ನವದೆಹಲಿ: ಕೇರಳದ ವಯನಾಡ್ ಜಿಲ್ಲೆಯಲ್ಲಿನ ಭೂಕುಸಿತ ಪೀಡಿತ ಪ್ರದೇಶದಲ್ಲಿ ರಕ್ಷಣಾ ಕಾರ್ಯಾಚರಣೆ ಎರಡನೇ ದಿನವೂ ಮುಂದುವರೆದಿದೆ. ಭಾರತೀಯ ಸೇನೆ, ಎನ್ಡಿಆರ್ಎಫ್ ಮತ್ತು ಎಸ್ಡಿಆರ್ಎಫ್ ಹಾಗು ತುರ್ತು ನಿರ್ವಹಣಾ ಪಡೆಗಳು ಹಗಲು-ರಾತ್ರಿ ಪರಿಹಾರ ಕಾರ್ಯದಲ್ಲಿ ತೊಡಗಿಸಿಕೊಂಡಿವೆ. ಇದೀಗ ಭಾರತೀಯ ಕೋಸ್ಟ್ ಗಾರ್ಡ್‌ನಿಂದ ಅಪಾರ ಪ್ರಮಾಣದ ಇಂಜಿನಿಯರಿಂಗ್ ಉಪಕರಣಗಳು, ರಕ್ಷಣಾ ಶ್ವಾನ ದಳ, ವಿಪತ್ತು ಪರಿಹಾರ ತಂಡಗಳನ್ನೂ ರವಾನಿಸಲಾಗಿದೆ.
ವಯನಾಡ್ ಜಿಲ್ಲೆಯ ಗುಡ್ಡಗಾಡು ಪ್ರದೇಶಗಳಲ್ಲಿ ಭಾರೀ ಮಳೆಯಿಂದಾಗಿ ಮಂಗಳವಾರ ಸರಣಿ ಭೂಕುಸಿತಗಳು ಸಂಭವಿಸಿವೆ. ಇದುವರೆಗೆ ಕನಿಷ್ಠ 143 ಜನರು ಸಾವನ್ನಪ್ಪಿದ್ದಾರೆ. 128 ಮಂದಿ ಗಾಯಗೊಂಡಿದ್ದಾರೆ. ಮಣ್ಣಿನ ಅವಶೇಷಗಳಡಿ ಇನ್ನೂ ಹಲವರು ಸಿಲುಕಿರುವ ಶಂಕೆ ವ್ಯಕ್ತವಾಗಿದೆ. ರಕ್ಷಣಾ ಸಿಬ್ಬಂದಿ ನಿರಂತರವಾಗಿ ಜನರ ರಕ್ಷಣೆ, ಸ್ಥಳಾಂತರ ಕಾರ್ಯದಲ್ಲಿ ಸಕ್ರಿಯರಾಗಿದ್ದಾರೆ.
ಮಂಗಳವಾರ ಬೆಳಗ್ಗೆ ದುರಂತದ ವರದಿ ಆಗುತ್ತಿದ್ದಂತೆ ಭಾರತೀಯ ಸಶಸ್ತ್ರ ಪಡೆಗಳು ತಕ್ಷಣವೇ ಕಾರ್ಯಾಚರಣೆಗೆ ಇಳಿದಿವೆ. ರಕ್ಷಣಾ ಮತ್ತು ಪರಿಹಾರಕ್ಕಾಗಿ 300 ಸೇನಾ ಸಿಬ್ಬಂದಿಯನ್ನು ಕೂಡಲೇ ರವಾನಿಸಲಾಗಿತ್ತು. ನಂತರ ಭೂಸೇನೆ, ನೌಕಾಪಡೆ, ವಾಯುಪಡೆಯು ಹೆಚ್ಚುವರಿ ಸಿಬ್ಬಂದಿ ಕುಸಿತಪೀಡಿತ ಪ್ರದೇಶಗಳಿಗೆ ತಲುಪಿದ್ದಾರೆ. ಹೆಲಿಕಾಪ್ಟರ್ಗಳನ್ನೂ ನಿಯೋಜಿಸಲಾಗಿದೆ.
VIDEO | Wayanad landslides update: Heavy engineering equipment and other bridging equipment being carried to the spot where rescue operations are currently underway.
