ಕೊಚ್ಚಿ, ಕೇರಳ: 2022ರ ಜುಲೈನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಾಷಣ ಮಾಡುವಾಗ ಕೇರಳ ಮೀನುಗಾರಿಕಾ ಸಚಿವ ಸಾಜಿ ಚೆರಿಯನ್ ಸಂವಿಧಾನಕ್ಕೆ ಅವಮಾನ ಮಾಡಿದ್ದಾರೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಹೆಚ್ಚಿನ ತನಿಖೆ ನಡೆಸಬೇಕು ಎಂದು ಕೇರಳ ಉಚ್ಚ ನ್ಯಾಯಾಲಯ ಗುರುವಾರ ಆದೇಶಿಸಿದೆ. ಸಚಿವರಿಗೆ ಕ್ಲೀನ್ ಚಿಟ್ ನೀಡಿದ ಪೊಲೀಸರ ಅಂತಿಮ ವರದಿ ಮತ್ತು ಅದನ್ನು ಅಂಗೀಕರಿಸಿದ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಆದೇಶವನ್ನು ಹೈಕೋರ್ಟ್ ತಳ್ಳಿಹಾಕಿದೆ.
ಹೆಚ್ಚಿನ ತನಿಖೆ ನಡೆಸುವಂತೆ ಹೈಕೋರ್ಟ್ ಆದೇಶ: ಆರಂಭಿಕ ತನಿಖೆಯಲ್ಲಿ ನ್ಯೂನತೆಗಳಿವೆ ಎಂದು ಹೇಳಿರುವ ಹೈಕೋರ್ಟ್, ಪೊಲೀಸರ ಅಪರಾಧ ವಿಭಾಗದಿಂದ ಹೆಚ್ಚಿನ ತನಿಖೆ ನಡೆಸುವಂತೆ ನಿರ್ದೇಶಿಸಿದೆ. ಈ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸುವಂತೆ ಕೋರಿ ಸಲ್ಲಿಸಿದ್ದ ಮನವಿಯ ಮೇರೆಗೆ ಹೈಕೋರ್ಟ್ ಈ ಆದೇಶ ನೀಡಿದೆ.
ತೀರ್ಪಿನ ನಂತರ ಮಾತನಾಡಿದ ಸಚಿವ ಸಾಜಿ, ಈ ವಿಷಯವು ತಮ್ಮನ್ನು ಒಳಗೊಂಡಿರುವುದರಿಂದ ಹೈಕೋರ್ಟ್ ನೈಸರ್ಗಿಕ ನ್ಯಾಯದ ಭಾಗವಾಗಿ ತಮ್ಮ ವಾದವನ್ನೂ ಕೇಳಬೇಕಿತ್ತು ಎಂದು ಹೇಳಿದರು. ಹೈಕೋರ್ಟ್ ನನ್ನ ವಾದವನ್ನು ಆಲಿಸದ ಕಾರಣ ಅದರ ಆದೇಶವನ್ನು ಪರಿಶೀಲಿಸಿದ ನಂತರ ನಾನು ಮುಂದಿನ ಕ್ರಮಗಳನ್ನು ತೆಗೆದುಕೊಳ್ಳುತ್ತೇನೆ ಎಂದು ಅವರು ತಿಳಿಸಿದರು. ಪೊಲೀಸರು ನಡೆಸಿದ ತನಿಖೆಯ ಬಗ್ಗೆ ಮಾತ್ರ ಹೈಕೋರ್ಟ್ ಪ್ರತಿಕ್ರಿಯಿಸಿದೆಯೇ ಹೊರತು ತಮ್ಮ ಹೇಳಿಕೆಗಳ ಬಗ್ಗೆ ಅಲ್ಲ ಎಂದು ಚೆರಿಯನ್ ಹೇಳಿದ್ದಾರೆ.
ನಾನು ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ: "ಈ ಸಂದರ್ಭದಲ್ಲಿ ನೈತಿಕತೆಯ ಪ್ರಶ್ನೆ ಉದ್ಭವಿಸಿಲ್ಲ. ಪೊಲೀಸರು ಈ ವಿಷಯದಲ್ಲಿ ತನಿಖೆ ಮಾಡಿ ಸಲ್ಲಿಸಿದ ವರದಿಯನ್ನು ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಅಂಗೀಕರಿಸಿರುವುದರಿಂದ ನಾನು ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ" ಎಂದು ಅವರು ಪ್ರತಿಪಾದಿಸಿದರು.
ಮತ್ತೊಂದೆಡೆ, ಹೈಕೋರ್ಟ್ ತೀರ್ಪಿನ ಹಿನ್ನೆಲೆಯಲ್ಲಿ ಚೆರಿಯನ್ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಕಾಂಗ್ರೆಸ್ ನೇತೃತ್ವದ ಯುಡಿಎಫ್ ಪ್ರತಿಪಕ್ಷಗಳು ಒತ್ತಾಯಿಸಿವೆ.
ಚೆರಿಯನ್ ಅವರು ತಮ್ಮ ಸಚಿವ ಸ್ಥಾನವನ್ನು ಬಳಸಿಕೊಂಡು ಪ್ರಕರಣದ ತನಿಖೆಯ ಮೇಲೆ ಪ್ರಭಾವ ಬೀರಿದ್ದಾರೆ. ಹೀಗಾಗಿ ಅವರು ರಾಜೀನಾಮೆ ನೀಡಬೇಕು ಅಥವಾ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರನ್ನು ಹುದ್ದೆಯಿಂದ ತೆಗೆದುಹಾಕಬೇಕು ಎಂದು ರಾಜ್ಯ ವಿಧಾನಸಭೆಯ ವಿರೋಧ ಪಕ್ಷದ ನಾಯಕ ವಿ.ಡಿ. ಸತೀಶನ್ ಒತ್ತಾಯಿಸಿದ್ದಾರೆ. ಚೆರಿಯನ್ ಅವರ ಭಾಷಣವು ರಾಜ್ಯದಲ್ಲಿ ರಾಜಕೀಯ ಬಿರುಗಾಳಿಯನ್ನು ಸೃಷ್ಟಿಸಿತ್ತು. ಪ್ರತಿಪಕ್ಷಗಳು ಅವರು ರಾಜೀನಾಮೆ ನೀಡಬೇಕು ಅಥವಾ ಅವರನ್ನು ವಜಾಗೊಳಿಸಬೇಕು ಎಂದು ಒತ್ತಾಯಿಸಿದ್ದವು. ಇದರ ಪರಿಣಾಮವಾಗಿ ಅವರು ಜುಲೈ 6, 2022 ರಂದು ತಮ್ಮ ಕ್ಯಾಬಿನೆಟ್ ಹುದ್ದೆಗಳಿಗೆ ರಾಜೀನಾಮೆ ನೀಡಿದ್ದರು.
ಇದನ್ನೂ ಓದಿ : ಬೆಳೆ ನಾಶಪಡಿಸಿದ್ದನ್ನು ವಿರೋಧಿಸಿದ ಬುಡಕಟ್ಟು ಯುವತಿಯ ಬಾಯಿಗೆ ಮಲ ತಿನ್ನಿಸಿ ದುಷ್ಕೃತ್ಯ!