ಖಮ್ಮಂ, ತೆಲಂಗಾಣ: ತಿರುವನಂತಪುರಂನಿಂದ ದೆಹಲಿಗೆ ತೆರಳುತ್ತಿದ್ದ ಕೇರಳ ಎಕ್ಸ್‌ಪ್ರೆಸ್ ಸೋಮವಾರ ಭಾರಿ ಅಪಘಾತದಿಂದ ಕೂದಲೆಳೆ ಅಂತರದಿಂದ ಪಾರಾಗಿದೆ. ಖಮ್ಮಂ ಜಿಲ್ಲೆಯ ರಘುನಾಥಪಾಲೆಂ ಮಂಡಲದ ಪಾಪತಪಲ್ಲಿ ರೈಲು ನಿಲ್ದಾಣದಲ್ಲಿ ಈ ಘಟನೆ ನಡೆದಿದೆ.
ಪ್ಲಾಟ್‌ಫಾರ್ಮ್‌ನ ಕೊನೆಯಲ್ಲಿ ವೃದ್ಧರಿಗಾಗಿ ನಿರ್ಮಿಸಲಾದ ರ‍್ಯಾಂಪ್ ಬಳಸಿ ವ್ಯಕ್ತಿಯೊಬ್ಬ ತನ್ನ ದ್ವಿಚಕ್ರ ವಾಹನದಲ್ಲಿ ರೈಲು ಹಳಿ ದಾಟಲು ಯತ್ನಿಸಿದ್ದಾನೆ. ಕೇರಳ ಎಕ್ಸ್‌ಪ್ರೆಸ್ (ರೈಲು ಸಂಖ್ಯೆ 12625) ಗಂಟೆಗೆ 100 ಕಿ.ಮೀ ವೇಗದಲ್ಲಿ ತೆರಳುತ್ತಿತ್ತು. ಭಾರಿ ವೇಗದಲ್ಲಿ ರೈಲು ಬರುವುದನ್ನು ಗಮನಿಸಿದ ವ್ಯಕ್ತಿ ತನ್ನ ದ್ವಿಚಕ್ರವಾಹನವನ್ನು ಹಳಿ ಮೇಲೆ ಬಿಟ್ಟು ಪರಾರಿಯಾಗಿದ್ದಾನೆ. ಇದರಿಂದಾಗಿ ಆತನ ಬೈಕ್ ಪುಡಿಪುಡಿಯಾಗಿ ಹಳಿಗಳ ಉದ್ದಕ್ಕೂ ಹರಡಿಕೊಂಡಿದೆ.
ತೀವ್ರ ಘರ್ಷಣೆಯ ನಡುವೆಯೂ ದ್ವಿಚಕ್ರ ವಾಹನದಲ್ಲಿ ಪೆಟ್ರೋಲ್ ಬೆಂಕಿ ಹೊತ್ತಿಕೊಳ್ಳದ ಕಾರಣ ಭಾರಿ ಅನಾಹುತವೊಂದು ತಪ್ಪಿದೆ. ಲೋಕೋ ಪೈಲಟ್, ಕೂಡಲೇ ಈ ಘಟನೆಯನ್ನು ರೈಲ್ವೆ ಪೊಲೀಸರಿಗೆ ತಿಳಿಸಿದ್ದಾರೆ. ಘಟನಾ ಸ್ಥಳಕ್ಕೆ ಆಗಮಿಸಿದ ರೈಲ್ವೆ ಸಿಬ್ಬಂದಿ, ಪರಿಸ್ಥಿತಿಯ ಪರಿಶೀಲನೆ ನಡೆಸಿದರು. ಯಾವುದೇ ಹಾನಿ ಸಂಭವಿಸಿದೆಯೇ ಎಂದು ತಪಾಸಣೆ ನಡೆಸಿ, ಯಾವುದೇ ಹಾನಿಯಾಗಿಲ್ಲ ಎಂಬುದನ್ನು ಖಚಿತ ಪಡಿಸಿಕೊಂಡರು.
ಬೈಕ್ ನೋಂದಣಿ ಸಂಖ್ಯೆಯನ್ನು ಆನ್‌ಲೈನ್‌ನಲ್ಲಿ ಪರಿಶೀಲಿಸಿದಾಗ ಅದು ಧಾರಾವತ್ ವೀರಣ್ಣ ಎಂಬ ವ್ಯಕ್ತಿಗೆ ಸೇರಿದ್ದು ಎಂದು ತಿಳಿದುಬಂದಿದೆ. ಈ ಬಗ್ಗೆ ಅಧಿಕಾರಿಗಳು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.
ಇದನ್ನು ಓದಿ: ರಸ್ತೆ ಬದಿ ಮಲಗಿದ್ದ ಐವರ ಮೇಲೆ ಟ್ರಕ್ ಹರಿದು ಮೂವರ ಸಾವು, ಇನ್ನಿಬ್ಬರ ಸ್ಥಿತಿ ಗಂಭೀರ - 5 PEOPLE CRUSHED BY TRUCK