— Press Trust of India (@PTI_News) July 31, 2024
Extremely heavy rain triggered a series of landslides in the hilly areas of Kerala's #Wayanad district early on… pic.twitter.com/4fPiAKIjoq
ಇಂದು ಮತ್ತಷ್ಟು ಹೆಚ್ಚುವರಿ ರಕ್ಷಣಾ ಪಡೆಗಳು, ಬೃಹತ್ ಇಂಜಿನಿಯರಿಂಗ್ ಉಪಕರಣಗಳು, ರಕ್ಷಣಾ ಶ್ವಾನ ತಂಡಗಳು ಮತ್ತು ಇತರ ಅಗತ್ಯ ಪರಿಹಾರ ಸಾಮಗ್ರಿಗಳನ್ನು ತಿರುವನಂತಪುರ, ಬೆಂಗಳೂರು ಮತ್ತು ದೆಹಲಿಯಿಂದ ಸರ್ವಿಸ್ ಏರ್‌ಕ್ರಾಫ್ಟ್‌ಗಳ ಮೂಲಕ ವಯನಾಡ್ಗೆ ಸಾಗಿಸಲಾಗಿದೆ. ಏತನ್ಮಧ್ಯೆ, ಭಾರತೀಯ ಕೋಸ್ಟ್ ಗಾರ್ಡ್ (ಐಸಿಜಿ)ಯ ಮಾಹೆಯ ಕೇಂದ್ರ ಕಚೇರಿ ಮತ್ತು ಬೇಪೋರ್‌ನ ಕಚೇರಿಯಿಂದ ವಿಪತ್ತು ಪರಿಹಾರ ತಂಡ (ಡಿಆರ್‌ಟಿ)ಗಳನ್ನು ರವಾನಿಸಲಾಗಿದೆ ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ.
ಸೇನೆ ಕೈಗೊಂಡಿರುವ ರಕ್ಷಣಾ ಮತ್ತು ಪರಿಹಾರ ಕಾರ್ಯಗಳ ಕುರಿತಂತೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಸೇನಾ ಮುಖ್ಯಸ್ಥ ಜನರಲ್ ಉಪೇಂದ್ರ ದ್ವಿವೇದಿ ಅವರೊಂದಿಗೆ ಸಮಾಲೋಚನೆ ನಡೆಸಿದ್ದಾರೆ. ನುರಿತ ಐಸಿಜಿ ಸಿಬ್ಬಂದಿ ಮತ್ತು ವೈದ್ಯಕೀಯ ತಂಡವನ್ನು ಒಳಗೊಂಡಿರುವ ಡಿಆರ್‌ಟಿ ತಂಡಗಳನ್ನೂ ಸಜ್ಜುಗೊಳಿಸಲಾಗಿದೆ. 690 ಅಡಿ ಬೈಲಿ ಸೇತುವೆ ನಿಯೋಜನೆಗೆ ರಾಜ್ಯ ಸರ್ಕಾರ ಮನವಿ ಮಾಡಿದೆ. ಪ್ರಸ್ತುತ, ಸೇತುವೆಯ 330 ಅಡಿವರೆಗೆ ಬೆಂಗಳೂರಿನ ಮದ್ರಾಸ್ ಇಂಜಿನಿಯರ್ ಗ್ರೂಪ್ ಸೆಂಟರ್‌ನಿಂದ ರಸ್ತೆಯ ಮೂಲಕ ಸ್ಥಳಾಂತರಿಸಲಾಗುತ್ತಿದೆ. ಉಳಿದ ಭಾಗಗಳನ್ನು ದೆಹಲಿ ಕಂಟೋನ್ಮೆಂಟ್‌ನಿಂದ ಏರ್‌ಲಿಫ್ಟ್ ಮಾಡಲಾಗುತ್ತಿದೆ. ಒಂದು 110 ಅಡಿ ಬೈಲಿ ಸೇತುವೆಯನ್ನು ದೆಹಲಿಯಿಂದ ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದೆ.
ಇದಲ್ಲದೇ, ರಬ್ಬರ್ ದೋಣಿಗಳು, ಪಂಪ್‌ಗಳು, ಸುರಕ್ಷತೆಗಾಗಿ ಲೈಫ್ ಜಾಕೆಟ್‌ಗಳು, ಪ್ರತಿಕೂಲ ಹವಾಮಾನದಲ್ಲಿ ಸಿಬ್ಬಂದಿ ರಕ್ಷಣೆಗಾಗಿ ರೈನ್‌ಕೋಟ್‌ಗಳು ಮತ್ತು ಗಮ್ ಬೂಟ್‌ಗಳು ಮತ್ತು ಇತರ ಭೂ ತೆರವು ಉಪಕರಣಗಳಂತಹ ಅಗತ್ಯ ವಿಪತ್ತು ಪರಿಹಾರ ಸಾಮಗ್ರಿಗಳನ್ನು ತಂಡಗಳಿಗೆ ಒದಗಿಸಲಾಗಿದೆ. ಸಂತ್ರಸ್ತರಿಗೆ ಆಹಾರ ಸಾಮಗ್ರಿಗಳು, ಕುಡಿಯುವ ನೀರು ಮತ್ತು ಇತರ ಅಗತ್ಯ ಸರಬರಾಜುಗಳನ್ನೂ ಸಹ ರವಾನಿಸಲಾಗಿದೆ ಎಂದು ಮಾಹಿತಿ ನೀಡಿದೆ.
ಇದನ್ನೂ ಓದಿ: ವಯನಾಡ್ ಭೂಕುಸಿತ: ಮೃತರ ಸಂಖ್ಯೆ 143ಕ್ಕೇರಿಕೆ, ತಾತ್ಕಾಲಿಕ ಸೇತುವೆ ಕಟ್ಟಿ 1 ಸಾವಿರ ಜನರ ರಕ್ಷಿಸಿದ ಸೇನೆ