅಂತಿಮ ಬಜೆಟ್ ಕೆಲವೇ ದಿನಗಳಲ್ಲಿ ಬರಲಿದೆ. ಅಧಿಕಾರದ ಅಮಲು ಹೊಂದಿರುವ ದುರಹಂಕಾರಿ ಮೋದಿ ಸರ್ಕಾರವು ಜನರಿಗೆ ಉಂಟುಮಾಡಿದ ದುಃಖಗಳಿಗೆ ಎಂದಾದರೂ ಪ್ರಾಯಶ್ಚಿತ್ತವಿದೆಯೇ?. ಕಳೆದ ವರ್ಷ ಡಿಸೆಂಬರ್‌ನಲ್ಲಿ, ಉತ್ತರ ಪ್ರದೇಶ ಮತ್ತು ಹರಿಯಾಣ ಸರ್ಕಾರಗಳು ಇಸ್ರೇಲ್‌ನಲ್ಲಿ ಉದ್ಯೋಗಾವಕಾಶಕ್ಕಾಗಿ ಕಟ್ಟಡ ಕಾರ್ಮಿಕರಿಂದ ಅರ್ಜಿಗಳನ್ನು ಆಹ್ವಾನಿಸಿವೆ. ಸಂಘರ್ಷ ಪೀಡಿತ ರಾಷ್ಟ್ರಕ್ಕೆ ಕನಿಷ್ಠ 10,000 ಕಾರ್ಮಿಕರನ್ನು ಕಳುಹಿಸಲು ಸರ್ಕಾರ ಯೋಜಿಸಿದೆ. ಕಾರ್ಮಿಕರನ್ನು ರಾಷ್ಟ್ರೀಯ ಕೌಶಲ್ಯ ಅಭಿವೃದ್ಧಿ ನಿಗಮ (NSDC) ಆಯ್ಕೆ ಮಾಡುತ್ತದೆ. ಈ ತಿಂಗಳ ಆರಂಭದಲ್ಲಿ, ಭಾರತವು ಇಸ್ರೇಲ್‌ನೊಂದಿಗೆ ಕಾರ್ಮಿಕ ಚಲನಶೀಲ ಪಾಲುದಾರಿಕೆಯನ್ನು ಹೊಂದಿದೆ. ಹರಿಯಾಣ ಮತ್ತು ಉತ್ತರ ಪ್ರದೇಶವು ಕಾರ್ಮಿಕರಿಗಾಗಿ ಇಸ್ರೇಲ್‌ಗೆ ಪ್ರಯಾಣಿಸಲು ಬಯಸುವ ಭಾರತೀಯರನ್ನು ಪರೀಕ್ಷಿಸಲು ಪ್ರಾರಂಭಿಸಿರುವುದರಿಂದ ಸುರಕ್ಷಿತ ಮತ್ತು ಕಾನೂನು ಚಲನಶೀಲತೆಗೆ ಭಾರತ ಬದ್ಧವಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಅಧಿಕೃತ ವಕ್ತಾರ ರಣಧೀರ್ ಜೈಸ್ವಾಲ್ ಹೇಳಿದ್ದಾರೆ.
"ನಾವು ಪ್ರಪಂಚದಾದ್ಯಂತ ಹಲವಾರು ದೇಶಗಳೊಂದಿಗೆ ಕಾರ್ಮಿಕ ಚಲನಶೀಲ ಪಾಲುದಾರಿಕೆಯನ್ನು ಹೊಂದಿದ್ದೇವೆ. ನಾವು ಈಗ ಇಸ್ರೇಲ್ ಜೊತೆಗೆ ಒಪ್ಪಂದ ಹೊಂದಿದ್ದೇವೆ. ಸಂಘರ್ಷವು ಸ್ಫೋಟಗೊಳ್ಳುವ ಮೊದಲೇ ಒಪ್ಪಂದವು ಪ್ರಾರಂಭವಾಯಿತು. ಒಪ್ಪಂದದ ಹಿಂದಿನ ಕಲ್ಪನೆಯು ಆ ದೇಶಕ್ಕೆ ವಲಸೆಯನ್ನು ನಿಯಂತ್ರಿಸುವ ಸಾಂಸ್ಥಿಕ ಕಾರ್ಯವಿಧಾನವನ್ನು ಜಾರಿಗೆ ತರುವುದಾಗಿತ್ತು" ಎಂದು ತಿಳಿಸಿದರು.
"ಇಸ್ರೇಲ್‌ನಲ್ಲಿ ಹೆಚ್ಚಿನ ಸಂಖ್ಯೆಯ ಭಾರತೀಯರು ಈಗಾಗಲೇ ಕೆಲಸ ಮಾಡುತ್ತಿದ್ದಾರೆ ಮತ್ತು ನಿಯಂತ್ರಿತ ವಲಸೆಯಿದೆ. ಅಲ್ಲಿಗೆ ಹೋಗುವ ಜನರ ಹಕ್ಕುಗಳನ್ನು ರಕ್ಷಿಸಲಾಗಿದೆ ಎಂದು ಖಚಿತಪಡಿಸಿಕೊಳ್ಳಲು ನಾವು ಬಯಸುತ್ತೇವೆ" ಎಂದು ಎಂಇಎ ವಕ್ತಾರರು ಮಾಹಿತಿ ನೀಡಿದರು.
ಇದನ್ನೂ ಓದಿ: ಲೋಕಸಭೆ ಚುನಾವಣೆ: ಮಂಡ್ಯ ಟಿಕೆಟ್ ಅಂತಿಮವಾಗಿಲ್ಲ-ಯಡಿಯೂರಪ್ಪ