ತ್ರಿಶೂರ್(ಕೇರಳ): ಸಿಪಿಐ (ಎಂ) ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಪ್ರಧಾನಿ ನರೇಂದ್ರ ಮೋದಿ, ಕೇರಳದ ಎಡರಂಗ ಸರ್ಕಾರವು ಜನರಿಗೆ ನಿರುಪಯುಕ್ತ ಸರ್ಕಾರವಾಗಿದೆ ಎಂದು ತಿವಿದರು. ಕೇರಳದಲ್ಲಿ ಇಂದು ಬಿಜೆಪಿ ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡಿದ ಪ್ರಧಾನಿ, ಬಿಜೆಪಿ ಪಕ್ಷವು ಲೋಕಸಭಾ ಚುನಾವಣೆಯ ನಂತರ ಸಂಸತ್ತಿನಲ್ಲಿ ಕೇರಳದ ಧ್ವನಿಯಾಗಲಿದೆ ಎಂದರು.
"ಜನರಿಗೆ ಉಪಯೋಗವಿಲ್ಲದ ಎಡರಂಗ ಸರ್ಕಾರವು ಕೇರಳದಲ್ಲಿ ಕೇಂದ್ರ ಸರ್ಕಾರದ ಅಭಿವೃದ್ಧಿ ಯೋಜನೆಗಳಿಗೆ ಅಡ್ಡಿಯುಂಟು ಮಾಡುತ್ತಿದೆ. ಎಡಪಕ್ಷವು ತಾನು ಈ ಹಿಂದೆ ಅಧಿಕಾರದಲ್ಲಿದ್ದ ರಾಜ್ಯಗಳನ್ನು ಹಾಳು ಮಾಡಿದಂತೆ ಈಗ ಕೇರಳವನ್ನೂ ಹಾಳು ಮಾಡಲಿದೆ" ಎಂದು ಪ್ರಧಾನಿ ಟೀಕಿಸಿದರು.
ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್ಡಿಎ ಅಭ್ಯರ್ಥಿಗಳ ಪರ ಪ್ರಚಾರ ನಡೆಸಿದ ಅವರು, ಕೇರಳದಲ್ಲಿ ಈ ವರ್ಷವು ಪ್ರಗತಿಯ ವರ್ಷವಾಗಲಿದೆ ಎಂದು ಹೇಳಿದರು. ಇದೇ ವೇಳೆ ಭಾನುವಾರ ಬಿಡುಗಡೆಯಾದ ಬಿಜೆಪಿ ಪ್ರಣಾಳಿಕೆಯಲ್ಲಿ ಉಲ್ಲೇಖಿಸಲಾದ ವಿವಿಧ ಭರವಸೆಗಳು ಮತ್ತು ಅಭಿವೃದ್ಧಿ ಕಾರ್ಯಕ್ರಮಗಳನ್ನು ಉಲ್ಲೇಖಿಸಿದರು.
ಎನ್ಡಿಎ ಸರ್ಕಾರ ಮೂರನೇ ಬಾರಿಗೆ ಅಧಿಕಾರಕ್ಕೆ ಬಂದರೆ ಅಹಮದಾಬಾದ್ ಮತ್ತು ಮುಂಬೈ ನಡುವಿನ ಬುಲೆಟ್ ರೈಲಿನ ಮಾದರಿಯಲ್ಲಿ ಯೋಜನೆ ಜಾರಿಗೆ ಉತ್ತರ, ಪೂರ್ವ ಮತ್ತು ದಕ್ಷಿಣ ಭಾರತದಲ್ಲಿ ಸಮೀಕ್ಷೆ ಕಾರ್ಯವನ್ನು ಪ್ರಾರಂಭಿಸುವುದಾಗಿ ಪ್ರಧಾನಿ ಭರವಸೆ ನೀಡಿದರು. ಕಾಂಗ್ರೆಸ್ ವಿಶ್ವದಲ್ಲಿ ಭಾರತವನ್ನು ದುರ್ಬಲ ರಾಷ್ಟ್ರವಾಗಿ ಬಿಂಬಿಸಿತ್ತು, ಆದರೆ ಬಿಜೆಪಿ ದೇಶವನ್ನು ಬಲಶಾಲಿಯಾದ ರಾಷ್ಟ್ರವಾಗಿ ನಿರ್ಮಿಸಿದೆ ಎಂದು ಅವರು ತಿಳಿಸಿದರು.
ಕಳೆದ 10 ವರ್ಷಗಳ ಎನ್ಡಿಎ ಆಡಳಿತದಲ್ಲಿ ದೇಶದಲ್ಲಾದ ಬದಲಾವಣೆಗಳು ಕೇವಲ ಟ್ರೈಲರ್ ಮಾತ್ರ. ಕೇರಳ ಮತ್ತು ಇಡೀ ಭಾರತದಲ್ಲಿ ಸಾಧಿಸುವುದು ಇನ್ನೂ ಬಹಳಷ್ಟು ಬಾಕಿ ಇದೆ ಎಂದು ಮೋದಿ ಹೇಳಿದರು. ಕರುವನೂರ್ ಸಹಕಾರಿ ಬ್ಯಾಂಕ್ ಹಗರಣವನ್ನು ಉಲ್ಲೇಖಿಸಿದ ಪ್ರಧಾನಿ ಎಡಪಕ್ಷವು ಬಡವರ ಹಣವನ್ನು ಲೂಟಿ ಮಾಡುತ್ತಿದೆ ರಾಜ್ಯದ ಸಿಪಿಐ (ಎಂ) ನೇತೃತ್ವದ ಸರ್ಕಾರದ ಮೇಲೆ ದಾಳಿ ನಡೆಸಿದರು.
ಇದು ರಾಜ್ಯಕ್ಕೆ ಮೋದಿ ಅವರ ಆರನೇ ಭೇಟಿಯಾಗಿದೆ. ಅವರು ಈ ಹಿಂದೆ ಮಾರ್ಚ್ 19 ರಂದು ಕೇರಳದ ಪಾಲಕ್ಕಾಡ್ ಜಿಲ್ಲೆಯಲ್ಲಿ ಬೃಹತ್ ರೋಡ್ ಶೋ ನಡೆಸಿದ್ದರು. ಮಾರ್ಚ್ 15 ರಂದು ಪಥನಂತಿಟ್ಟ ಪಟ್ಟಣದಲ್ಲಿ ಸಾರ್ವಜನಿಕ ಸಭೆಯಲ್ಲಿ ಅವರು ಭಾಗವಹಿಸಿದ್ದರು. ಇದಕ್ಕೂ ಮೊದಲು ಅವರು ಜನವರಿಯಲ್ಲಿ ಎರಡು ಬಾರಿ ಮತ್ತು ಫೆಬ್ರವರಿಯಲ್ಲಿ ಒಮ್ಮೆ ರಾಜ್ಯಕ್ಕೆ ಭೇಟಿ ನೀಡಿದ್ದರು.
ಕೇರಳದ 20 ಲೋಕಸಭಾ ಕ್ಷೇತ್ರಗಳಿಗೆ ಏಪ್ರಿಲ್ 26 ರಂದು ಮತದಾನ ನಡೆಯಲಿದೆ.
ಇದನ್ನೂ ಓದಿ : ಭವ್ಯ ರಾಮ ಮಂದಿರದಲ್ಲಿ ಮೊದಲ ರಾಮನವಮಿ: 4 ದಿನ ಗಣ್ಯರ ವಿಶೇಷ ದರ್ಶನ, ಆರತಿ ಸೇವೆ ರದ್ದು - RAM NAVAMI